More

    16 ದನ ಕಳವಾದ ಕುಟುಂಬಕ್ಕೆ ಸಚಿವರು, ಹಿಂದು ಸಂಘಟನೆಗಳಿಂದ ಗೋ ದಾನ

    ಕಾರ್ಕಳ: ಹೈನುಗಾರಿಕೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಮಿಯ್ಯರು ಕಜೆಯ ಯಶೋದಾ ಆಚಾರ್ಯ ಕುಟುಂಬಕ್ಕೆ ಆಸರೆಯಾಗಿದ್ದ 16 ದನಗಳು ಒಂದೇ ವರ್ಷದಲ್ಲಿ ಗೋಹಂತಕರ ಪಾಲಾಗಿವೆ. ಇದರಿಂದ ವಿಚಲಿತರಾದ ಆ ಕುಟುಂಬಕ್ಕೆ ಸಚಿವ ವಿ.ಸುನೀಲ್ ಕುಮಾರ್, ವಿಶ್ವ ಹಿಂದು ಪರಿಷತ್ ಹಾಗೂ ಇತರ ಸಂಘಟನೆಗಳು ಗೋವುಗಳನ್ನು ದಾನ ಮಾಡಿವೆ.
    ಗುರುವಾರ ತಡರಾತ್ರಿ ಕರಿಯಕಲ್ಲು ಕಜೆಯಲ್ಲಿ ಯಶೋದಾ ಆಚಾರ್ಯರ ಹಟ್ಟಿಯಲ್ಲಿದ್ದ ತುಂಬು ಗಬ್ಬದ ಹಸುವನ್ನು ಕಟುಕರು ಕದ್ದಿದ್ದರು. ಇದರೊಂದಿಗೆ ಒಂದು ವರ್ಷದಲ್ಲಿ ಕಳವು ಆಗಿರುವ ಗೋವುಗಳ ಸಂಖ್ಯೆ 16 ಆಗಿತ್ತು. ಇದರ ಮೌಲ್ಯ ಸುಮಾರು 5 ಲಕ್ಷ ರೂಪಾಯಿ. ಈ ಕುರಿತು ಯಶೋದಾ ವಿವಿಧ ಸಂಘಟನೆಗಳಲ್ಲಿ ನೋವು ತೋಡಿಕೊಂಡಿದ್ದು, ವಿಜಯವಾಣಿ ವರದಿ ಪ್ರಕಟಿಸಿತ್ತು. ಕುಟುಂಬದ ನೋವಿಗೆ ಸ್ಪಂದಿಸಿದ ಸಚಿವ ಸುನೀಲ್‌ಕುಮಾರ್ ಮಂಗಳವಾರ ಭೇಟಿ ನೀಡಿ 2 ಹಸು ಹಾಗೂ ಒಂದು ಕರು ದಾನ ರೂಪದಲ್ಲಿ ನೀಡಿ, ಯಶೋದಾ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
    ವಿಶ್ವ ಹಿಂದು ಪರಿಷತ್ ಮುಖಂಡ ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್, ಬಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್. ನೇತೃತ್ವದಲ್ಲಿ ಕಾರ್ಯಕರ್ತರು ಮನೆಗೆ ತೆರಳಿ ಒಂದು ದನ ಹಾಗೂ ಕರು ದಾನ ಮಾಡಿ, ಆತ್ಮವಿಶ್ವಾಸ ಮೂಡಿಸಿದ್ದಾರೆ.

    ಪಕ್ಕದ ಮನೆಯಲ್ಲೂ 12 ಹಸು ಕಳವು: ಯಶೋದಾ ಆಚಾರ್ಯರ ಮನೆಯ ಸ್ವಲ್ಪ ದೂರದಲ್ಲಿ ಇರುವ ಸುಧಾಕರ ಶೆಟ್ಟಿ ಅವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಲಾಗಿರುವ ದನಗಳನ್ನೂ ಕಳ್ಳರು ಕದ್ದಿದ್ದಾರೆ. ಒಂದು ವರ್ಷದಲ್ಲಿ ಈ ಮನೆಯ ಹಟ್ಟಿಯಿಂದ ಕಟುಕರು 12 ಹಸುಗಳನ್ನು ಕದ್ದು ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
    ನಿಟ್ಟೆಯಲ್ಲೂ ಹಟ್ಟಿಗೆ ನುಗ್ಗಿದರು!: ನಿಟ್ಟೆ ಗ್ರಾಮದ ಲೆಮಿನಾ ಕ್ರಾಸ್ ದರ್ಖಾಸು ಮನೆಯ ರಾಜೇಶ್ ಆಚಾರ್ಯ ಎಂಬುವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ ಐದು ದನಗಳನ್ನು ಸೋಮವಾರ ಕಳವು ಮಾಡಲಾಗಿದೆ. ಹರಿತ ಆಯುಧದಿಂದ ಹಗ್ಗ ತುಂಡರಿಸಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts