More

    ಸಾಗುವಳಿ ಮಾಡುವ ರೈತರ ಹೆಸರಿಗೆ ಖಾತಾ

    ಧಾರವಾಡ: ಧಾರವಾಡ, ಅಳ್ನಾವರ ಮತ್ತು ಕಲಟಗಿ ತಾಲೂಕುಗಳಲ್ಲಿ ಸರ್ಕಾರಿ ಜಮೀನನ್ನು ನಿರ್ದಿಷ್ಟ ಅವಧಿಗೆ ಗುತ್ತಿಗೆ ಪಡೆದು ರೈತರಿಗೆ ಉಳುಮೆ ಮಾಡಲು ಫಾರ್ಮಿಂಗ್ ಸೊಸೈಟಿಗಳು ನೀಡಿದ್ದ ಭೂಮಿಯನ್ನು ಸಾಗುವಳಿ ಮಾಡುವ ರೈತರ ಹೆಸರಿಗೆ ಖಾತಾ ಮಾಡಲು ನಿಯಮಾವಳಿ ಪ್ರಕಾರ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
    ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಫಾರ್ಮಿಂಗ್ ಸೊಸೈಟಿ ಜಮೀನನ್ನು ಸಾಗುವಳಿದಾರರಿಗೆ ಮಂಜೂರಾತಿ ಕುರಿತು ರೈತರು ಹಾಗೂ ಅಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಫಾರ್ಮಿಂಗ್ ಸೊಸೈಟಿಗಳಿಗೆ ಸರ್ಕಾರಿ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಕೃಷಿ ಕಾರ್ಯಗಳಿಗೆ ಬಳಸಲು ಸರ್ಕಾರ ಜಮೀನು ಮಂಜೂರು ಮಾಡಿತ್ತು. ಈಗ ಸೊಸೈಟಿಗಳು ಅಸ್ತಿತ್ವ ಕಳೆದುಕೊಂಡಿವೆ. ಸಾಗುವಳಿ ಮಾಡುತ್ತಿದ್ದ ರೈತರೆ ಆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಅಂಥ ರೈತರ ಹೆಸರಿಗೆ ಜಮೀನಿನ ಮಾಲೀಕತ್ವ ನೀಡಲು ತಿರ್ಮಾನಿಸಲಾಗಿದೆ ಎಂದರು.
    ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆಯಾಗಿದ್ದು, ಪರಿಶೀಲನೆಯ ಹಂತದಲ್ಲಿವೆ. ಅರ್ಜಿ ಸಲ್ಲಿಸದ ರೈತರಿಗೆ ಮತ್ತೊಂದು ಅವಕಾಶ ನೀಡಲು ಸರ್ಕಾರಕ್ಕೆ ಪ್ರಸ್ತಾವ  ಕಳುಹಿಸಲಾಗುವುದು ಎಂದರು.
    ಸಾಗುವಳಿದಾರ ರೈತರಿಗೆ ಅನ್ಯಾಯವಾಗದಂತೆ ಕ್ರಮ ವಹಿಸಿ, ಸರ್ಕಾರದ ನಿಯಮಾವಳಿ ಅನುಸಾರ ಗರಿಷ್ಠ ಮಂಜೂರಾತಿ ಮಾಡಬಹುದಾದ ಮತ್ತು ಈಗಾಗಲೇ ಸಾಗುವಳಿ ಮಾಡುತ್ತಿರುವ ರೈತರಿಗೆ ಆ ಜಮೀನು ಮಂಜೂರಾತಿ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
    ಉಪ ವಿಭಾಗಾಧಿಕಾರಿ ಅಶೋಕ ತೆಲಿ, ಸಹಕಾರ ಸಂಗಳ ಧಾರವಾಡ ಜಿಲ್ಲಾ ಉಪ ನಿಬಂಧಕರು, ಅಳ್ನಾವರ ತಹಸೀಲ್ದಾರ್  ಬಸವರಾಜ ಬೆಣ್ಣಿಶಿರೂರ, ಕಲಟಗಿ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ, ಧಾರವಾಡ ತಹಸೀಲ್ದಾರ್ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಹಣಮಂತ ಕೊಚ್ಚರಗಿ, ಪ್ರಕರಣಗಳ ನಿರ್ವಾಹಕಿ ರಂಜಿತಾ ಹಿರೇಮಠ, 3 ತಾಲೂಕುಗಳ ಫಾರ್ಮಿಂಗ್ ಸೊಸೈಟಿಯ ಅಧ್ಯಕ್ಷರು, ರೈತರು, ಸಾಗುವಳಿದಾರರು, ಗ್ರಾಮ ಆಡಳಿತಾಧಿಕಾರಿಗಳು, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts