More

    ಸಂಪುಟ ದರ್ಜೆ ಸಚಿವರಾಗಿ ಸುಧಾಕರ್ ಪ್ರಮಾಣ

    ಚಿಕ್ಕಬಳ್ಳಾಪುರ: ಅಂತು ಇಂತೂ ಸಚಿವಗಾದಿ ಹಿಡಿದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಹಲವು ವರ್ಷಗಳ ಕನಸು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಂಗಳೂರಿನ ರಾಜಭವನದಲ್ಲಿ ಗುರುವಾರ 9 ಮಂದಿ ಶಾಸಕರೊಂದಿಗೆ ಡಾ ಕೆ.ಸುಧಾಕರ್ ರಾಜ್ಯ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2013ರಲ್ಲಿ ಮೊದಲ ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಸಚಿವ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದರು. ಒಂದೇ ಬಾರಿ ಗೆದ್ದವರಿಗೆ ತಕ್ಷಣಕ್ಕೆ ಅವಕಾಶ ಸಿಗುವುದಿಲ್ಲ ಎಂಬುದರ ಅರಿವಿದ್ದರೂ ದೆಹಲಿ ವರಿಷ್ಠರಿಂದ ಒತ್ತಡ ಹೇರಿದ್ದರು. ಹಲವು ಬಾರಿ ಸಚಿವ ಸ್ಥಾನದ ಪಟ್ಟಿಯಲ್ಲಿ ಸುಧಾಕರ್ ಹೆಸರು ಕಾಣಿಸಿಕೊಂಡು ಕೊನೇ ಕ್ಷಣದಲ್ಲಿ ಕೈತಪ್ಪಿ ಹೋಗಿತ್ತು. ಪಕ್ಷದಲ್ಲಿ ಅನೇಕ ಹಿರಿಯ ಶಾಸಕರಿದ್ದು, ತಾಳ್ಮೆ ವಹಿಸುವಂತೆ ಮನವೊಲಿಸಿ ಕಳುಹಿಸಲಾಗಿತ್ತು.

    ಮತ್ತೆ 2018 ರ ಚುನಾವಣೆಯಲ್ಲಿ ಶಾಸಕರಾದಾಗ ಶತಾಯ ಗತಾಯ ಸಚಿವರಾಗಲೇಬೇಕು ಎಂದು ದೆಹಲಿಯಲ್ಲಿ ವಾರಗಟ್ಟಲೇ ಉಳಿದುಕೊಂಡು ಕಸರತ್ತು ನಡೆಸಿದ್ದರು, ಇನ್ನೇನು ಹೈಕಮಾಂಡ್ ಗ್ರೀನ್‌ಸಿಗ್ನಲ್ ತೋರಿಸಿತು ಎನ್ನುವಷ್ಟರಲ್ಲಿ ಜಿಲ್ಲೆಯ ಮಾಜಿ ಸಚಿವ ವಿ.ಮುನಿಯಪ್ಪ ಮತ್ತು ಎನ್.ಎಚ್.ಶಿವಶಂಕರರೆಡ್ಡಿಯಿಂದ ವಿರೋಧ ವ್ಯಕ್ತವಾಯಿತು. ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

    ಪಕ್ಷ ಸಂಘಟನೆಯ ಲೆಕ್ಕಾಚಾರ : ಜಿಲ್ಲೆ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿನ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ನ ಮೂವರು, ಬಿಜೆಪಿ ಮತ್ತು ಜೆಡಿಎಸ್‌ನಿಂದ ತಲಾ ಒಬ್ಬರು ಶಾಸಕರಿದ್ದಾರೆ. ಕಾಂಗ್ರೆಸ್‌ನಿಂದ ಈ ಹಿಂದೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಡಾ ಕೆ.ಸುಧಾಕರ್, ಅನರ್ಹತೆ ಪ್ರಹಸನದ ನಂತರ ನಡೆದ ಉಪಚುನಾವಣೆಯಲ್ಲಿ ಕಮಲದ ನೆಲೆಯೇ ಇಲ್ಲದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಹ ಸಾಧಿಸಿದರು. ರಾಜೀನಾಮೆಯ ಮೂಲಕ ರಾಜ್ಯ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ಮತ್ತು ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಉದ್ದೇಶದಿಂದ ಸುಧಾಕರ್‌ರನ್ನು ಸಚಿವರನ್ನಾಗಿ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ.

    ಜಿಲ್ಲೆಯಲ್ಲಿ ಪೈಪೋಟಿ ಇಲ್ಲ: ಕಾಂಗ್ರೆಸ್‌ನಲ್ಲಿದ್ದಾಗ ಜಿಲ್ಲೆಯ ಇಬ್ಬರ ಹಿರಿಯ ಶಾಸಕರ ಪೈಪೋಟಿಯಿಂದ ಸುಧಾಕರ್‌ಗೆ ಸಚಿವ ಸ್ಥಾನ ತಪ್ಪಿತ್ತು. ಇಲ್ಲಿಯೇ ಉಳಿದುಕೊಂಡು ಮುಂದಿನ ಎರಡು ಚುನಾವಣೆಯಲ್ಲಿ ಗೆದ್ದರೂ ಸಚಿವಗಾದಿ ಏರುವುದು ಕಷ್ಟದ ಕೆಲಸವಾಗಿತ್ತು, ಒಂದು ಕಲ್ಲಲ್ಲಿ ಎರಡು ಹಣ್ಣು ಎನ್ನುವಂತೆ ವೈಯಕ್ತಿಕ ವರ್ಚಸ್ಸಿನ ಧೈರ್ಯದಲ್ಲಿ ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿ ಸೇರಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಕಮಲ ಅರಳಿಸಿದ ಏಕೈಕ ಶಾಸಕ ಸುಧಾಕರ್‌ಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.

    ಜಿಲ್ಲೆಗೆ ಸಚಿವ ಸ್ಥಾನ : ಇದುವರೆಗೂ ಜಿಲ್ಲೆಯ 6 ಶಾಸಕರು ಸಚಿವರಾಗಿದ್ದಾರೆ. ಗೃಹ ಸಚಿವರಾಗಿ ಚಿಂತಾಮಣಿಯ ಚೌಡರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಕೆ.ಎಂ.ಕೃಷ್ಣಾರೆಡ್ಡಿ, ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಯುವಜನ, ಕ್ರೀಡಾ, ರೇಷ್ಮೆ ಹಾಗೂ ಸಣ್ಣ ಕೈಗಾರಿಕೆ ಸಚಿವೆಯಾಗಿ ಚಿಕ್ಕಬಳ್ಳಾಪುರದ ರೇಣುಕಾ ರಾಜೇಂದ್ರನ್, ರೇಷ್ಮೆ ಸಚಿವರಾಗಿ ಕೆ.ಎಂ.ಮುನಿಯಪ್ಪ, ಹಾಗೂ ಕೃಷಿ ಸಚಿವರಾಗಿ ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಗಾದಿ ಏರಿದ್ದರು. ಇದೀಗ ಡಾ ಕೆ.ಸುಧಾಕರ್ ಮೂಲಕ ಜಿಲ್ಲೆಗೆ ಸೇರಿದ ಶಾಸಕರಿಗೆ ಮತ್ತೊಮ್ಮೆ ಸಚಿವರಾದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts