More

    ಚಿನ್ನದ ಅಂಶ ಹೆಚ್ಚಿದ್ದರೆ ಮತ್ತೆ ಗಣಿಗಾರಿಕೆ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭರವಸೆ

    ಮುಳಬಾಗಿಲು : ಕೋಲಾರ ಚಿನ್ನದ ಗಣಿಯಲ್ಲಿ ಚಿನ್ನದ ಅಂಶ ಎಷ್ಟಿದೆ ಎಂಬ ಬಗ್ಗೆ ಸರ್ವೇಕ್ಷಣೆ ನಡೆಯುತ್ತಿದೆ. ಪೂಕವಾದ ವರದಿ ಬಂದರೆ ಮತ್ತೆ ಗಣಿಗಾರಿಕೆ ಆರಂಭಿಸಲು ಮೋದಿ ಸರ್ಕಾರ ಅನುಮತಿ ನೀಡಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

    ಕುರುಡುಮಲೆಯ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ಗಣಪತಿ ದೇಗುಲಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದರು. ಚಿನ್ನದ ಅಂಶ ಗಣಿಗಾರಿಕೆಗೆ ಸಮರ್ಪಕವಾಗಿಲ್ಲ ಎಂದಾದರೆ, ಆ ಪ್ರದೇಶವನ್ನು ನಿವೇಶನವನ್ನಾಗಿಸಿ ಕೈಗಾರಿಕೆ ಮತ್ತಿತರ ಚಟುವಟಿಕೆಗಳಿಗೆ ನೀಡಲಾಗುವುದು ಎಂದರು.

    ರೈತರ ಅಭ್ಯುದಯಕ್ಕೆ ಆದ್ಯತೆ: ಕೇಂದ್ರ ಬಿಜೆಪಿ ಸರ್ಕಾರ ರೈತರ ಅಭ್ಯುದಯಕ್ಕೆ ಆದ್ಯತೆ ನೀಡುತ್ತಿದೆ. ಕೃಷಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ತೊಂದರೆಯಾಗುವುದಿಲ್ಲ. ಅವರಿಗೆ ಇನ್ನಷ್ಟು ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ಜಾರಿಗೊಳಿಸಲಾಗಿದೆ. ಆದರೆ, ಕಾಂಗ್ರೆಸ್ ಸೇರಿ ಕೆಲವು ರಾಜಕೀಯ ಪಕ್ಷಗಳು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ. ಕೃಷಿಕರ ಪ್ರತಿಭಟನೆಯ ಹಿಂದೆ ಕೆಲ ಕಾಣದ ಕೈಗಳ ಕೈವಾಡ ಅಡಗಿದೆ ಎಂದು ಜೋಶಿ ದೂರಿದರು.

    ಎಪಿಎಂಸಿಗಳಲ್ಲಿ ಕಮಿಷನ್ ರೂಪದಲ್ಲಿ ರೈತರ ಸುಲಿಗೆ ನಡೆಯುತ್ತಿದೆ. ಈ ಮಾಫಿಯಾ ಕೂಡಾ ರೈತ ಚಳವಳಿಗೆ ಸೇರಿಕೊಂಡಿದೆ. ಪಂಜಾಬ್ ಹರಿಯಾಣದಲ್ಲಿ ಮಾತ್ರ ಹೆಚ್ಚು ವಿರೋಧ ವ್ಯಕ್ತವಾಗುತ್ತಿದೆ. ಆದರೂ ರಾಷ್ಟ್ರದ ರೈತರ ಹಿತದೃಷ್ಟಿಯಿಂದ ಕೃಷಿ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವಂಥ ವ್ಯವಸ್ಥೆ ಮಾಡಲಾಗಿದೆ ಎಂದರು.

    2 ವರ್ಷಗಳ ಬಳಿಕ ದರ್ಶನ: ಎರಡು ವರ್ಷಗಳ ಹಿಂದೆ ಕುರುಡುಮಲೆ ದೇಗುಲಕ್ಕೆ ಭೇಟಿ ನೀಡಿದ್ದೆ. ಮತ್ತೊಮ್ಮೆ ದೇವರ ದರ್ಶನ ಪಡೆಯಲು ಬಂದಿದ್ದೇನೆ. ಶ್ರೀ ಪಾದರಾಜರ ಮಠಕ್ಕೂ ಭೇಟಿ ಮಾಡುವ ರೂಢಿ ಇರುವುದರಿಂದ, ಕುಟುಂಬ ಸಮೇತನಾಗಿ ಇಲ್ಲಿಗೆ ಬಂದಿದ್ದೇನೆ. ಬೇರಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.

    ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಟಿಎಚ್‌ಒ ಡಾ. ಕೆ.ಎಂ. ವರ್ಣಶ್ರೀ, ಜಿಲ್ಲಾ ಬಿಜೆಪಿ ಖಚಾಂಚಿ ಕೆ.ಜಿ. ವೆಂಕಟರಮಣ, ಮುಳಬಾಗಿಲು ತಾಲೂಕು ಅಧ್ಯಕ್ಷ ಅಶೋಕರೆಡ್ಡಿ, ಮಾಜಿ ಅಧ್ಯಕ್ಷ ಎಂ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮೇಶ್, ಮುಳಬಾಗಿಲು ನಗರ ಘಟಕದ ಅಧ್ಯಕ್ಷ ಕಲ್ಲುಪಲ್ಲಿ ಕೆ.ಜೆ.ಮೋಹನ್, ಪ್ರಧಾನ ಕಾರ್ಯದರ್ಶಿ ವಿ.ಟಿ.ಶಂಕರ, ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಕೆ.ಎಚ್.ನಾಗರಾಜ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಮುಳಬಾಗಿಲು ಗ್ರಾಮಾಂತರ ಯುವ ಘಟಕದ ಅಧ್ಯಕ್ಷ ಪ್ರಕಾಶ್ ರೆಡ್ಡಿ, ನಗರ ಯುವ ಘಟಕದ ಅಧ್ಯಕ್ಷ ಆರ್.ಕಿರಣ್ ಕುಮಾರ್ ಮತ್ತಿತರರು ಇದ್ದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬದಲಾವಣೆ ಊಹಾಪೋಹಾ. ನಾನು ಮುಂದಿನ ಸಿಎಂ ಎಂಬುದು ಸರಿಯಲ್ಲ. ಯಡಿಯೂರಪ್ಪ ಅವರೇ ಆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
    ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

    ಪಂಚಾಯಿತಿಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು : ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಬಗ್ಗೆ ಮುಖಂಡರಿಂದ ಮಾಹಿತಿ ಪಡೆದುಕೊಂಡ ಪ್ರಲ್ಹಾದ್ ಜೋಶಿ, ಗ್ರಾಪಂ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಸೂಚನೆ ನೀಡಿದರು. ಕುರುಡುಮಲೈ ದೇವಾಲಯದ ಹೊರ ಆವರಣದಲ್ಲಿ ಪಕ್ಷದ ಮುಖಂಡರ ಜತೆ ಮಾತುಕತೆ ನಡೆಸಿದರು. ಗ್ರಾಪಂನ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ತುರುಸಿನಿಂದ ಕೂಡಿದೆ. ಪಕ್ಷದ ಸಾಧನೆ ಬಗ್ಗೆ ಒಳ್ಳೆಯ ಅಭಿಪ್ರಾಯವೂ ಇದೆ. ಚುನಾವಣೆಯಲ್ಲಿ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ನಾವು ಅತಿಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಸಂಸದ ಎಸ್.ಮುನಿಸ್ವಾಮಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅವರ ಆಡಳಿತ ಶೈಲಿ ಮತ್ತು ಬಿಜೆಪಿ ಸಂಘಟನೆಗೆ ನೀಡುತ್ತಿರುವ ಸ್ಪಂದನೆ ಕುರಿತು ಸಂಸದ ಎಸ್. ಮುನಿಸ್ವಾಮಿ ಅವರಿಂದ ವಿವರ ಪಡೆದುಕೊಂಡರು. ಮುಳಬಾಗಿಲಿನ ನರಸಿಂಹತೀರ್ಥದ ಶ್ರೀ ಪಾದರಾಜರ ಮಠಕ್ಕೆ ಭೇಟಿ ನೀಡಿ ಶ್ರೀ ಯೋಗ ನರಸಿಂಹ ದೇವರ ದರ್ಶನ ಪಡೆದರು. ಕುಟುಂಬ ಸಮೇತರಾಗಿ ಶ್ರೀ ಪಾದರಾಜರ ಬೃಂದಾವನ ಪ್ರದಕ್ಷಿಣೆ ಹಾಕಿ, ಮಠದಲ್ಲಿ ಪ್ರಸಾದ ಸೇವಿಸಿದರು. ಬಳಿಕ ಬೆಂಗಳೂರಿಗೆ ಮರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts