More

    ಸಚಿವ ರಮೇಶ ಭಾವಚಿತ್ರಕ್ಕೆ ಕ್ಷೀರಾಭಿಷೇಕ

    ಬೆಳಗಾವಿ: ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದನ್ನು ಸ್ವಾಗತಿಸಿರುವ ಉತ್ತರ ಕರ್ನಾಟಕದ ಕಳಸಾ ಬಂಡೂರಿ ಹೋರಾಟಗಾರರು, ಚನ್ನಮ್ಮ ವೃತ್ತದಲ್ಲಿ ಪರಸ್ಪರ ಸಹಿ ಹಂಚಿ ಶುಕ್ರವಾರ ಸಂಭ್ರಮಪಟ್ಟರು. ಮತ್ತೊಂದೆಡೆ, ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ರೈತಪರ ಸಂಘಟನೆಗಳು ಹಾಗೂ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿ ವಿಜಯೋತ್ಸವ ಆಚರಿಸಿದರು.

    ರಾಜ್ಯದ ಇಬ್ಬರು ಕೇಂದ್ರ ಸಚಿವರು ಸೇರಿ ರಾಜ್ಯ ನಿಯೋಗದ ಸಮೇತ ದೆಹಲಿಯಲ್ಲಿಯೇ ಠಿಕಾಣಿ ಹೂಡಿ ಕೇಂದ್ರ ಸರ್ಕಾರದಿಂದ ಮಹದಾಯಿ ಅಧಿಸೂಚನೆ ಹೊರಡಿಸುವಲ್ಲಿ ಸಚಿವ ರಮೇಶ ಜಾರಕಿಹೊಳಿ ಯಶಸ್ವಿಯಾಗಿದ್ದರು. ಅವರು ಶುಕ್ರವಾರ ಮಧ್ಯಾಹ್ನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ರೈತಪರ ಸಂಘಟನೆಗಳು ಹಾಗೂ ಕಳಸಾ ಬಂಡೂರಿ ಹೋರಾಟಗಾರರು ಹಸಿರು ಶಾಲು ಹೊದಿಸಿ ಸಂಭ್ರಮದಿಂದ ಸ್ವಾಗತಿಸಿದರು. ಕೂಡಲೇ ಮಹದಾಯಿ ಕಾಮಗಾರಿ ಆರಂಭಿಸುವಂತೆ ಅವರಿಗೆ ಮನವಿ ಮಾಡಿದರು.

    ಇದು ರೈತರ ಗೆಲುವು: ಬಳಿಕ ಸಚಿವ ರಮೇಶ ಮಾತನಾಡಿ, ಇದು ನಮ್ಮ ಗೆಲುವಲ್ಲ. ರೈತರ ಗೆಲುವು. ಕರ್ನಾಟಕ, ಮಹಾರಾಷ್ಟ್ರ-ಗೋವಾ ರಾಜ್ಯದ ರೈತರೆಲ್ಲರೂ ಒಂದೇ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ತಾವು ದೈವ ಭಕ್ತರಾಗಿದ್ದರಿಂದ ಯಶಸ್ಸು ಲಭಿಸಿದೆ. ಬಿಜೆಪಿ ಸರ್ಕಾರ ರೈತರ ಪರವಾಗಿದೆ ಎಂದರು. ಅಲ್ಲದೆ, ನ್ಯಾಯಾಲಯದಲ್ಲಿ ಸೋಮವಾರದಂದು ಪ್ರಕರಣದ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರದವರೆಗೆ ರಾಜ್ಯದ ಯಾವುದೇ ಭಾಗದಲ್ಲೂ ಸಂಭ್ರಮಾಚರಣೆ ಮಾಡಬೇಡಿ ಎಂದು ಮನವಿ ಮಾಡಿದರು.

    ಕಣಕುಂಬಿಗೆ ಭೇಟಿ: ಮಹದಾಯಿ ನದಿ ನೀರಿಗಾಗಿ ಹಿಂದಿನಿಂದಲೂ ಹೋರಾಟ ಮಾಡಿದ ರೈತರನ್ನು ಅಭಿನಂದಿಸುತ್ತೇನೆ. ನಮ್ಮ ರಾಜ್ಯಕ್ಕೆ ಸೀಮಿತವಾದ ನೀರು ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಆ ನಿಟ್ಟಿನಲ್ಲಿ ನಾಳೆಯೇ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡಿ, ನಡೆಯಬೇಕಾದ ಕಾಮಗಾರಿಯ ಸ್ಥಳ ಪರಿಶೀಲನೆ ಮಾಡುತ್ತೇನೆ ಎಂದರು.

    ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅಶೋಕ ಚಂದರಗಿ, ಬೆಳಗಾವಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ, ಭಾರತೀಯ ಕೃಷಿಕ ಸಮಾಜ ರಾಜ್ಯಾಧ್ಯಕ್ಷ ಸಿದಗೌಡ ಮೊದಗಿ ಸೇರಿದಂತೆ ನೂರಾರು ರೈತಪರ ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts