More

    ಅರಸೀಕೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

    ಅರಸೀಕೆರೆ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಬಂಧನ ಖಂಡಿಸಿ ಶನಿವಾರ ಕರೆ ನೀಡಲಾಗಿದ್ದ ಅರಸೀಕೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

    ಜಿಲ್ಲಾ ಉಪಾಧ್ಯಕ್ಷ ತುಳಿಸಿದಾಸ್, ನಗರಾಧ್ಯಕ್ಷ ಕಿರಣ್‌ಕುಮಾರ್ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ನಗರದ ಬಸವೇಶ್ವವೇಶ್ವರ ವೃತ್ತದಲ್ಲಿ ಜಮಾಯಿಸಿ ಕೆಲ ಕಾಲ ಧರಣಿ ನಡೆಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಕನ್ನಡದ ಬಾವುಟ ಹಿಡಿದು ಬೈಕ್ ರ‌್ಯಾಲಿ ನಡೆಸಿದ ಕಾರ್ಯಕರ್ತರು, ನಾಯಾರಣಗೌಡ ಬಿಡುಗಡೆಗೆ ಆಗ್ರಹಿಸಿದರು. ಜತೆಗೆ ಸರ್ಕಾರದ ನಡೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಬಂದ್ ಹಿನ್ನಲೆಯಲ್ಲಿ ಸಿನಿಮಾ ಮಂದಿರ, ಹೋಟೆಲ್, ದಿನಸಿ ಸೇರಿದಂತೆ ಕೆಲ ಅಂಗಡಿ ಮುಂಗ್ಗಟ್ಟು ಮಧ್ಯಾಹ್ನದವರೆಗೆ ಬಾಗಿಲು ಮುಚ್ಚಿದ್ದು ನಂತರ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ದೃಶ್ಯ ಕಂಡುಬಂದಿತು. ಕೆಲ ಖಾಸಗಿ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳಿಗೆ ಅಘೋಷಿತ ರಜೆ ನೀಡಿದ್ದರೆ, ಸಿಬ್ಬಂದಿ ಕರ್ತವ್ಯದಲ್ಲಿ ತೊಡಗಿದ್ದರು. ಸರ್ಕಾರಿ ಕಚೇರಿಗಳು ಎಂದಿನಂತೆ ಚಟುವಟಿಕೆಯಲ್ಲಿ ತೊಡಗಿದ್ದು, ಎಪಿಎಂಸಿ ಮಾರುಕಟ್ಟಯಲ್ಲಿ ವ್ಯಾಪಾರ ವಹಿವಾಟು ಮುಂದುವರಿದಿತ್ತು. ಹೂ, ಹಣ್ಣು, ತರಕಾರಿ, ಹಾಲು, ಔಷಧ ವ್ಯಾಪಾರಕ್ಕೆ ಯಾವುದೇ ಅಡಚಣೆ ಎದುರಾಗಿರಲಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಮುಂದುವರಿದಿತ್ತು.

    ಬಾಣಾವರ, ಕಣಕಟ್ಟೆ, ಗಂಡಸಿ,ಜಾವಗಲ್ ಹೋಬಳಿ ಕೇಂದ್ರಗಳಲ್ಲಿ ಬಂದ್ ಬಿಸಿ ತಟ್ಟಿರಲಿಲ್ಲ. ಬಸ್, ಆಟೋ ಸೇರಿ ಎಲ್ಲ ಬಗೆಯ ವಾಹನ ಸಂಚಾರ ಸಹಜವಾಗಿತ್ತು. ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಾಗಿಲು ಮುಚ್ಚುವಂತೆ ಕರವೇ ಕಾರ್ಯಕರ್ತರು ಆಗ್ರಹಿಸಿದರು.

    ಕಿಡಿ: ಕನ್ನಡದ ನಾಮ ಫಲಕ ಅಳವಡಿಸುವಂತೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಟಿ.ಎ.ನಾರಾಯಣಗೌಡ ಸೇರಿದಂತೆ ಹಲವರಿಗೆ ಬಂಧನದ ಶಿಕ್ಷೆ ನೀಡಿರುವುದು ದುರದೃಷ್ಟಕರ. ನಾಡು, ನುಡಿ, ಜಲ, ನೈಸರ್ಗಿಕ ಸಂಪತ್ತಿನ ರಕ್ಷಣೆಗೆ ಹೊರಟವರನ್ನು ಕಾನೂನಿನ ಮೂಲಕ ಹತ್ತಿಕ್ಕಲು ಮುಂದಾಗಿರುವುದು ಖಂಡನೀಯ.ಪ್ರಕರಣ ಗಂಭೀರ ಸ್ವರೂಪ ಪಡೆಯುವ ಮನ್ನವೇ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಉಪಾಧ್ಯಕ್ಷ ತುಳಿಸಿದಾಸ್ ಒತ್ತಾಯಿಸಿದರು.

    ಮುಖಂಡರಾದ ಯತೀಶ್, ಖಲಂದರ್, ರೈತಸಂಘದ ಶಿವಮೂರ್ತಿ, ಮಂಜುನಾಥ್,ರಘು ಸೇರಿದಂತೆ ಹಲವರು ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts