More

    ಮೂರು ತಿಂಗಳಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇತ್ಯರ್ಥ: ಸಚಿವ ಅರವಿಂದ ಲಿಂಬಾವಳಿ ಹೇಳಿಕೆ

    ಉಡುಪಿ: ರಾಜ್ಯದಲ್ಲಿನ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಮೂರು ತಿಂಗಳ ಒಳಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುತ್ತದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

    ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜತೆಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಮ್ಡ್ ಫಾರೆಸ್ಟ್‌ನಿಂದ ಎಷ್ಟು ಪ್ರದೇಶವನ್ನು ಮುಕ್ತಗೊಳಿಸಬಹುದು ಎಂಬುದನ್ನು ವಿಧಾನಸಭಾವಾರು ವರದಿ ಪಡೆಯಲಿದ್ದೇನೆ. ಜಿಲ್ಲೆಯಲ್ಲಿ 48,000 ಹೆಕ್ಟೆರ್ ಡೀಮ್ಡ್ ಫಾರೆಸ್ಟ್ ಇದೆ. ಕುಮ್ಕಿ, ಬಾಣೆ ಇತ್ಯಾದಿ ಭೂಮಿ ಬಗ್ಗೆಯೂ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ರಾಜ್ಯಮಟ್ಟದ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಯತ್ನಿಸುವುದಾಗಿ ಭರವಸೆ ನೀಡಿದರು.
    ನೀಲಾವರದಲ್ಲಿ ಪೇಜಾವರ ಶ್ರೀಗಳ ಹೆಸರಿನಲ್ಲಿ ಸ್ಮತಿವನ ನಿರ್ಮಾಣಕ್ಕೆ ಭಾನುವಾರ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಲೋಕೋಪಯೋಗಿ ಇಲಾಖೆಯಿಂದ ಬ್ರಹ್ಮಾವರ ರಸ್ತೆ ವಿಸ್ತರಣೆ ಸಂದರ್ಭ ಕಡಿಯಲಾದ ಸಾವಿರ ಮರಗಳಿಗೆ ಪ್ರತಿಯಾಗಿ 10,000 ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.

    ಮೀಸಲು ಅರಣ್ಯ ಪ್ರದೇಶದಲ್ಲಿ ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಇತ್ಯರ್ಥಪಡಿಸಿಕೊಳ್ಳಬೇಕಾಗುತ್ತದೆ. ಉಳಿದ ಅರಣ್ಯ ಪ್ರದೇಶದಲ್ಲಿರುವ ರಸ್ತೆಗಳ ಅಭಿವೃದ್ಧಿಗೆ ಅನುಮತಿ ನೀಡುವ ಅಧಿಕಾರವನ್ನು ಜಿಲ್ಲಾ ಅರಣ್ಯಾಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಶಾಸಕ ಸುನೀಲ್ ಕುಮಾರ್, ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಉಪಸ್ಥಿತರಿದ್ದರು.

    ಏನೇನಂದ್ರು ಮಿನಿಸ್ಟ್ರು?:
    – ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿರುವುದು ನಿಜ. ಇದನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ್ದು. ನೀರಾವರಿ ಇಲಾಖೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ. ಈ ವಿಚಾರದಲ್ಲಿ ಕುಮಾರಸ್ವಾಮಿ – ಸುಮಲತಾ ಪರಸ್ಪರ ಆರೋಪ ಮೂಲಕ ಕೀಳು ರಾಜಕಿಯ ಸರಿಯಲ್ಲ.
    – ಕೋವಿಡ್ ಮೊದಲ ಅಲೆ ಸಂದರ್ಭ 16 ಸಾವಿರ ಕಲಾವಿದರಿಗೆ ತಲಾ 3 ಸಾವಿರ ರೂ. ಸಹಾಯಧನ ನೀಡಲಾಗಿದೆ. ಈ ವರ್ಷ 20,713 ಮಂದಿ ಅರ್ಜಿ ಹಾಕಿದ್ದು, ಎಲ್ಲರಿಗೂ ಪರಿಹಾರ ಧನ ಮಂಜೂರು ಮಾಡಲಾಗಿದೆ.
    – ಪ್ರತಿ ಜಿಲ್ಲೆಗೂ ರಂಗಾಯಣ ಬೇಕು ಎಂಬ ಬೇಡಿಕೆ ಇದೆ. ಇಲಾಖೆಯ ಅರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಉಡುಪಿಗೆ ರಂಗಮಂದಿರ ಮಂಜೂರು ಮಾಡುವ ಬಗ್ಗೆ ಪರಿಶೀಲಿಸಲಾಗುವುದು.

    ಕರಾವಳಿ ಬೆಲ್ಟ್‌ಗೆ ಕಾಂಡ್ಲಾವನ: ಕುಂದಾಪುರ: ಯಡಿಯೂರಪ್ಪ ನೇತೃತ್ವದ ಹಿಂದಿನ ಸರ್ಕಾರ ಜಾರಿಗೆ ತಂದ ಹಸಿರು ಕವಚ ಯೋಜನೆ ಫಲವಾಗಿ ಕರಾವಳಿ ತೀರದಲ್ಲಿ ಕಾಂಡ್ಲಾವನ ವೃದ್ಧಿಯಾಗಿದೆ. ಕರಾವಳಿ ವಲಯದಲ್ಲಿ ಸಂಪೂರ್ಣ ಕಾಂಡ್ಲಾ ಬೆಳೆಸುವ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
    ಕುಂದಾಪುರ ಚರ್ಚ್ ರಸ್ತೆ ಬಳಿ ಕೋಡಿ ನದಿಪಾತ್ರದಲ್ಲಿ ಕಾಂಡ್ಲಾ ವನ ವೀಕ್ಷಿಸಿದ ಅವರು, ರಕ್ಷಿತಾರಣ್ಯ, ವನ್ಯಜೀವಿ ಅರಣ್ಯದಲ್ಲಿ ಪ್ರವಾಸಕ್ಕೆ ನಿರ್ಬಂಧವಿದ್ದು, ಕೆಲವೊಂದು ನಿಯಮಗಳೊಂದಿಗೆ ಬಂಡೀಪುರ ಹಾಗೂ ಇತರ ಪ್ರದೇಶದಲ್ಲಿ ಪ್ರವಾಸಕ್ಕೆ ಅವಕಾಶ ನೀಡಲಾಗಿದೆ. ಆದರೆ ಕೋರ್ ಏರಿಯಾ ಫಾರೆಸ್ಟ್‌ಗೆ ಅವಕಾಶವಿಲ್ಲ. ಇಂದಿನ ತಂತ್ರಜ್ಞಾನ ಬಳಸಿ, ವಿಡಿಯೋ ಗ್ರಾಫ್ ಮಾಡಿ, ಇಕೋ ಟೂರಿಸಂ ಸೆಂಟರ್ ಮಾಡಿ ಕೋರ್ ಏರಿಯಾ ಹೇಗಿದೆ ಎಂದು ತೋರಿಸುವ ಕಾರ್ಯ ನಡೆಯುತ್ತಿದೆ. ಡಿಆರ್‌ಟಿಯಲ್ಲಿ ಈ ಕೆಲಸ ಆರಂಭವಾಗಿದೆ ಎಂದು ತಿಳಿಸಿದರು. ಕಸ್ತೂರಿ ರಂಗನ್ ವರದಿ ಬಗ್ಗೆ ಸರ್ಕಾರ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಆಕ್ಷೇಪಣೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.

    ಮಂಕಿ ಪಾರ್ಕ್ ನಿರ್ಮಾಣಕ್ಕೆ ತಜ್ಞರ ನೇಮಕ
    ಹೆಬ್ರಿ: ಕರಾವಳಿ ಭಾಗದಲ್ಲಿ ಕೃಷಿ ಬೆಳೆಗಳು ಮಂಗಗಳ ಹಾವಳಿಯಿಂದ ತತ್ತರಿಸಿದ್ದು, ಇವುಗಳ ನಿಯಂತ್ರಣಕ್ಕೆ ಹೆಬ್ರಿ ಪರಿಸರದಲ್ಲಿ ಮಂಕಿ ಪಾರ್ಕ್ ನಿರ್ಮಾಣಕ್ಕೆ ತಜ್ಞರ ತಂಡ ನೇಮಕ ಮಾಡಲಾಗುವುದು ಎಂದು ಹೆಬ್ರಿಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಉದ್ಘಾಟಿಸಿದ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

    ಥೀಂ ಪಾರ್ಕ್ ಅಭಿವೃದ್ಧಿಗೆ 2 ಕೋಟಿ ರೂ.
    ಕಾರ್ಕಳ: ಕೋಟಿ ಚೆನ್ನಯ ಥೀಂ ಪಾರ್ಕ್ ಅಭಿವೃದ್ಧಿಗೆ ಸರ್ಕಾರದಿಂದ 2 ಕೋಟಿ ರೂ ಅನುದಾನ ಒದಗಿಸಲಾಗುವುದು. ಪ್ರಸಕ್ತ ನೀಡುತ್ತಿರುವ 10 ಲಕ್ಷ ರೂ. ನಿರ್ವಹಣಾ ವೆಚ್ಚವನ್ನು ಪ್ರತಿ ವರ್ಷ ನೀಡಲಾಗುವುದು ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.
    ಕಾರ್ಕಳ ಕೋಟಿ ಚೆನ್ನಯ ಥೀಂ ಪಾರ್ಕ್ ಪರಿಸರದಲ್ಲಿ ಸಚಿವರು ಸಸಿಗಳನ್ನು ನೆಟ್ಟರು. ಶಾಸಕ ವಿ.ಸುನೀಲ್‌ಕುಮಾರ್, ತಹಸೀಲ್ದಾರ್ ಪ್ರಕಾಶ್ ಎಸ್. ಮರವಳ್ಳಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಮಾಕೇಶವ್, ಸಹಕಾರಿ ಧುರೀಣ ಭಾಸ್ಕರ ಕೋಟ್ಯಾನ್, ಪುರಸಭಾ ಮಾಜಿ ಅಧ್ಯಕ್ಷ ಚಂದ್ರಹಾಸ ಸುವರ್ಣ, ಮಹಾವೀರ ಹೆಗ್ಡೆ, ರವೀಂದ್ರ ಮೊಯಿಲಿ, ಅನಂತಕೃಷ್ಣ ಶೆಣೈ, ನವೀನ್ ನಾಯಕ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts