More

    ಗೊಂದಲದಲ್ಲಿ ಕೆಸಿಎನ್ ನಡೆ: ‘ಕೈ’ ಹಿಡಿಯಲು ಸಚಿವ ಸಜ್ಜು, ‘ಹಸ್ತ’ಲಾಘವಕ್ಕೆ ನಾಯಕರಿಗೆ ನಿರಾಸಕ್ತಿ

    ಮಂಡ್ಯ: ಸಚಿವ ಕೆ.ಸಿ.ನಾರಾಯಣಗೌಡ ಕಮಲ ಬಿಟ್ಟು ಕಾಂಗ್ರೆಸ್ ಅಪ್ಪಿಕೊಳ್ಳುತ್ತಾರೆನ್ನುವ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಬಿಜೆಪಿಯಲ್ಲಿಯೇ ಇರುವುದಾಗಿ ಸ್ಪಷ್ಟತೆ ನೀಡುತ್ತಿದ್ದ ಅವರು, ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ. ಆದರೆ ಆಪ್ತರೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇನೆಂದೇಳುವ ಮೂಲಕ ಪಕ್ಷಾಂತರದ ಸುಳಿವು ಬಿಟ್ಟುಕೊಟ್ಟಿದ್ದಾರೆ.
    ಆದರೆ ಈ ಕುರಿತು ಕಾಂಗ್ರೆಸ್ ಪಾಳಯದಿಂದಲೇ ಅಪಸ್ವರ ಎದ್ದಿದೆ. ನಾರಾಯಣಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಆಸಕ್ತಿಯನ್ನು ಸ್ಥಳೀಯ ‘ಕೈ’ ನಾಯಕರು ತೋರುತ್ತಿಲ್ಲ. ಮಾತ್ರವಲ್ಲದೆ ಸಚಿವರ ಪಕ್ಷ ಸೇರ್ಪಡೆ ವಿಚಾರದಲ್ಲಿ ಯಾವುದೇ ಬೆಳವಣಿಗೆ ನಡೆದಿಲ್ಲ. ಸುಖಾಸುಮ್ಮನೆ ಗೊಂದಲ ಸೃಷ್ಟಿ ಮಾಡಲಾಗಿದೆ ಎಂದು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬಿ ಫಾರ್ಮ್ ಬಯಸಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿತರಿಗೆ ಜಿಲ್ಲಾ ಕಾಂಗ್ರೆಸ್ ಸ್ಪಷ್ಟ ಸಂದೇಶ ರವಾನಿಸಲಾಗಿದೆ.
    ಇತ್ತೀಚೆಗೆ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಯುವ ಮೋರ್ಚಾ ಸಮಾವೇಶಕ್ಕೆ ಮಂಡ್ಯ ನಗರಕ್ಕೆ ಆಗಮಿಸಿದ್ದ ವೇಳೆಯೂ ಸಚಿವ ಕೆಸಿಎನ್ ಪಕ್ಷಾಂತರದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಆದರೆ ‘ಕೈ’ ಹಿಡಿಯುವ ಕುರಿತು ಬುಧವಾರ ಸ್ಪಷ್ಟತೆ ನೀಡಿರುವ ಕೆಸಿಎನ್, ಬೆಂಬಲಿಗರೊಂದಿಗೆ ಚರ್ಚೆ ಮಾಡಬೇಕಿದೆ ಎಂದಿದ್ದಾರೆ. ಇದು ಪಕ್ಷಾಂತರದ ಮುನ್ಸೂಚನೆಯಾದ ಹಿನ್ನೆಲೆಯಲ್ಲಿ ಮಾ.12ರಂದು ಜಿಲ್ಲೆಗೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಮುಂಚೆ ಪಕ್ಷ ಬಿಡಲಿದ್ದಾರೆನ್ನುವ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಮೋದಿ ಅವರು ಆಗಮಿಸುತ್ತಿದ್ದರೂ ಜಿಲ್ಲೆಯ ಸಚಿವರಾಗಿ ಸಿದ್ಧತೆ ಬಗ್ಗೆ ತಲೆಕೆಡಿಸಿಕೊಂಡಂತೆ ಕಂಡುಬರುತ್ತಿಲ್ಲ. ಜತೆಗೆ ಕೆ.ಆರ್.ಪೇಟೆಗೆಷ್ಟೇ ಸೀಮಿತವಾಗಿದ್ದಾರೆ.
    ಈ ನಡುವೆ ಪಕ್ಷಾಂತರದ ಬಗ್ಗೆ ಕೆಸಿಎನ್ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದು, ಬಿಜೆಪಿಯಲ್ಲಿಯೇ ಇರುವುದಾಗಿ ಗುರುವಾರ ಸ್ಪಷ್ಟನೆ ನೀಡಿದ್ದಾರೆ. ಈ ಅಂಶಗಳನ್ನು ಗಮನಿಸಿದಾಗ ಸಚಿವರು ಗೊಂದಲದಲ್ಲಿರುವುದು ಸ್ಪಷ್ಟ ಎನ್ನಿಸಿದೆ. ಸಾವಿರಾರು ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ ಮಾಡಿರುವುದಾಗಿ ಹೇಳಿಕೊಳ್ಳುತ್ತಿರುವ ಕೆಸಿಎನ್‌ಗೆ ಸೋಲುವ ಆತಂಕ ಕಾಡುತ್ತಿದೆಯೇ ಎನ್ನುವ ಚರ್ಚೆ ಜಿಲ್ಲಾದ್ಯಂತ ನಡೆದಿದೆ. ಇನ್ನು ಜೆಡಿಎಸ್ ಪಕ್ಷ ತೊರೆಯುವ ಸಮಯದಲ್ಲಿಯೂ ಕೊನೆ ಹಂತದವರೆಗೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ ಎನ್ನುವುದನ್ನು ಸ್ಮರಿಸಬಹುದು. ಆದರೆ ಸಚಿವರ ನಡೆ ಕೆ.ಆರ್.ಪೇಟೆ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಗಲಿಬಿಲಿ ಸೃಷ್ಟಿಸಿದೆ.
    ಕಾಂಗ್ರೆಸ್‌ಗೆ ಕೆಸಿಎನ್ ಅನಿವಾರ್ಯವೇ?: ಸದ್ಯದ ಪರಿಸ್ಥಿತಿಯನ್ನು ನೋಡುವುದಾದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಎಂಎಲ್‌ಸಿ ಚುನಾವಣೆಗಳ ಗೆಲುವಿನ ಹುಮ್ಮಸ್ಸು ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಅಂತೆಯೇ ಕಾರ್ಯಕರ್ತರು ಕೂಡ ಎದುರಾಳಿಗಳ ವಿರುದ್ಧ ತೊಡೆತಟ್ಟಲು ಸಜ್ಜಾಗಿದ್ದಾರೆ. ಎಐಸಿಸಿ ಸದಸ್ಯರೂ ಆಗಿರುವ ಕೆಪಿಸಿಸಿ ಉಪಾಧ್ಯಕ್ಷರಾದ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಪಕ್ಷ ಬಲಿಷ್ಠವಾಗಿದೆ.
    ಇನ್ನು ಕೆ.ಆರ್.ಪೇಟೆ ಕ್ಷೇತ್ರವನ್ನು ಗಮನಿಸಿದರೆ ಕಾಂಗ್ರೆಸ್‌ನಿಂದ ಒಂದಿಬ್ಬರು ಆಕಾಂಕ್ಷಿತರು ಹಿಂದಿನ ಚುನಾವಣೆಯಲ್ಲಿ ಸಿಗುತ್ತಿದ್ದರು. ಆದರೀಗ ಆಕಾಂಕ್ಷಿತರು ಹೆಚ್ಚಾಗಿರುವುದು ಕ್ಷೇತ್ರದಲ್ಲಿ ಪಕ್ಷ ಬಲಗೊಳ್ಳುತ್ತಿರುವುದನ್ನು ಸಾಕ್ಷೀಕರಿಸುತ್ತಿದೆ. ಮಾತ್ರವಲ್ಲದೆ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಾರುಪತ್ಯ ಮೆರೆದಿರುವ ಇತಿಹಾಸವಿದೆ. ಆದರೆ ಬಳಿಕದ ವರ್ಷಗಳಲ್ಲಿ ಸಂಘಟನೆಯಿಲ್ಲದ ಪರಿಣಾಮ ಬರೋಬರಿ 15 ವರ್ಷದಿಂದ ಅಂದರೆ 2008ರಿಂದ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿಲ್ಲ.
    ಜೆಡಿಎಸ್‌ನಿಂದ ಹೊರಬಂದ ಕೆಸಿಎನ್, ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಇಡೀ ಸಚಿವ ಸಂಪುಟವೇ ಅವರ ಬೆನ್ನಿಗೆ ನಿಂತಿತ್ತು. ಆದರೂ ನಾರಾಯಣಗೌಡ ಗೆದ್ದಿದ್ದು 9,731 ಮತಗಳ ಅಂತರದಿಂದ ಮಾತ್ರ. ಇದೀಗ ಮುಂದಿನ ಚುನಾವಣೆ ವೇಳೆಗೆ ಬಿಜೆಪಿಯಲ್ಲಿಯೇ ಇದ್ದರೆ ಸರ್ಕಾರದ ಸಹಾಯವಿಲ್ಲದೆ ಏಕಾಂಗಿಯಾಗಿ ಎದುರಿಸಬೇಕಾದ ಅನಿವಾರ್ಯತೆ ಇದೆ. ಈ ನಡುವೆ ಕಮಲ ಪಾಳಯದೊಳಗೆ ಒಂದಷ್ಟು ಗೊಂದಲವಿದ್ದು, ಅಸಮಾಧಾನದ ಹೊಗೆಯಾಡುತ್ತಿದೆ. ಇತ್ತ ಜೆಡಿಎಸ್‌ನಲ್ಲಿಯೂ ಭಿನ್ನಮತ ಸ್ಫೋಟಗೊಂಡಿರುವುದರಿಂದ ಬಂಡಾಯ ಕಾವೇರಿದೆ. ಸದ್ಯಕ್ಕೆ ಕಾಂಗ್ರೆಸ್‌ನಲ್ಲಷ್ಟೇ ಒಗ್ಗಟ್ಟಿನ ಮಂತ್ರ ಕೇಳಿಬರುತ್ತಿದೆ. ಜತೆಗೆ ಪಕ್ಷವೂ ಸದೃಢವಾಗಿರುವುದರಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣವಿದೆ. ಇಂತಹ ಸಮಯದಲ್ಲಿ ಕೆಸಿಎನ್ ಅವರನ್ನು ಪಕ್ಷ ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆಯೇ ಎನ್ನುವ ಪ್ರಶ್ನೆಯನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಹೊರಹಾಕುತ್ತಿದ್ದಾರೆ. ಇದಕ್ಕೆ ಸದ್ಯಕ್ಕೆ ನಾಯಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನದಲ್ಲಿ ಅಚ್ಚರಿಯ ಬೆಳವಣಿಗೆಯಾದರೂ ಆಶ್ಚರ್ಯವಿಲ್ಲ.
    ಬಹಿರಂಗ ಅಸಮಾಧಾನ: ಕೆಸಿಎನ್ ಪಕ್ಷ ಸೇರ್ಪಡೆ ಚರ್ಚೆ ಹಲವು ತಿಂಗಳಿಂದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಬಿ ಫಾರ್ಮ್‌ಗಾಗಿ ಅರ್ಜಿ ಸಲ್ಲಿಸಿರುವವರು ಸಚಿವರ ವಿರುದ್ಧ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಪಕ್ಷ ಸೇರ್ಪಡೆ ಮಾಡಿಕೊಂಡು ಸ್ಪರ್ಧೆಗೆ ಅವಕಾಶ ಕೊಟ್ಟರೆ ಠೇವಣಿ ಕಳೆದುಕೊಳ್ಳುವಂತೆ ಮಾಡುತ್ತೇವೆಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಮಾತ್ರವಲ್ಲದೆ ನಾಯಕರ ಬಳಿಯೂ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿದ್ದಾರೆ. ಬುಧವಾರ ಕೆಸಿಎನ್ ಹೇಳಿಕೆ ಬಳಿಕ ಗುರುವಾರ ಸ್ಪರ್ಧಾಕಾಂಕ್ಷಿಗಳು ಮತ್ತೊಮ್ಮೆ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಅವರೆಲ್ಲರ ಆತಂಕವನ್ನು ಶಮನ ಮಾಡಿರುವ ನಾಯಕರು, ಪಕ್ಷಕ್ಕೆ ಕರೆತರುವ ಸಂಬಂಧ ಯಾವುದೇ ಬೆಳವಣಿಗೆ ನಡೆದಿಲ್ಲವೆಂದು ಸಮಜಾಯಿಷಿ ನೀಡಿದ್ದಾರೆ.
    ವಿಆರ್ ಮುಂಚೂಣಿ: ಕೆ.ಆರ್.ಪೇಟೆ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ವಿಜಯ ರಾಮೇಗೌಡ, ನಾಗೇಂದ್ರಕುಮಾರ್, ಕಿಕ್ಕೇರಿ ಸುರೇಶ್, ಡಾ.ಎಂ.ಡಿ.ಕೃಷ್ಣಮೂರ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ವಿಜಯ ರಾಮೇಗೌಡ ಅವರು ಕೆಪಿಸಿಸಿ ಹಾಗೂ ಡಿಸಿಸಿ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಪಕ್ಷದೊಳಗೆ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಇವರಿಗೆ ಭಾರತ್ ಜೋಡೋ ನಿರ್ವಹಣಾ ಸಮಿತಿಯಲ್ಲಿ ಸ್ಥಾನ ನೀಡಲಾಗಿತ್ತು. ಅದನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಮಾತ್ರವಲ್ಲದೆ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದುಕೊಂಡು ಪಕ್ಷ ಸಂಘಟನೆ ಜತೆಗೆ ಸಾಮಾಜಿಕ ಸೇವೆ ಮೂಲಕ ಮುಂಚೂಣಿಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts