More

    ದೇಶಕ್ಕೇ ಮಾದರಿಯಾದ ಅಶೋಕ್ ಗ್ರಾಮವಾಸ್ತವ್ಯ: ಅಶಕ್ತರಿಗೆ ನ್ಯಾಯ ಕಲ್ಪಿಸಿದ ತೃಪ್ತಿ ಇದೆ ಎಂದ ಕಂದಾಯ ಸಚಿವ

    ಬಾಗಲಕೋಟೆ: ಆಡಳಿತ ಯಂತ್ರಕ್ಕೆ ವೇಗ, ಪಾರದರ್ಶಕತೆ ತಂದು ಬಡವರಿಗೆ ಸರ್ಕಾರಿ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಂದಾಯ ಸಚಿವರಾದ ಬಳಿಕ ಆರ್. ಅಶೋಕ್ ಪ್ರತಿ ತಿಂಗಳು ಮಾಡುತ್ತಾ ಬಂದಿರುವ ಗ್ರಾಮ ವಾಸ್ತವ್ಯವನ್ನು ಶನಿವಾರ ಬೀಳಗಿ ಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಕೈಗೊಂಡರು. ಬಿಜೆಪಿ ಸರ್ಕಾರದ ಈ ಕಾರ್ಯಕ್ರಮ ಇಡೀ ದೇಶಕ್ಕೆ ಮಾದರಿಯಾಗಿದ್ದು, ಬೇರೆ ರಾಜ್ಯಗಳು ಇದನ್ನು ಅನುಸರಿಸಲು ಮುಂದಾಗಿರುವುದು ವಿಶೇಷ.

    ಚುನಾವಣಾ ರಣಕಹಳೆ ಊದುವ ಸಮಯ ಹತ್ತಿ್ತ ದಲ್ಲಿದ್ದು, ಶನಿವಾರದ ಈ ವಾಸ್ತವ್ಯ ಸರ್ಕಾರದ ಪಾಲಿನ ಕೊನೆಯ ವಾಸ್ತವ್ಯವಾಗಿತ್ತು. ಇದನ್ನು ಸಚಿವ ಆರ್.ಅಶೋಕ್ ಅವರೇ ಮಾಧ್ಯಮಗಳೆದುರು ತಿಳಿಸಿ, ಈವರೆಗೆ ನಡೆಸಿದ 17 ‘ಜಿಲ್ಲಾಧಿಕಾರಿಗಳ ನಡೆ -ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿನ ನೆನಪುಗಳನ್ನು ಮೆಲುಕು ಹಾಕಿದರು. ಕಲಾದಗಿ ಗ್ರಾಮದ್ದು 18ನೇ ವಾಸ್ತವ್ಯವಾಗಿದೆ. ದೊಡ್ಡಬಳ್ಳಾಪುರದಿಂದ ಆರಂಭವಾದ ಈ ಕಾರ್ಯಕ್ರಮ ಇವತ್ತು ಕಲಾದಗಿವರೆಗೂ ಬಂದಿದೆ. ಉತ್ತರ ಕರ್ನಾಟಕದಲ್ಲಿಯೇ ಅತಿಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಇಂದಿನ ಗ್ರಾಮ ವಾಸ್ತವ್ಯ ಬಹುತೇಕ ಈ ಸರ್ಕಾರದ ಅವಧಿಯ ಕೊನೆಯದಾಗಬಹುದು. ಆದರೆ, ಮುಂದೆ ಮತ್ತೆ ನಮ್ಮದೇ ಸರ್ಕಾರ ಬರಲಿದ್ದು, ಆಗ ಮುಂದುವರಿಸುವುದಾಗಿ ವಿಶ್ವಾಸದಿಂದ ಹೇಳಿದರು.

    ಇನ್ನು ಹಿಂದಿನ ಗ್ರಾಮ ವಾಸ್ತವ್ಯಗಳ ಅನುಭವ ಹಾಗೂ ಅದರಿಂದಾಗಿಯೇ ಸಚಿವರಾಗಿ ಇಲಾಖೆಯಲ್ಲಿ ಮಹತ್ತರ ತೀರ್ವನಗಳನ್ನು ಕೈಗೊಳ್ಳಲು ಕಾರಣವಾಯಿತು. ಗ್ರಾಮ ವಾಸ್ತವ್ಯ ಎನ್ನುವುದು ಒಂದು ಪಾಠಶಾಲೆ ಇದ್ದಂತೆ. ಇಲ್ಲಿ ಕಲಿಯುವುದು ಬಹಳಷ್ಟಿರುತ್ತದೆ. ವಿಧಾನಸೌಧ, ಡಿಸಿ ಕಚೇರಿಯಲ್ಲಿ ಕುಳಿತರೆ ಏನು ಕಲಿಯಲು ಆಗಲ್ಲ. ಪುಸ್ತಕ ನೋಡಬೇಕು ಅಷ್ಟೆ. ವಾಸ್ತವವಾಗಿ ಜನರ ಭವಣೆ, ಸಂಕಷ್ಟ ತಿಳಿದುಕೊಳ್ಳಲು ಹಳ್ಳಿಗೆ ಬರಬೇಕು. 24 ಗಂಟೆ ಅವರೊಂದಿಗೆ ಕಾಲ ಕಳೆಯಬೇಕು. ಆಗ ಮಾತ್ರ ವಾಸ್ತವ ಸ್ಥಿತಿ ತಿಳಿಯಲು ಸಾಧ್ಯ. ಸಿಎಂ ಬಸವರಾಜ ಬೊಮ್ಮಾಯಿ ಹೇಳಿದಂತೆ ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೇವೆ. ಮನೆ ಬಾಗಿಲಿಗೆ ಪಿಂಚಣಿ, ಯಾರು ಬೇಕಾದರೂ ರೈತರಾಗುವ 79 ಎ, ಬಿ ಮಾಡುವಂಥದ್ದು. ಇಂತಹ ಹಲವು ಜನಪರ ಕಾರ್ಯ ಕೈಗೊಳ್ಳಲು ಗ್ರಾಮ ವಾಸ್ತವ್ಯವೇ ನನಗೆ ಪ್ರೇರಣೆ ಆಯಿತು ಎಂದು ಅಶೋಕ್ ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ‘ನಾನಿನ್ನೂ ಸಕ್ರಿಯ, ರಾಜಕೀಯದಿಂದ ನಿವೃತ್ತಿಯಾಗಿಲ್ಲ’ ಅಂದ್ರು ಮಾಜಿ ಸಿಎಂ ಯಡಿಯೂರಪ್ಪ: ಅವರ ಮುಂದಿನ ಗುರಿ ಏನು?

    ಕ್ಷೇತ್ರದ ಅಭಿವೃದ್ಧಿಯೇ ಗುರಿ

    ಕ್ಷೇತ್ರದ ಶಾಸಕ, ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಬೀಳಗಿ ಮತಕ್ಷೇತ್ರದಲ್ಲಿ 1.25 ಲಕ್ಷ ಎಕರೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಲಾದಗಿ ಗ್ರಾಮದ ಪುನರ್ ವಸತಿಗಾಗಿ 400 ಎಕರೆ ಗುರುತಿಸಿದ್ದು, 250 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬೀಳಗಿ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್​ಗಾಗಿ ವೈಯಕ್ತಿಕವಾಗಿ 3 ಕೋಟಿ ರೂ. ಕೊಟ್ಟಿರುವುದನ್ನು ತಿಳಿಸಿದರು. 320 ಕೋಟಿ ರೂ. ವೆಚ್ಚದಲ್ಲಿ ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಚಿಕ್ಕಸಂಗಮದಲ್ಲಿ ಪಕ್ಷಿಧಾಮಕ್ಕೆ 25 ಕೋಟಿ ರೂ., 40 ಕೋಟಿ ರೂ. ವೆಚ್ಚದಲ್ಲಿ ಕೆಆರ್​ಎಸ್ ಮಾದರಿಯ ಉದ್ಯಾನವನ ನಿರ್ಮಾಣ ಹಾಗೂ ಹೆರಕಲ್​ನಿಂದ ಆಲಮಟ್ಟಿ ಹಿನ್ನೀರಿನಲ್ಲಿ ಗೋವಾ ಮಾದರಿಯ ಜಲಪ್ರವಾಸಕ್ಕೆ 15 ಕೋಟಿ ರೂ. ಅನುದಾನ ದೊರೆತಿದೆ. ಹಲಕುರ್ಕಿಯಲ್ಲಿ ಟೆಕ್ಸ್​ಟೈಲ್ ಉದ್ಯಮ ಸ್ಥಾಪಿಸಲು 500 ಕೋಟಿ ರೂ. ಬಂಡವಾಳ ಹೂಡಲು ಉದ್ಯಮಿಗಳು ಒಪ್ಪಿದ್ದು, ಇದರಿಂದ 10ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಹೀಗೆ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದ ಅವರು, ಗ್ರಾಮ ವಾಸ್ತವ್ಯ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರು.

    ಈಗಲೂ ಗಡ್ಡೆ ಗೆಣಸೇ ಕೆಲವರ ಆಹಾರ

    ನಾನು ಕೈಗೊಂಡ ಎಲ್ಲ ಗ್ರಾಮ ವಾಸ್ತವ್ಯಗಳು ನನಗೆ ತೃಪ್ತಿ ತಂದುಕೊಟ್ಟಿವೆ. ಕಾಡಂಚಿನ ಗ್ರಾಮಗಳಿಗೂ ಹೋಗಿದ್ದೇನೆ. ಕಾಡಿನ ಜನರ ಮಧ್ಯೆ ವಾಸ ಮಾಡುವ ಜನರನ್ನು ನೋಡಿದಾಗ ಕಣ್ಣೀರು ಬರುತ್ತದೆ. 21ನೇ ಶತಮಾನ ದಾಟಿದ್ದೇವೆ. ಆದರೂ ಅವರು ಇವತ್ತಿಗೂ ಗಡ್ಡೆ ಗೆಣಸು ತಿಂದು ಬದುಕುತ್ತಿದ್ದಾರೆ. ಈವರೆಗೂ ಅವರ ಕಡೆಗೆ ಯಾರೂ ಗಮನ ಹರಿಸಿರಲಿಲ್ಲ. ಹೀಗಾಗಿ ಅವರಿಗೆ ಸಿಗಬೇಕಾದ ಎಲ್ಲ ಸರ್ಕಾರಿ ಸೌಲಭ್ಯ ಸಿಗಬೇಕೆಂದು ಆದೇಶ ಮಾಡಿದ್ದೇನೆ. ಇದೆಲ್ಲ ಸಾಧ್ಯವಾಗಿದೆ ಎಂದರೆ ಅದಕ್ಕೆ ಗ್ರಾಮ ವಾಸ್ತವ್ಯ ಕಾರಣ ಎಂದು ಆರ್. ಅಶೋಕ್ ಹೇಳಿದರು.

    ಅಮಿತ್ ಷಾ ಕರೆಸಿ ಗೊಲ್ಲರ ಹಟ್ಟಿ, ಕುರುಬರ ಹಟ್ಟಿ ಕಾರ್ಯಕ್ರಮ

    ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಲಂಬಾಣಿ ತಾಂಡಾಗಳಿಗೆ ಹೆಸರಿರಲಿಲ್ಲ. ಅವರ ತಾಂಡಾಗಳಿಗೆ ಹೆಸರು ಕೊಡುತ್ತಿದ್ದೇವೆ. ವಾಸ ಮಾಡುವ ಜಾಗವನ್ನು ಎಲ್ಲರಿಗೂ ನೋಂದಣಿ ಮಾಡಿಕೊಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಲಬುರಗಿಗೆ ಕರೆಯಿಸಿ 50 ಸಾವಿರ ಕುಟುಂಬಗಳಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಮುಂದೆ ದಾವಣಗೆರೆಯಲ್ಲಿ ಗೊಲ್ಲರ ಹಟ್ಟಿ, ಕುರುಬರ ಹಟ್ಟಿಯಲ್ಲಿ ಕಾರ್ಯಕ್ರಮ ಮಾಡಿ ಅಲ್ಲಿಯೂ 50 ಸಾವಿರ ಜನರಿಗೆ ಈ ರೀತಿ ಅನುಕೂಲ ಮಾಡಿಕೊಡಲಿದ್ದೇವೆ. ಇದಕ್ಕಾಗಿ ಅಮಿತ್ ಷಾ ಅವರನ್ನು ಕರೆಸಲು ಚಿಂತನೆ ನಡೆಸಿದ್ದೇವೆ ಎಂದು ಆರ್. ಅಶೋಕ್ ತಿಳಿಸಿದರು.

    ಸಚಿವರಿಗೆ ಭವ್ಯ ಸ್ವಾಗತ

    ಕಲಾದಗಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಜನರು ಭವ್ಯ ಸ್ವಾಗತ ಕೋರಿದರು. ಗ್ರಾಮ ಪ್ರವೇಶ ದ್ವಾರದ ಬಳಿ ಇರುವ ಸಾಯಿ ಮಂದಿರದಿಂದ ಮೆರವಣಿಗೆಯಲ್ಲಿ ಕರೆ ತರಲಾಯಿತು. ಅಪಾರ ಸಂಖ್ಯೆಯ ಮಹಿಳೆಯರು ಕುಂಭ ಹೊತ್ತು ಸ್ವಾಗತಿಸಿದರು. ಟ್ರ್ಯಾಕ್ಟರ್ ಹತ್ತಿದ ಸಚಿವರಿಗೆ ಕ್ಷೇತ್ರದ ಶಾಸಕ, ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಸಂಸದ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸಾಥ್ ನೀಡಿದರು. ಟ್ರ್ಯಾಕ್ಟರ್ ಮುಂದೆ ಅನೇಕ ರೈತರು ಎತ್ತಿನ ಬಂಡಿಗಳೊಂದಿಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಝಾಂಜ್, ಡೊಳ್ಳು ಕುಣಿತ, ಕರಡಿ ಮಜಲಿನ ವೈಭವ ಕಂಡು ಬಂದಿತು. ಕಲಾದಗಿ ಗ್ರಾಮದ ಗುರುಲಿಂಗೇಶ್ವರ ಪ್ರೌಢಶಾಲೆ ಮೈದಾನದಲ್ಲಿನ ಮುಖ್ಯ ವೇದಿಕೆವರೆಗೂ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

    1 ಕೋಟಿ ರೂ. ಅನುದಾನ: ಗ್ರಾಮ ವಾಸ್ತವ್ಯ ಮಾಡಿದ ಕಲಾದಗಿ ಗ್ರಾಮದ ಅಭಿವೃದ್ಧಿಗಾಗಿ ಕಂದಾಯ ಇಲಾಖೆಯಿಂದ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಸಚಿವ ಅಶೋಕ್ ಘೊಷಿಸಿದರು. ಗ್ರಾಮದಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಳಕೆ ಮಾಡಿಕೊಳ್ಳಬಹುದು ಎಂದರು.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರ ಹತ್ಯೆ; ನಾಲ್ಕು ಕೊಲೆಗಳ ಆರೋಪಿಯ ತಾಯಿ ಹೇಳಿದ್ದೇನು?

    28,332 ಫಲಾನುಭವಿಗಳು: ಕಲಾದಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಳುಗಡೆ ವ್ಯಾಪ್ತಿಗೆ ಬರುವ 1,970 ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ, ಸೇರಿ ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಇಲಾಖೆ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಯುಷ್, ಕಾರ್ವಿುಕ, ಅರಣ್ಯ, ರೇಷ್ಮೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮೀನುಗಾರಿಕೆ, ಸಮಾಜ ಕಲ್ಯಾಣ, ಕೌಶಲಾಭಿವೃದ್ಧಿ, ಕೈಮಗ್ಗ ಮತ್ತು ಜವಳಿ, ದೇವರಾಜು ಅರಸು ನಿಗಮ, ಜಿಲ್ಲಾ ನಗರಾಭಿವೃದ್ಧಿ ಕೋಶ ಸೇರಿ ಒಟ್ಟು 28,332 ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ಸಾಂಕೇತಿಕವಾಗಿ 122 ಜನರಿಗೆ ಸಚಿವ ಆರ್. ಅಶೋಕ್ ವಿತರಿಸಿದರು.

    ತುಳಸಿಗೇರಿ ಆಂಜನೇಯ ದೇಗುಲ ದರ್ಶನ: ಗ್ರಾಮ ವಾಸ್ತವ್ಯಕ್ಕಾಗಿ ಬೀಳಗಿ ಕ್ಷೇತ್ರದ ಕಲಾದಗಿಗೆ ಬರುವ ಮಾರ್ಗ ಮಧ್ಯೆ ತುಳಸಿಗೇರಿ ಗ್ರಾಮದ ಸುಪ್ರಸಿದ್ಧ ಆಂಜನೇಯ ದೇವಸ್ಥಾನಕ್ಕೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿದರು. ಪುರಾತನ ಕಾಲದ ಹಾಗೂ ಅಪಾರ ಭಕ್ತರನ್ನು ಹೊಂದಿರುವ ಆಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ವಿಪ ಸದಸ್ಯ ಪಿ.ಎಚ್. ಪೂಜಾರ ಇದ್ದರು.

    ದೆಹಲಿಯಲ್ಲಿ ನಡೆದ ಕನ್ನಡ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಿಗೇ ಅವಮಾನ: ಬೇಸರಗೊಂಡು ಹೊರ ಬಂದ ಜೋಶಿ

    18 ವರ್ಷ ತುಂಬಿದವರಿಗೆಂದೇ ಬಿಬಿಎಂಪಿಯಿಂದ ಜಾಗೃತಿ ಅಭಿಯಾನ: ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts