More

    ಆಧುನಿಕತೆ ಹೆಸರಿನಲ್ಲಿ ಕಲಬೆರಕೆ ಸಂಗೀತ: ಸಾಹಿತಿ ಡಾ. ದೊಡ್ಡರಂಗೇಗೌಡ ಬೇಸರ, ಸಂಗೀತ- ಸಾಹಿತ್ಯ ಸೇರಿದರೆ ಹಾಲು-ಜೇನಿನ ಸವಿ

    ಬೆಂಗಳೂರು: ಆಧುನಿಕ ಯುಗದಲ್ಲಿ ಸಂಗೀತ ಕ್ಷೇತ್ರದ ಪ್ರವೃತ್ತಿ ಬದಲಾಗುತ್ತಿದೆ. ವಿಶ್ವದ ವಿವಿಧ ಸಂಗೀತಗಳನ್ನು ‘ಕಟ್ ಆಂಡ್ ಪೇಸ್ಟ್’ ಮಾಡಿ ಕಲಬೆರಕೆ ಸಂಗೀತ ಸೃಷ್ಟಿಸಲಾಗುತ್ತಿದೆ ಎಂದು ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

    ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ಸುರಾಗ ಸಂಗೀತ ಅಕಾಡೆಮಿ ಟ್ರಸ್ಟ್ ಬುಧವಾರ ಆಯೋಜಿಸಿದ್ದ ‘ಸುರಾಗ ಸ್ವರನಿಧಿ’ ಪ್ರಶಸ್ತಿ ಪ್ರದಾನ ಹಾಗೂ ‘ಭಾವ ಸುರಾಗ’ ಧ್ವನಿಸಾಂದ್ರಿಕೆ (ಸಂಗೀತ: ರಾಜಶೇಖರ್ ನುಲಿ) ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಭಾರತದ ಇತಿಹಾಸದಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನಮಾನವಿದೆ. ನಮ್ಮದೇ ಭವ್ಯ ಇತಿಹಾಸ ಮರೆತು ಆಧುನಿಕತೆ ಹೆಸರಿನಲ್ಲಿ ಯುವಜನರು ಕಲಬೆರಕೆ ಸಂಗೀತ ಸೃಷ್ಟಿಸುತ್ತಿದ್ದಾರೆ. ಇದು ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎಂದರು. ಸಂಗೀತ ಮತ್ತು ಸಾಹಿತ್ಯ ಸೇರಿದಾಗ ಹೊರಹೊಮ್ಮುವ ಸವಿಗಾನ ಹಾಲು-ಜೇನಿನ ಸವಿಯಂತಿರುತ್ತದೆ. ಕನ್ನಡ ಸಾಹಿತಿಗಳು ಬರೆದ ಕವಿತೆ, ಪದ್ಯಗಳು, ಭಾವಗೀತೆ ಹಾಗೂ ಭಕ್ತಿಗೀತೆಗಳಿಗೆ ಸಿ. ಅಶ್ವತ್ಥ್ ಸೇರಿ ಅನೇಕ ಕಲಾವಿದರು ಸುಗಮ ಸಂಗೀತದ ರೂಪ ಕೊಟ್ಟಿದ್ದಾರೆ. ಅಂದಿನಿಂದ ಕನ್ನಡ ನಾಡಿನಲ್ಲಿ ಸುಗಮ ಸಂಗೀತದ ಹೊಳೆಯೇ ಹರಿಯುತ್ತಿದೆ. ಬೆಂಗಳೂರು ಒಂದರಲ್ಲೇ ಅಂದಾಜು 700ಕ್ಕೂ ಹೆಚ್ಚು ಸುಗಮ ಸಂಗೀತ ಶಾಲೆಗಳು ಆರಂಭವಾಗಿವೆ ಎಂದು ಹೇಳಿದರು.

    ವಿಶಿಷ್ಟ ಗಾಯಕರ ಶ್ರಮದಿಂದಾಗಿ ಸುಗಮ ಸಂಗೀತ ವಿಶ್ವದಾದ್ಯಂತ ಯಶಸ್ವಿಯಾಗಿ ಅನುರುಣಿಸುತ್ತಿದೆ. ಆದರೆ ಇದರಲ್ಲಿ ಹೊಸತನದ ಛಾಯೆ ಅಷ್ಟಾಗಿ ಕಾಣಿಸುತ್ತಿಲ್ಲ. ಸಂಗೀತ ನಿರ್ದೇಶಕರು ಸ್ವಂತಿಕೆ ಮರೆತಿರುವುದೇ ಈ ಸಮಸ್ಯೆಗೆ ಕಾರಣ ಎಂದು ವಿಶ್ಲೇಷಿಸಿದರು.

    ಸುರಾಗ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳು ಹಾಗೂ ಅನೇಕ ಹಿರಿಯ ಗಾಯಕರು ಸುಗಮ ಸಂಗೀತ ಮತ್ತು ಜಾನಪದ ಗೀತೆಗಳನ್ನು ಹಾಡಿದರು. ಸಾಹಿತಿ ಡಾ. ಸಿದ್ದಲಿಂಗಯ್ಯ, ಸಂಗೀತ ನಿರ್ದೇಶಕ ವಿ. ಮನೋಹರ್, ಸಾಹಿತಿ ಪ್ರೊ. ನಾರಾಯಣ ಘಟ್ಟ, ಕಲಾವಿದ ಬಾಗೂರು ಮಾರ್ಕಂಡೇಯ, ಉದ್ಯಮಿ ಸಿ.ಎಸ್. ರಮೇಶ್ ನಾಡಿಗ್, ಸುರಾಗ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ರಾಜಶೇಖರ್ ನುಲಿ, ಗಾಯಕರಾದ ಸುಪ್ರಿಯ ರಘುನಂದನ್, ವಿನಯ್ ನರಸಿಂಹ, ಡಾ. ಆರ್. ನರೇಶ್, ಮಂಜುಳಬಾಬು, ಸ್ನೇಹ ದೊನ್ನಿ ಜಿ. ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

    ಧ್ವನಿತಂತ್ರಜ್ಞ ಓಂಕಾರ್​ಗೆ ಸುರಾಗ ಸ್ವರನಿಧಿ-2020 ಪ್ರಶಸ್ತಿ ಪ್ರದಾನ: ಓಂಕಾರ್ ಸ್ಟುಡಿಯೋ ಮಾಲೀಕ ಹಾಗೂ ನುರಿತ ಧ್ವನಿತಂತ್ರಜ್ಞರಾದ ಬಿ. ಓಂಕಾರ್ ಅವರಿಗೆ ಸುರಾಗ ಸಂಗೀತ ಅಕಾಡೆಮಿ ಟ್ರಸ್ಟ್​ನ ಸುರಾಗ ಸ್ವರ ನಿಧಿ -2020 ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಸಂಗೀತ ನಿರ್ದೇಶಕ ರಾಜಶೇಖರ್ ನುಲಿ ಸ್ವರ ಸಂಯೋಜಿಸಿರುವ ‘ಭಾವ ಸುರಾಗ’ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು.

    ವಿಧಾನಸೌಧದಲ್ಲಿ ಕುಳಿತು ಗಲಾಟೆ ಮಾಡುತ್ತಾ, ಕೂಗಾಡುತ್ತ ಮಾತಿನ ಮೇಲೆ ಹಿಡಿತವಿಲ್ಲದಂತೆ ವರ್ತಿಸುವ ರಾಜಕಾರಣಿಗಳು ಪ್ರತಿದಿನ ಅರ್ಧ ಗಂಟೆ ಸಂಗೀತ ಕೇಳಿದರೆ, ಕಲಹಗಳಿಲ್ಲದೆ ಕಲಾಪ ನಡೆಯುತ್ತದೆ. ಸಂಗೀತ ಸಂಜೀವಿನಿ ಸ್ವರೂಪಿಯಾಗಿದ್ದು, ಅದೊಂದು ಚೈತನ್ಯವಾಗಿದೆ. ಸಂಗೀತ ಕೇಳುವುದರಿಂದ ಮನಸ್ಸು ಶಾಂತವಾಗಿರುತ್ತದೆ.

    | ಡಾ. ದೊಡ್ಡರಂಗೇಗೌಡ ಹಿರಿಯ ಸಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts