More

    ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡಿ ; ಗೌರಿಬಿದನೂರು ಪೌರಾಡಳಿತ ಸಚಿವ ನಾಗರಾಜ್‌ಗೆ ಶಾಸಕ ಶಿವಶಂಕರರೆಡ್ಡಿ ಮನವಿ 

    ಗೌರಿಬಿದನೂರು:ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರಿ 3 ವರ್ಷ ಕಳೆದಿದೆ. ನಗರದ ಸುತ್ತಲಿನ ಹಲವು ಗ್ರಾಮ ಮತ್ತು ಕೆಲ ಗ್ರಾಪಂಗಳು ನಗರಸಭೆ ವ್ಯಾಪ್ತಿಗೆ ಬಂದಿವೆಯಾದರೂ ಮೂಲಸೌಲಭ್ಯಗಳ ಕೊರತೆ ಇರುವುದರಿಂದ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ಗೆ ಮನವಿ ಮಾಡಿದರು.

    ನಗರಸಭೆ ಕಚೇರಿಯಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ವೇಳೆ ಸಚಿವರು ವಿವಿಧ ಯೋಜನೆಗಳ ಮಾಹಿತಿ ಪಡೆದುಕೊಳ್ಳುವಾಗ ಶಾಸಕರು ಈ ವಿಷಯ ಪ್ರಸ್ತಾಪಿಸಿದರು. ಸರ್ಕಾರದ ವಿಶೇಷ ಅನುದಾನದಲ್ಲಿ ನಗರಗಳನ್ನು ಸುಂದರವಾಗಿ ಅಭಿವೃದ್ಧಿಪಡಿಸಬೇಕು. ಮೂಲಸೌಲಭ್ಯ ಕಲ್ಪಿಸುವಲ್ಲಿ ಮತ್ತು ಜನರ ಬೇಡಿಕೆಗಳನ್ನು ಈಡೇರಿಸುವಾಗ ಬಡವ ಬಲ್ಲಿದ ಎಂಬ ಭಾವನೆ ಬಿಡಬೇಕು. ಕೆರೆ-ಕುಂಟೆಗಳ ಒತ್ತುವರಿ ತಡೆಯಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ನಗರಸಭೆ ಅಧ್ಯಕ್ಷೆ ಕೆ.ಎಂ.ಗಾಯತ್ರಿ, ತಹಸೀಲ್ದಾರ್ ಶ್ರೀನಿವಾಸ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ರೇಣುಕಾ ಮತ್ತಿತರರು ಇದ್ದರು.

    ಸಚಿವ ಸಂಪುಟದಲ್ಲಿ ಅನುಮೋದನೆ: ಇ-ಟೆಂಡರ್ ಪ್ರಕ್ರಿಯೆ ಸಂದರ್ಭದಲ್ಲಿ ಗುತ್ತಿಗೆದಾರರು ಅವೈಜ್ಞಾನಿಕವಾಗಿ ದರ ನಿಗದಿಪಡಿಸಿ, ಗುತ್ತಿಗೆ ಪಡೆಯುತ್ತಿರುವುದರ ಬಗ್ಗೆ ಸುದೀರ್ಘ ಚರ್ಚೆಯಾಯಿತು. ಕ್ರಿಯಾ ಯೋಜನೆ ಸಿದ್ಧಪಡಿಸುವಾಗ ಶೇ.10 ಲಾಭ ಇರಿಸಿಕೊಂಡು ಎಸ್.ಆರ್.ದರ ನಿಗದಿಪಡಿಸಲಾಗುತ್ತಿದೆ. ಇಲ್ಲಿ ಗುತ್ತಿಗೆದಾರರು ಶೇ.20 ಪ್ರಮಾಣ ಬಿಟ್ಟು ಟೆಂಡರ್ ಪಡೆದುಕೊಳ್ಳುತ್ತಿದ್ದಾರೆ. ಇಂತಹವರು ನಿಜವಾಗಿಯೂ ಗುಣಮಟ್ಟದ ಕಾಮಗಾರಿ ಕೈಗೊಳ್ಳುತ್ತಾರೆಯೇ? ಅಭಿವೃದ್ಧಿ ಕಾಮಗಾರಿಗಳು ಸಕಾಲಕ್ಕೆ ಪೂರ್ಣಗೊಳ್ಳುತ್ತವೆಯೇ? ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಮಧ್ಯೆ ಪ್ರವೇಶಿಸಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಶೇ.10 ಕ್ಕಿಂತ ಹೆಚ್ಚು ದರ ಬಿಟ್ಟು ಕಾಮಗಾರಿ ಗುತ್ತಿಗೆ ಪಡೆಯುವವರ ಟೆಂಡರ್ ರದ್ದುಪಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು ಎಂದು ಸಚಿವರು ಭರವಸೆಯಿತ್ತರು.

    2.85 ಕೋಟಿ ರೂ. ತೆರಿಗೆ ಸಂಗ್ರಹ ಗುರಿ: ಮೂರು ವರ್ಷದಲ್ಲಿ ನಗರೋತ್ಥಾನ ಯೋಜನೆಯಡಿ 25 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು ಮೊದಲ ಹಂತವು ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಶೇ.80 ಕೆಲಸವಾಗಿದೆ. ಈಗಾಗಲೇ 15ನೇ ಹಣಕಾಸು ಯೋಜನೆಯಡಿ 1.85 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಹಾಗೆಯೇ ಎಸ್‌ಎಫ್‌ಸಿ ಅನುದಾನದಡಿ ಕ್ರಿಯಾ ಯೋಜನೆ ತಯಾರಾಗಿದೆ. ಇನ್ನು ಕಳೆದ ಸಾಲಿನಲ್ಲಿ ಶೇ.95 ತೆರಿಗೆ ಸಂಗ್ರಹವಾಗಿದೆ. ಈ ಬಾರಿ 2.85 ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಈ ಬಾರಿ ತೆರಿಗೆ ಪ್ರಮಾಣ ಏರಿಕೆ ಮಾಡಲಾಗಿದೆ ಎಂದು ಪೌರಾಯುಕ್ತ ಸತ್ಯನಾರಾಯಣ ಸಭೆಗೆ ಮಾಹಿತಿ ನೀಡಿದರು.

    ಖಾಲಿ ಹುದ್ದೆ ಭರ್ತಿಗೆ ಮನವಿ: ಕೊಳೆಗೇರಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ನಗರಸಭೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ನಗರಸಭೆ ಸದಸ್ಯರು ಮನವಿ ಮಾಡಿದರು.

    ಕಿಂಡಿ ಅಣೆಕಟ್ಟಿಗೆ ಬಾಗಿನ ಅರ್ಪಣೆ: ಗೌರಿಬಿದನೂರು ನಗರದ ಕಿಂಡಿ ಅಣೆಕಟ್ಟಿನ ಬಳಿ ಉತ್ತರ ಪಿನಾಕಿನಿ ನದಿಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಬಾಗಿನ ಅರ್ಪಿಸಿದರು.
    ಈ ಬಾರಿ ಉತ್ತರ ಪಿನಾಕಿನಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ. ನಗರದ ಕುಡಿಯುವ ನೀರಿನ ಬವಣೆ ನೀಗಲು ಸಹಕಾರಿಯಾಗಿದೆ ಎಂದು ಸಚಿವರು ತಿಳಿಸಿದರು. ನಗರಸಭೆ ಅಧ್ಯಕ್ಷೆ ಗಾಯಿತ್ರಿ ಬಸವರಾಜ್, ಸದಸ್ಯರಾದ ಆರ್.ಪಿ.ಗೋಪಿನಾಥ್, ಗಿರೀಶ್, ಪದ್ಮಮ್ಮ, ವಿ.ರಮೇಶ್ ಮತ್ತಿತರರು ಹಾಜರಿದ್ದರು.

    ಸಚಿವರನ್ನು ಸ್ವಾಗತಿಸಿದ ಕೆಂಪರಾಜು(ಗೌರಿಬಿದನೂರು): ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜು ಅವರನ್ನು ಸಮಾಜ ಸೇವಕ ಡಾ.ಕೆ ಕೆಂಪರಾಜು ಸ್ವಾಗತಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
    ತಿಪ್ಪಗಾನಹಳ್ಳಿ ಟೋಲ್ ಬಳಿ ಕೆಂಪರಾಜು, ಸಚಿವರನ್ನು ಬೆಂಬಲಿಗರೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಸಚಿವರ ಜತೆಗೆ ತೆರಳಿ ಉತ್ತರ ಪಿನಾಕಿನಿ ನದಿಗೆ ಬಾಗಿನ ಅರ್ಪಿಸಿದರು. ಸಚಿವರು ಮಧ್ಯಾಹ್ನದ ಊಟವನ್ನು ಕೆಂಪರಾಜು ಅವರ ತೋಟದ ಮನೆಯಲ್ಲಿ ಮಾಡಿ, ಕಾರ್ಯಕರ್ತರ ಸಮಸ್ಯೆ ಆಲಿಸಿದರು. ಕೆಂಪರಾಜು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇನೆ ಎಂದು ಹೇಳುವ ಮೂಲಕ ಸಚಿವರು ರಾಜಕೀಯ ಹೊಸ ಚರ್ಚೆಗೆ ಅವಕಾಶ ಒದಗಿಸಿಕೊಟ್ಟರು. ಕೆಂಪರಾಜು ಊಟಕ್ಕೆ ಕರೆದಿದ್ದರಿಂದ ಹೋಗಿ ಬಂದಿದ್ದೇನೆ. ಬಿಜೆಪಿಗೆ ಬರುವುದು, ಬಿಡುವುದು ಅವರ ಸ್ವಂತ ನಿರ್ಧಾರ ಎಂದು ಸಚಿವ ನಾಗರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts