More

    ಅವಳಿ ಜಿಲ್ಲೆಗಳಿಗೆ ತ್ರಿವಳಿ ಸಚಿವಗಿರಿ

    ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ
    ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಮೀರಿ ಕೋಟ ಶ್ರೀನಿವಾಸ ಪೂಜಾರಿ ಮೂರನೇ ಬಾರಿ ಹಾಗೂ ಎಸ್.ಅಂಗಾರ ಎರಡನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಇದೇ ಮೊದಲ ಬಾರಿಗೆ ಮಂತ್ರಿ ಮಂಡಲ ಸೇರ್ಪಡೆಯಾಗಿದ್ದಾರೆ.

    ಈ ಬಾರಿ ಮಂತ್ರಿಮಂಡಲ ಬರ್ಖಾಸ್ತುಗೊಂಡು ಹೊಸದಾಗಿ ರಚನೆಯಾಗುವಾಗ ಕೋಟ-ಅಂಗಾರರಿಗೆ ಮತ್ತೆ ಸಚಿವ ಸ್ಥಾನ ಸಿಗುವುದು ಪಕ್ಕಾ ಇರಲಿಲ್ಲ. ಅದರಲ್ಲೂ ಕೋಟ ಅವರಿಗೆ ಸಚಿವ ಸ್ಥಾನ ನಷ್ಟವಾಗುವುದು ಬಹುತೇಕ ನಿಶ್ಚಿತ ಎನ್ನಲಾಗಿತ್ತು. ಆದರೆ ಇಬ್ಬರನ್ನೂ ಮುಂದುವರಿಸುವುದಕ್ಕೆ ಹೈಕಮಾಂಡ್ ಒಲವು ತೋರಿದೆ.

    ಒಂದೇ ವರ್ಷದಲ್ಲಿ ಎರಡು ಬಾರಿ!: ಮೀಸಲು ಕ್ಷೇತ್ರದಲ್ಲಿ ಸತತ 6 ಬಾರಿ ಶಾಸಕರಾದರೂ ಅದುವರೆಗೆ ಒಲಿಯದ ಸಚಿವ ಸ್ಥಾನ, ಅದಾಗಿ ಒಂದೇ ವರ್ಷದಲ್ಲಿ ಎರಡೆರಡು ಬಾರಿ ಸಚಿವರಾಗಿ ಪ್ರಮಾಣವಚನದ ಅವಕಾಶ ಲಭಿಸಿದ್ದು ಅಂಗಾರರಿಗೆ. ಇದು ಅವರ ವಿಶಿಷ್ಟ ದಾಖಲೆ. ಕಳೆದ ಅವಧಿಯಲ್ಲಿ ಅವರು ಮೀನುಗಾರಿಕೆ ಹಾಗೂ ಬಂದರು ಸಚಿವರಾಗಿದ್ದರು. ಸಜ್ಜನ, ತಮ್ಮ ಶಾಲಿಗೆ ತಾವೇ ಇಸ್ತ್ರಿ ಹಾಕುವ ಸರಳ ಶಾಸಕ ಎಂದೇ ಜನಪ್ರಿಯರಾದ ಅಂಗಾರ 1994ರ ಬಳಿಕ ನಿರಂತರ ಜಯ ಸಾಧಿಸುತ್ತ ಬಂದಿರುವ ದ.ಕ ಜಿಲ್ಲೆಯ ಏಕೈಕ ಶಾಸಕ.
    ಬಿಜೆಪಿ ಸರ್ಕಾರದಲ್ಲಿ ಈ ಹಿಂದೆ ದ.ಕ ಜಿಲ್ಲೆಯ ಬಿ.ನಾಗರಾಜ ಶೆಟ್ಟಿ(ಬಂಟ್ವಾಳ) ಮತ್ತು ಕೃಷ್ಣ ಜೆ.ಪಾಲೆಮಾರ್(ಮಂಗಳೂರು ಉತ್ತರ) ಸಚಿವರಾಗಿದ್ದರು. ಎಸ್.ಅಂಗಾರ ಬಿಜೆಪಿಯ ಮೂರನೇ ಸಚಿವರು. ಸುಳ್ಯ ಕ್ಷೇತ್ರ ಹೊರತುಪಡಿಸಿ ಜಿಲ್ಲೆಯ ಉಳಿದ ಕ್ಷೇತ್ರಗಳಿಗೆ ಈ ಹಿಂದೆ ಸಚಿವ ಸ್ಥಾನ ಲಭಿಸಿತ್ತು.

    ಸುಳ್ಯದಲ್ಲಿ ಸಂಭ್ರಮದ ವಾತಾವರಣ: ಸುಳ್ಯ: ಅಂಗಾರ ಮತ್ತೆ ಸಚಿವರಾಗಿರುವುದು ಬಿಜೆಪಿ ಕಾರ್ಯಕರ್ತರು, ಜನತೆಯಲ್ಲಿ ಸಂತಸ ಮನೆಮಾಡಿದೆ. ಕೋವಿಡ್ ಕಾರಣದಿಂದ ಹೇಳಿಕೊಳ್ಳುವಂತಹ ವಿಜಯೋತ್ಸವ ಇಲ್ಲದಿದ್ದರೂ ಕಾರ್ಯಕರ್ತರು ಅಲ್ಲಲ್ಲಿ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.

    ಅಂಗಾರರ ಪತ್ನಿ ವೇದಾವತಿ ಗೃಹಿಣಿ. ಮಗ ಗೌತಮ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರೈಸಿದ್ದಾರೆ. ಮಗಳು ಪೂಜಾಶ್ರೀ ಆಯುರ್ವೇದಿಕ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿಜಯವಾಣಿ ಜೊತೆ ಮಾತನಾಡಿದ ಮಗ ಗೌತಮ್, ಸಹಜವಾಗಿ ಖುಷಿಯಾಗಿದೆ; ನಮಗೆ ನಿರೀಕ್ಷೆಯೇನೂ ಇರಲಿಲ್ಲ. ಈ ಹಿಂದೆ ಸುದೀರ್ಘ ಕಾಲ ಶಾಸಕರಾದರೂ ಸಚಿವ ಸ್ಥಾನ ಸಿಗದ ಬಗ್ಗೆ ಅಪ್ಪನಿಗೆ, ನಮಗೆ ಬೇಸರವೇನೂ ಇರಲಿಲ್ಲ. ಜನರು ಅವರನ್ನು ಸಚಿವರಾಗಿ ನೋಡಲು ಬಯಸಿದ್ದರು. ಈಗ ಜನರಿಚ್ಛೆಯಂತೆ ಮತ್ತೆ ಮಂತ್ರಿ ಸ್ಥಾನ ದೊರಕಿದ ಬಗ್ಗೆ ಖುಷಿಯಾಗಿದೆ ಎಂದಿದ್ದಾರೆ.

    ಎರಡನೇ ಬಾರಿ ಸಚಿವನಾದ ಬಗ್ಗೆ ಖುಷಿ ಇದೆ. ಪಕ್ಷ ನನ್ನ ಮೇಲೆ ನಂಬಿಕೆ ಇರಿಸಿ ಅವಕಾಶ ಕಲ್ಪಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಯಾವುದೇ ಖಾತೆ ಸಿಕ್ಕಿದರೂ ನಂಬಿಕೆಗೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆಂಬ ಆತ್ಮವಿಶ್ವಾಸ ನನ್ನಲ್ಲಿದೆ.
    – ಎಸ್.ಅಂಗಾರ, ಸಚಿವ

    ಉಡುಪಿ ಜಿಲ್ಲೆಗೆ ಎರಡು ಸಚಿವ ಸ್ಥಾನ: ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸಂಪುಟದಲ್ಲಿ ಇಬ್ಬರಿಗೆ (ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್) ಸಚಿವ ಸ್ಥಾನ ಸಿಗುವ ಮೂಲಕ ಉಡುಪಿ ಜಿಲ್ಲೆಗೆ ಬಂಪರ್ ಹೊಡೆದಂತಾಗಿದೆ. ಇದೇ ಮೊದಲ ಬಾರಿಗೆ ಒಂದೇ ಸಮುದಾಯದ ಪ್ರಭಾವಿ ನಾಯಕರಿಬ್ಬರು ಸಚಿವರಾಗಿದ್ದಾರೆ.
    ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಕೊನೆಗೂ ಸಚಿವರಾಗುವ ಭಾಗ್ಯ ಒಲಿದು ಬಂದಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಎರಡನೇ ಬಾರಿ ಸಚಿವ ಸ್ಥಾನ ಲಭಿಸಿದೆ. ಈ ಹಿಂದೆ ವೀರಪ್ಪ ಮೊಯ್ಲಿ ಸಚಿವರಾಗಿ, ಮುಖ್ಯಮಂತ್ರಿಯಾಗಿದ್ದರು. ಉಡುಪಿ ಜಿಲ್ಲೆಯಲ್ಲಿ ಮನೋರಮಾ ಮಧ್ವರಾಜ್, ವಿ.ಎಸ್. ಆಚಾರ್ಯ, ಜಯಪ್ರಕಾಶ್ ಹೆಗ್ಡೆ, ವಸಂತ್ ಸಾಲ್ಯಾನ್, ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಕೋಟ ಶ್ರೀನಿವಾಸ ಪೂಜಾರಿ ಮಂತ್ರಿಗಳಾಗಿದ್ದ ಇತರರು.

    ಸುನೀಲ್ ಕುಮಾರ್ ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿಯೇ ಸಚಿವರಾಗಬೇಕಿತ್ತು. ಕೊನೇ ಕ್ಷಣದಲ್ಲಿ ಕೈತಪ್ಪಿತ್ತು. ಪಕ್ಷ ಸಂಘಟನೆಯಲ್ಲಿ ಸುನೀಲ್ ಕುಮಾರ್ ಚಾಣಾಕ್ಷ ನಾಯಕ. ರಾಷ್ಟ್ರೀಯವಾದಿ, ಹಿಂದುತ್ವಪರ ನಿಲುವು ಹೊಂದಿರುವ ಅವರು ಈ ಸಂಬಂಧ ಹಲವು ಹೋರಾಟಗಳನ್ನು ಸಂಘಟಿಸಿದವರು. ಒಂದೂವರೆ ವರ್ಷದಲ್ಲಿ ವಿಧಾನಸಭೆ ಚುನಾವಣೆ ಗಮನದಲ್ಲಿರಿಸಿಕೊಂಡು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕಿರುವ ಉದ್ದೇಶದಿಂದ ಸುನೀಲ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂಬ ಅಭಿಪ್ರಾಯವಿದೆ.
    ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದು, ಬಜರಂಗ ದಳದ ರಾಜ್ಯಾಧ್ಯಕ್ಷರಾಗಿ ದತ್ತಪೀಠ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು 2004ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 2013 ಮತ್ತು 2018ರಲ್ಲೂ ಜಯಿಸಿದ್ದಾರೆ. ವಿಧಾನಸಭೆಯ ಬಿಜೆಪಿ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದರು.

    ತಳಮಟ್ಟದಿಂದ ಬೆಳೆದುಬಂದ ನಾಯಕ: ಕೋಟ ಶಿವರಾಮ ಕಾರಂತ ಅವರಿಂದ ಪ್ರಭಾವಿತರಾಗಿ, ಡಾ.ವಿ.ಎಸ್.ಆಚಾರ್ಯ ಗರಡಿಯಲ್ಲಿ ಪಳಗಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸರಳ ಮತ್ತು ಪ್ರಾಮಾಣಿಕ ರಾಜಕಾರಣಿ ಎಂದೇ ಜನಜನಿತ.

    ಕೃಷಿಕ ಕುಟುಂಬದಿಂದ ಬಂದ ಅವರು ಸಾಮಾನ್ಯ ಫೋಟೋಗ್ರಾಫರ್ ಆಗಿ ವೃತ್ತಿಜೀವನ ಆರಂಭಿಸಿ ಆರೆಸ್ಸೆಸ್ ಕಾರ್ಯಕರ್ತನಾಗಿ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯನಾಗಿ ಬಿಜೆಪಿಯಲ್ಲಿ ತಳಮಟ್ಟದಿಂದ ಬೆಳೆದು ಬಂದ ನಾಯಕ. ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಪ್ರಾತಿನಿಧಿಕ ಕ್ಷೇತ್ರದಿಂದ (ಉಡುಪಿ ಮತ್ತು ದಕ್ಷಿಣ ಕನ್ನಡ) ವಿಧಾನ ಪರಿಷತ್ ಸದಸ್ಯರಾಗಿ 3 ಬಾರಿ ಆಯ್ಕೆಯಾಗಿದ್ದಾರೆ. ಈ ಹಿಂದಿನ ಎರಡು ಅವಧಿಯಲ್ಲಿ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು, ಹಿಂದುಳಿದ ವರ್ಗಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

    2008ರಲ್ಲಿ ಪ್ರಥಮ ಬಾರಿಗೆ ವಿಧಾನ ಪರಿಷತ್ ಸದಸ್ಯರಾದ ಪೂಜಾರಿ 2012ರಲ್ಲಿ ಮುಜರಾಯಿ ಸಚಿವರಾದರು. 2016ರಲ್ಲಿ ಮತ್ತೆ ವಿಧಾನ ಪರಿಷತ್‌ಗೆ ಪುನರಾಯ್ಕೆಗೊಂಡು 2018ರಲ್ಲಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯರಾದರು. 2019ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಧಾರ್ಮಿಕ ದತ್ತಿ, ಮೀನುಗಾರಿಕೆ, ಒಳನಾಡು ಬಂದರು ಮತ್ತು ಜಲಸಾರಿಗೆ ಸಚಿವರಾಗಿ ನಿಯುಕ್ತರಾದರು. ಖಾತೆ ಬದಲಾವಣೆ ಸಂದರ್ಭ ಧಾರ್ಮಿಕ ದತ್ತಿ ಇಲಾಖೆ ಜತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

    ಹುಟ್ಟೂರಲ್ಲಿ ಪಟಾಕಿ ಸಿಡಿಸಿ ಸಂಭ್ರಮ: ಕೋಟ: ಕೋಟ ಶ್ರೀನಿವಾಸ ಪೂಜಾರಿ ಮೂರನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹುಟ್ಟೂರಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

    ಕೋಟ ಅವರ ಸ್ವಗೃಹದಲ್ಲಿ ಪತ್ನಿ ಶಾಂತಾ, ಪುತ್ರಿಯರಾದ ಸ್ವಾತಿ, ಶ್ರುತಿ ಹಾಗೂ ಅವರ ಭಾವ ಬಸವ ಸಂಭ್ರಮದಲ್ಲಿ ಪಾಲ್ಗೊಂಡಿದ್ದರೆ, ಇತ್ತ ಅವರ ಮೂಲ ಮನೆಯಲ್ಲಿ 94 ವರ್ಷದ ತಾಯಿ ಲಚ್ಚಿ, ಸಹೋದರಿ ಕಮಲ, ಅಳಿಯ ರಾಘವೇಂದ್ರ ಪೂಜಾರಿ, ಅಭಿಮಾನಿಗಳಾದ ಮನೋಹರ, ಸಂತೋಷ್ ಪ್ರಭು, ಚಂದ್ರ ಪೂಜಾರಿ, ಗೋಪಾಲ್ ಪೈ ಸಿಹಿ ಹಂಚಿ ಸಂಭ್ರಮಿಸಿದರು.

    ಪತ್ನಿ ಶಾಂತಾ ಮಾತನಾಡಿ, ಇಂದು ಬಹಳ ಸಂತೋಷದ ದಿನ. ಪ್ರಮಾಣವಚನ ಸ್ವೀಕಾರ ಸಂದರ್ಭ ಭಾಗವಹಿಸಲು ಆಗಲಿಲ್ಲ, ಹಲವು ದಶಕಗಳ ರಾಜಕಾರಣದಲ್ಲಿ ಅವರು ಜನರೊಂದಿಗೆ ಸರಳವಾಗಿದ್ದು, ಬೆರೆತು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಾಗಿದ್ದಾರೆ. ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರಿಗೆ ಸಿಕ್ಕ ಅವಕಾಶದಲ್ಲಿ ರಾಜ್ಯದಲ್ಲೇ ಮುಂಚೂಣಿಗೆ ನಿಲ್ಲುವ ಕಾರ್ಯನಿರ್ವಹಿಸಲಿದ್ದಾರೆ ಎಂದರು.

    ವಿದ್ಯುತ್ ಮಾಯ: ಪುತ್ರನ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಬುಧವಾರ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲ ಮನೆಯಲ್ಲಿ ತಾಯಿ ಲಚ್ಚಿ ಕಾತರದಿಂದ ಕಾಯುತ್ತಿದ್ದರು. ಆದರೆ ಅದೇ ಸಂದರ್ಭ ಗಾಳಿ ಮಳೆಯಿಂದ ವಿದ್ಯುತ್ ಕೈಕೊಟ್ಟಿತು. ಪ್ರಮಾಣವಚನ ಸ್ವೀಕರಿಸುವ ಸಂದರ್ಭ ವಿದ್ಯುತ್ ಬಂದಿದ್ದು ತಾಯಿಗೆ ಅತೀವ ಸಂತೋಷ ತಂದುಕೊಟ್ಟಿತು.

    ಸ್ವಜಿಲ್ಲೆಯವರೇ ಉಸ್ತುವಾರಿ?: ಹಿಂದಿನ ಸರ್ಕಾರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅಂಗಾರ ಸಚಿವರಾದಾಗ ಅವರಿಗೆ ಜಿಲ್ಲಾ ಉಸ್ತುವಾರಿ ಕೊಡುವ ನಿರೀಕ್ಷೆ ಇದ್ದರೂ ಕೋಟ ಅವರನ್ನೇ ಮುಂದುವರಿಸಿ, ಅಂಗಾರರಿಗೆ ಚಿಕ್ಕಮಗಳೂರು ಜವಾಬ್ದಾರಿ ವಹಿಸಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಬಸವರಾಜ ಬೊಮ್ಮಾಯಿಯವರೇ ಉಸ್ತುವಾರಿಯಾಗಿದ್ದರು. ಈಗ ಹೊಸ ಸಂಪುಟದಲ್ಲಿ ದ.ಕ. ಜಿಲ್ಲೆಗೆ ಅಂಗಾರ, ಉಡುಪಿ ಜಿಲ್ಲೆಗೆ ಸುನೀಲ್ ಅವರಿಗೆ ಉಸ್ತುವಾರಿ ನೀಡುವ ಸಾಧ್ಯತೆ ಇದೆ. ಇದರ ಪೂರ್ವಭಾವಿಯಾಗಿ, ಸಂಪುಟ ರಚನೆಯ ಬೆನ್ನಿಗೆ ಕೋವಿಡ್ ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ ಕಾರ್ಯಗಳ ಪರಿಶೀಲನೆಗಾಗಿ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ ವಹಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಎಸ್.ಅಂಗಾರ, ಉಡುಪಿ ಜಿಲ್ಲೆಗೆ ಸುನೀಲ್ ಕುಮಾರ್ ಹಾಗೂ ಕೊಡಗು ಜಿಲ್ಲೆಗೆ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನಿಯೋಜಿಸಲಾಗಿದೆ.

    ನಾಳೆ ನೂತನ ಸಚಿವರಿಗೆ ಅಭಿನಂದನೆ: ನೂತನ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ ಮತ್ತು ವಿ.ಸುನೀಲ್ ಕುಮಾರ್ ಅವರ ಅಭಿನಂದನಾ ಸಮಾರಂಭ ಆ.6ರಂದು ಮಧ್ಯಾಹ್ನ 3.30ಕ್ಕೆ ಉಡುಪಿ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಜರುಗಲಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದ ಪೂರ್ವಭಾವಿಯಾಗಿ ನೂತನ ಸಚಿವರನ್ನು ಮಧ್ಯಾಹ್ನ 2.30ಕ್ಕೆ ಹಿರಿಯಡ್ಕ ಪೇಟೆಯಲ್ಲಿ ಕಾಪು ಮಂಡಲ ವತಿಯಿಂದ ಹಾಗೂ 2.45ಕ್ಕೆ ಪರ್ಕಳ ಪೇಟೆಯಲ್ಲಿ ಉಡುಪಿ ನಗರ ಮಂಡಲ ವತಿಯಿಂದ ಸ್ವಾಗತಿಸಲಾಗುತ್ತದೆ. ಸಚಿವರು ಸಾಯಂಕಾಲ 5.30ಕ್ಕೆ ಶ್ರೀ ಕೃಷ್ಣ ಮಠ, 6ಕ್ಕೆ ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಹಾಲಾಡಿಗೆ ಈ ಬಾರಿಯೂ ಸಿಗಲಿಲ್ಲ: ಕುಂದಾಪುರ: ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಈ ಬಾರಿಯೂ ಸುಳ್ಳಾಗಿದೆ. ಸಚಿವ ಸ್ಥಾನಕ್ಕಾಗಿ ಯಾರಿಗೂ ದುಂಬಾಲು ಬೀಳುವುದಿಲ್ಲ ಎಂದು ಹಾಲಾಡಿ ಮೊದಲೇ ಹೇಳಿಕೆ ನೀಡಿದ್ದರು.
    ಅವರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆ ಬೆಂಬಲಿಗರು ಬುಧವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಮುಂದೆ ಗುಲಾಬಿ ಹೂ ಹಿಡಿದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಇದಕ್ಕೆ ಹಾಲಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಬರುವಾಗ ಏನೂ ತಂದಿಲ್ಲ. ಹೋಗುವಾಗಲೂ ಬರಿಗೈಲಿ ಹೋಗುವವನು. ನನ್ನ ಪರವಾಗಿ ಪ್ರತಿಭಟನೆ ಮಾಡುವುದು ಧರ್ಮವಲ್ಲ. ಸಮಾಜದ ಒಳಿತಿಗಾಗಿ ಮಾತ್ರ ಪ್ರತಿಭಟನೆ ನಡೆಸಬೇಕು ಎಂದು ತಿಳಿಸಿದ್ದಾರೆ. ಸಚಿವ ಸ್ಥಾನ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts