More

    ಭದ್ರಾ ನದಿ ಸ್ವಚ್ಛತೆಗೆ ಚಾಲನೆ

    ಭದ್ರಾ ನದಿ ಸ್ವಚ್ಛತೆಗೆ ಚಾಲನೆ

    ಚಿಕ್ಕಮಗಳೂರು: ಕುದುರೆಮುಖದಿಂದ ಲಕ್ಕವಳ್ಳಿ ಅಣೆಕಟ್ಟೆವರೆಗೆ ಭದ್ರಾ ನದಿ ಸ್ವಚ್ಛತೆ ಮತ್ತು ಜಲಕ್ರೀಡೆಯ ಮಿಷನ್ ಸುಭದ್ರ ವಿಶೇಷ ಸಾಹಸ ಯಾನಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜ ಹಸ್ತಾಂತರಿಸುವ ಮೂಲಕ ಸಚಿವ ಶುಭ ಹಾರೈಸಿದರು.

    15 ದಿನಗಳ ಕಾಲ ನಡೆಯುವ ಮಿಷನ್ ಸುಭದ್ರಾ ಯೋಜನೆಯಡಿ ನಡೆಯುವ ಕುದುರೆಮುಖದ ಭದ್ರಾ ನದಿ ಮೂಲದಿಂದ ಲಕ್ಕವಳ್ಳಿ ಅಣೆಕಟ್ಟೆಯವರೆಗಿನ 150 ಕಿ.ಮೀ. ಅಂತರದ ಕಯಾಕಿಂಗ್ ಮತ್ತು ನದಿ ಸ್ವಚ್ಛತೆ ಮಾಡಲಾಗುವುದು. ಇದರಲ್ಲಿ ಮಹಿಳೆಯರೇ ಭಾಗವಹಿಸುವರು. ತಂಡದಲ್ಲಿ ಆರು ಮಂದಿ ಕಯಾಕಿಂಗ್​ನಲ್ಲಿ ನುರಿತವರಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಎರಡು ತಂಡಗಳಲ್ಲಿ ಒಂದು ತಂಡ ನದಿ ಸ್ವಚ್ಛತೆ ಮತ್ತೊಂದು ಕಯಾಕಿಂಗ್​ನಲ್ಲಿ ತೊಡಗುತ್ತದೆ.

    ಜಿಪಂ ಸಿಇಒ ಎಸ್.ಪೂವಿತಾ, ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಾಹಸಿ ಮಹಿಳೆಯರಾದ ರೇಖಾ ಪ್ರಸಾದ್, ಅರ್ಚನಾ ಜಾಧವ್, ಎಂ.ಎನ್.ವತ್ಸಲಾ ಇದ್ದರು.

    ಮಧುಗಿರಿ, ಜೋಗ್​ಫಾಲ್ಸ್​ಗೂ ತೆರಳಲಿದೆ ತಂಡ:

    ಭದ್ರಾ ನದಿ ಸ್ವಚ್ಛತಾ ಕಾರ್ಯದ ಬಳಿಕ ತುಮಕೂರು ಜಿಲ್ಲೆಯ 3122 ಅಡಿ ಎತ್ತರದ ಮಧುಗಿರಿ ಬೆಟ್ಟದ ಶಿಲಾರೋಹಣ ಹೊಸ ಮಾರ್ಗ ಆರಂಭಿಸಲಾಗುವುದು. ಆನಂತರ ಶಿವಮೊಗ್ಗ ಜಿಲ್ಲೆ ಜೋಗ್​ಫಾಲ್ಸ್ ಆರೋಹಣಕ್ಕೆ ಹೊಸ ಹಾದಿ ಅನ್ವೇಷಣೆ ಮತ್ತು ಸ್ವಚ್ಛತಾ ಅಭಿಯಾನ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಕೈಗೊಳ್ಳಲಿದೆ.

    ಮೂವರ ನೇತೃತ್ವ: ಭದ್ರಾ ನದಿ ಸ್ವಚ್ಛತೆ ಮತ್ತು ಮಿಷನ್ ಸುಭದ್ರ ವಿಶೇಷ ಸಾಹಸ ಯಾನ, ಮಧುಗಿರಿ ಬೆಟ್ಟದ ಶಿಲಾರೋಹಣ, ಜೋಗ್​ಫಾಲ್ಸ್ ಆರೋಹಣಕ್ಕೆ ಹೊಸ ಮಾರ್ಗ ಅನ್ವೇಷಣೆಯ ಮೂರೂ ಚಟುವಟಿಕೆಯಲ್ಲಿ ಸಾಹಸ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಹೆಸರುವಾಸಿ ಮಹಿಳೆಯರಾಗಿರುವ ರೇಖಾ ಪ್ರಸಾದ್, ಅರ್ಚನಾ ಜಾಧವ್ ಮತ್ತು ಎಂ.ಎನ್.ವತ್ಸಲಾ ನೇತೃತ್ವ ವಹಿಸಲಿದ್ದಾರೆ. ಇವರ ಜತೆ ಆಯಾ ಜಿಲ್ಲೆಗಳ ಆಯ್ದ ಸಾಹಸಿ ಯುವತಿಯರು, ರಾಷ್ಟ್ರೀಯ ಸ್ವಯಂ ಸೇವಕರು ಹಾಗೂ ಅಕಾಡೆಮಿಯ ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ.

    ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ನಿರ್ವಹಣೆ: ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು 1989ರಿಂದಲೂ ಸಾಹಸಿಗಳ ತಂಡ ಕಟ್ಟುವಲ್ಲಿ ಯಶಸ್ವಿಯಾಗಿದೆ. ಸದ್ಯ ಮಿಷನ್ ಸುಭದ್ರ ಯೋಜನೆ ಮೂಲಕ ಸಾಹಸ ಪ್ರದರ್ಶಿಸಲು ಮುಂದಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.

    ನದಿ ಸ್ವಚ್ಛತೆ ಮತ್ತು ಸಾಹಸ ಯಾನದಲ್ಲಿ ಪಾಲ್ಗೊಳ್ಳುತ್ತಿರುವವರೆಲ್ಲರೂ ಹೆಣ್ಣು ಮಕ್ಕಳೇ ಆಗಿದ್ದು, ಮಹಿಳೆಯರು ಆತ್ಮವಿಶ್ವಾಸದಲ್ಲಿ ಯಾರಿಗೂ ಕಡಿಮೆ ಇಲ್ಲ. ಧೈರ್ಯದಲ್ಲಿ ಪುರುಷರಿಗಿಂತಲೂ ಒಂದು ಕೈ ಮಿಗಿಲು ಎನ್ನುವುದನ್ನು ನಿರೂಪಿಸಿದ್ದಾರೆ. ನದಿ ಸ್ವಚ್ಛತೆ ಕಾರ್ಯದಲ್ಲಿ ರಕ್ಷಣಾ ವಿಚಾರದಲ್ಲಿ ಯಾವುದೇ ಕೊರತೆ ಆಗಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಚಿಕ್ಕಮಗಳೂರು ಹಬ್ಬದ ಪ್ರಯುಕ್ತ ನಗರದಲ್ಲಿ ಏರ್ಪಡಿಸಿದ್ದ ಜಲಸಾಹಸ ಕ್ರೀಡೆ ಹತ್ತನೇ ದಿನಕ್ಕ್ಕೆ ಮುಂದುವರಿದಿದ್ದು, ಇದನ್ನೂ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯೇ ನಿರ್ವಹಿಸುತ್ತಿದೆ. ಮಹಿಳಾ ದಿನಾಚರಣೆ ಪ್ರಯುಕ್ತ ಭಾನುವಾರ ಮಹಿಳೆಯರಿಗೆ ಉಚಿತವಾಗಿ ಜಲಸಾಹಸ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಲಹೆಗಾರ ಕೀರ್ತಿ ಪಯಾಸ್ ಮಾತನಾಡಿ, ನದಿ ಸ್ವಚ್ಛತೆ ಮತ್ತು ಜಲಕ್ರೀಡೆಯ ಮಿಷನ್ ಸುಭದ್ರ ವಿಶೇಷ ಸಾಹಸ ಯಾನದಲ್ಲಿ ವಸತಿಗಾಗಿ ಅಲ್ಲಲ್ಲಿ ಹೋಂಸ್ಟೇ ಮತ್ತಿತರೆ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts