More

    ಕನ್ನಡ ತಂತ್ರಜ್ಞಾನಕ್ಕೆ ಇದು ಪರ್ವಕಾಲ

    ಶಿವಮೊಗ್ಗ: ಭಾಷೆಯ ವಿಕಾಸಕ್ಕೆ ತಂತ್ರಜ್ಞಾನ ಬಳಸಲು ಇದೊಂದು ಪರ್ವಕಾಲವಾಗಿದ್ದು ಆಧುನಿಕ ಶಿಕ್ಷಣ ಪದ್ಧತಿ ತಂತ್ರಜ್ಞಾನದತ್ತ ಹೊರಳುತ್ತಿದೆ. ಅಂತರ್ಜಾಲದ ಮೂಲಕ ತರಗತಿಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರತ್ಯೇಕ ಕನ್ನಡದ ಅತ್ಯಾಧುನಿಕ ತಂತ್ರಾಂಶ, ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.

    ನಗರದ ಡಿಎಆರ್ ಮೈದಾನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡವೆಂದರೆ ಬರೀ ನುಡಿಯಲ್ಲ. ಅದರರ್ಥ ದೊಡ್ಡದಿದ್ದು ಇಲ್ಲಿನ ಪರಿಸರ, ಅರಣ್ಯ, ನದಿ, ನೀರು, ಭಾಷೆ, ಜನಾಂಗ ಸೇರಿ ಎಲ್ಲವನ್ನೂ ಒಳಗೊಂಡಿದೆ ಎಂದು ಪ್ರತಿಪಾದಿಸಿದರು.

    ಎರಡು ಸಾವಿರಕ್ಕೂ ಹೆಚ್ಚಿನ ಸಾಂಸ್ಕೃತಿಕ ಇತಿಹಾಸವುಳ್ಳ ಈ ನಾಡಿನ ಭಾಷೆ, ಸಾಹಿತ್ಯ, ಪರಂಪರೆ ಶ್ರೀಮಂತವಾಗಿದೆ. ರಾಜ್ಯದ ಶ್ರೇಷ್ಠ ಸಾಹಿತ್ಯ ಪರಂಪರೆಗೆ ವಿಶ್ವ ಮನ್ನಣೆ ದೊರೆತಿದೆ. ಕನ್ನಡ ಸಾಹಿತ್ಯ ವಿಶ್ವದ ಯಾವುದೇ ಭಾಷೆಯ ಸಾಹಿತ್ಯದ ಮೌಲಿಕತೆಯನ್ನು ಸರಿಗಟ್ಟುವ ಸಾಮರ್ಥ್ಯವನ್ನು ಒಳಗೊಂಡಿದೆ ಎಂದು ಹೇಳಿದರು.

    ವಿಶೇಷವಾಗಿ ಭಾಷೆಯನ್ನು ಸಮರ್ಥವಾಗಿ ಬೆಳೆಸಬೇಕಾದ ಸಂಸ್ಥೆಗಳು, ವಿವಿಗಳು ತಮ್ಮ ಪಠ್ಯಚಟುವಟಿಕೆಗಳೊಂದಿಗೆ ಮಾನವಿಕ ವಿಷಯಗಳನ್ನು ಶಿಕ್ಷಣದಲ್ಲಿ ಅಳವಡಿಸಲು ಆದ್ಯತೆ ನೀಡಬೇಕು. ಶಿಕ್ಷಣದಲ್ಲಿ ಭಾಷೆ, ಸಾಹಿತ್ಯ ಮಾನವಿಕ ವಿಜ್ಞಾನ ವಿಷಯಗಳಿಗೆ ಆದ್ಯತೆ ನೀಡಿದಲ್ಲಿ ಸಹಜವಾಗಿ ಭಾಷೆ ಬೆಳೆಯುತ್ತದೆ. ಕರ್ನಾಟಕ ಕೇವಲ ಗಡಿ ರೇಖೆಯ ಒಳಗೆ ಸೀಮಿತವಾದ ಒಂದು ಭೌಗೋಳಿಕ ಪ್ರದೇಶವಲ್ಲ. ಅದು ಒಟ್ಟಾರೆ ರಾಷ್ಟ್ರೀಯ ಸಂಸ್ಕೃತಿಯನ್ನು, ಕನ್ನಡದ ಸ್ವಂತ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ಅತ್ಯುನ್ನತವಾದ ಭಾವವಾಗಿದೆ. ರಾಜ್ಯದ ಈ ಹಿರಿಮೆಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ತಿಳಿಸಿದರು.

    ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿಯರಾದ ಯಶಸ್ವಿನಿ, ಧನ್ಯಾ ಭಟ್, ಬಿ.ಆರ್.ಸ್ಪಂದನಾ, ಎಂ.ಕೆ.ಪೂಜಾ, ಬಿ.ಬಿ.ಸಿದ್ದಿಖ, ಫಯಾಜಿ ಭಾನು ಅವರಿಗೆ ಸರ್ಕಾರದಿಂದ ಲ್ಯಾಪ್​ಟಾಪ್​ನ್ನು ಕೊಡುಗೆಯಾಗಿ ನೀಡಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

    ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸೂಡ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಭದ್ರಾ ಕಾಡಾ ಅಧ್ಯಕ್ಷೆ ಕೆ.ಬಿ.ಪವಿತ್ರಾ ರಾಮಯ್ಯ, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್, ಕಾರ್ಪೆರೇಟರ್​ಗಳಾದ ಎಸ್.ಜ್ಞಾನೇಶ್ವರ್, ಎಚ್.ಸಿ.ಯೋಗೇಶ್, ಡಿಸಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ.ಶಾಂತರಾಜು, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಎಎಸ್ಪಿ ಡಾ. ಎಚ್.ಟಿ.ಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts