More

    ಟ್ರೇಡ್ ಲೈಸೆನ್ಸ್ ದುರುಪಯೋಗ

    ಪುತ್ತೂರು: ನಗರಸಭೆಯಿಂದ ಬೀದಿಬದಿ ವ್ಯಾಪಾರದ ಪರವಾನಗಿ ಪಡೆದು ನಿಯಮ ಉಲ್ಲಂಘಿಸಿ ಪಕ್ಕಾ ಕಚ್ಚಾ ಕಟ್ಟಡ ನಿರ್ಮಿಸಿ ವ್ಯವಹಾರ ನಡೆಸುವ ಪ್ರಕರಣ ಸಂಚಲನ ಮೂಡಿಸಿದೆ.

    ನಗರದಲ್ಲಿ 415 ಬೀದಿಬದಿ ವ್ಯಾಪಾರಿಗಳು ನಗರಸಭೆಯಿಂದ ಟ್ರೇಡ್ ಲೈಸೆನ್ಸ್ ಪಡೆದಿದ್ದಾರೆ. ಲೈಸೆನ್ಸ್ ಆಧಾರದಲ್ಲಿ ಬೀದಿಬದಿ ವ್ಯಾಪಾರಿಗಳು ಶಾಶ್ವತ ಕಟ್ಟಡ ಕಟ್ಟುವಂತಿಲ್ಲ. ತಳ್ಳುಗಾಡಿ ಮೂಲಕ ವ್ಯವಹಾರ ನಡೆಸಬೇಕು. ಅದಕ್ಕಾಗಿ ಸ್ಥಿರ ಮತ್ತು ಸಂಚಾರಿ ಬೀದಿಬದಿ ವ್ಯಾಪಾರಿಗಳಿಗೆ ಗುರುತು ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರ ನೀಡಲಾಗಿದೆ. ಆದರೆ ಪರವಾನಗಿ ಪಡೆದ 50ಕ್ಕೂ ಅಧಿಕ ವ್ಯಾಪಾರಿಗಳು ನಿಯಮ ಉಲ್ಲಂಘಿಸಿದ್ದಾರೆ ಎಂಬ ಮಾಹಿತಿ ‘ವಿಜಯವಾಣಿ’ಗೆ ಲಭ್ಯವಾಗಿದೆ.

    ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿ ವ್ಯವಹಾರ ನಡೆಸುತ್ತಿರುವ 50ಕ್ಕೂ ಅಧಿಕ ಅನಧಿಕೃತ ಕಟ್ಟಡ ಅಧಿಕಾರಿಗಳು ಗುರುತಿಸಿದ್ದಾರೆ. ಈ ಕಟ್ಟಡಗಳೆಲ್ಲವೂ ನಗರಸಭೆಯ ಈ ಹಿಂದಿನ ಆಡಳಿತ ಅವಧಿಯಲ್ಲಿ ನಿರ್ಮಾಣಗೊಂಡಿರುವುದು ಎಂದು ತನಿಖೆಯಿಂದ ತಿಳಿದುಬಂದಿದೆ. ನಗರ ವ್ಯಾಪ್ತಿಯ ದರ್ಬೆ ವೃತ್ತ, ಮುಕ್ರಂಪಾಡಿ, ಕೂರ್ನಡ್ಕ ಪಡೀಲು, ಕೃಷ್ಣನಗರ, ಕೆಮ್ಮಾಯಿ, ಬನ್ನೂರು, ನೆಹರುನಗರ, ಬೊಳುವಾರು, ನಗರದ ಬಸ್ ನಿಲ್ದಾಣ, ಮುಖ್ಯರಸ್ತೆ ಕೋರ್ಟ್ ರಸ್ತೆ ಆಸುಪಾಸುಗಳಲ್ಲಿ ಈಗಾಗಲೇ ನಗರಸಭೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ ಸಂದರ್ಭ ತಳ್ಳುಗಾಡಿಗಳನ್ನು ವಿಸ್ತರಿಸಿ ಪಕ್ಕಾ ಕಚ್ಚಾ ರಚನೆ ಮಾಡಿರುವುದು ಬೆಳಕಿಗೆ ಬಂದಿದೆ.

    ಅಂಗಡಿ-ಹೋಟೆಲ್ ನಿರ್ಮಾಣ: ಪರವಾನಗಿ ಪಡೆದುಕೊಂಡ ಕೆಲವು ವ್ಯಾಪಾರಿಗಳು ಅನಧಿಕೃತ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಕೆಲವರು ತಳ್ಳುಗಾಡಿಯ ಪರವಾನಗಿ ಪಡೆದು ಅಂಗಡಿ, ಹೋಟೆಲ್ ನಿರ್ಮಿಸಿದ್ದಾರೆ. ಇನ್ನೂ ಕೆಲವರು ಹಂಚಿಕೆ ಮಾಡಿ ನೀಡಿರುವ ವ್ಯಾಪಾರವನ್ನು ಇನ್ನೊಬ್ಬರಿಗೆ ನೀಡಿದ್ದಾರೆ. ಇದು ಕಾನೂನು ಬಾಹಿರವಾದ್ದರಿಂದ ನಗರಸಭೆ ಕಾರ್ಯಾಚರಣೆಗೆ ಮುಂದಾಗಿದೆ.

    ಫೆಬ್ರವರಿಯಲ್ಲಿ ಇಒ ಕಾರ್ಯಾಚರಣೆ: ತಾಪಂ ವ್ಯಾಪ್ತಿಗೆ ಸಂಬಂಧಿಸಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಯ ಸುತ್ತಮುತ್ತಲಿನ ನರಿಮೊಗರು, ಮುಕ್ರಂಪಾಡಿ ಮೊದಲಾದೆಡೆ ರಸ್ತೆ ಮಾರ್ಜಿನ್ ಒಳಗಡೆ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ ಕಳೆದ ಫೆಬ್ರವರಿಯಲ್ಲಿ ತಾಪಂ ಇಒ ನವೀನ್ ಭಂಡಾರಿ ನೇತೃತ್ವದಲ್ಲಿ ನಡೆದಿತ್ತು. 57 ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗಿತ್ತು.

    ಬೀದಿಬದಿ ವ್ಯಾಪಾರದ ಪರವಾನಗಿ ಪಡೆದು ಪಕ್ಕಾ- ಕಚ್ಚಾ ಕಟ್ಟಡ ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ. ಅನಧಿಕೃತ ಕಟ್ಟಡ ಮಟ್ಟಹಾಕುವ ಕಾರ್ಯಾಚರಣೆಗೆ ಮುಹೂರ್ತ ನಿಗದಿಯಾಗಿದ್ದು, ಅನಧಿಕೃತ ನಿರ್ಮಾಣಕಾರರಿಗೆ ಸ್ವಯಂ ತೆರವುಗೊಳಿಸಬೇಕು ಎಂದು ನಗರಾಡಳಿತ ಈಗಾಗಲೆ ಸೂಚನೆ ನೀಡಿದೆ. ಇದನ್ನು ಪಾಲಿಸದಿದ್ದರೆ ನಗರಸಭೆ ಮೂಲಕವೇ ನೆಲಸಮಗೊಳಿಸಲು ನಿರ್ಧರಿಸಲಾಗಿದೆ.
    – ಮಧು ಎಸ್. ಮನೋಹರ್, ಪೌರಾಯುಕ್ತರು,
    ಪುತ್ತೂರು ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts