More

    ಸಮಸ್ಯೆ ಬಗೆಹರಿಸಲು ಯತ್ನ: ಮೀನುಗಾರಿಕೆ, ಬಂದರು ಸಚಿವ ಎಸ್.ಅಂಗಾರ ಹೇಳಿಕೆ

    ಬೈಂದೂರು: ಮೀನುಗಾರರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮೀನುಗಾರಿಕಾ ಸಚಿವ ಎಸ್.ಅಂಗಾರ ಹೇಳಿದರು.
    ಮೀನುಗಾರಿಕೆ ಹಾಗೂ ಬಂದರು ಸಚಿವರಾಗಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಥಮ ಬಾರಿ ಆಗಮಿಸಿದ ಅವರಿಗೆ ಉಪ್ಪುಂದ ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ವತಿಯಿಂದ ಸೋಮವಾರ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

    ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಅಧ್ಯಕ್ಷ ಎ.ಆನಂದ ಖಾರ್ವಿ ಮಾತನಾಡಿ, ಎರಡು ತಿಂಗಳಿಂದ ಸೀಮೆಎಣ್ಣೆ ಸಿಗುತ್ತಿಲ್ಲ. 400 ಲೀ ಸೀಮೆಎಣ್ಣೆ ಬೇಡಿಕೆ ಇದೆ. ಸೀಮಿತ ಮೀನುಗಾರರಿಗೆ ಮಾತ್ರ ಇಂಜಿನ್ ಸಬ್ಸಿಡಿ ನೀಡಲಾಗಿದೆ. ಎಲ್ಲ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಗಮನ ಹರಿಸಬೇಕು. ಕೊಡೇರಿ ಬಂದರಿನ ಎರಡು ಪ್ರದೇಶಗಳ ಜೆಟ್ಟಿ ವಿಸ್ತರಣೆ, ಮೀನುಗಾರಿಕಾ ರಸ್ತೆ ದುರಸ್ತಿ, ಡ್ರೆಜಿಂಗ್ ಸಮಸ್ಯೆ ಸರಿಪಡಿಸಬೇಕಿದೆ. ಮೀನುಗಾರರ ಸಾಲಮನ್ನಾ ಪೂರ್ಣಪ್ರಮಾಣದಲ್ಲಿ ಆಗಿಲ್ಲ. ತಾಂತ್ರಿಕ ದೋಷಗಳನ್ನು ನಿವಾರಿಸಬೇಕು. ಶೂನ್ಯ ಬಡ್ಡಿದರದ ಸಾಲದ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

    ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ
    ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವ ಅಂಗಾರ, 60 ಸಾವಿರ ಲೀಟರ್ ಸೀಮೆಎಣ್ಣೆ ಬಿಡುಗಡೆಗೆ ಆದೇಶ ನೀಡಲಾಗಿದೆ. ಹೆಚ್ಚುವರಿ ಸೀಮೆಎಣ್ಣೆ ಬೇಡಿಕೆ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಯೋಜನೆಗಳು ಜನರಿಗೆ ಸುಲಭವಾಗಿ ದೊರಕುವಂತಾಗಲು ಅದರೊಳಗಿನ ನ್ಯೂನತೆಗಳನ್ನು ಸರಿಪಡಿಸಿ ಸೌಲಭ್ಯಗಳು ಫಲಾನುಭವಿಗಳಿಗೆ ದೊರಕಿಸಿಕೊಡಲು ಪ್ರಯತ್ನ ಮಾಡಲಾಗುವುದು. ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.

    ಕಾರ್ಯಕರ್ತರೊಡನೆ ಸಮಾಲೋಚನೆ
    ಬೈಂದೂರಿಗೆ ಸೋಮವಾರ ಬೆಳಗ್ಗೆ ಆಗಮಿಸಿದ ಸಚಿವ ಎಸ್.ಅಂಗಾರ, ಬಿಜೆಪಿ ಕಚೇರಿಯಲ್ಲಿ ಶಾಸಕರು ಹಾಗೂ ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಿದರು. ನಂತರ ಜೀರ್ಣೋದ್ಧಾರಗೊಂಡು ಫೆ.17ರಂದು ಲೋಕಾರ್ಪಣೆಗೊಳ್ಳಲಿರುವ ಅರಮಕೋಡಿ ಶ್ರೀ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿಂದ ಕೊಡೇರಿ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಮೀನುಗಾರರ ಮನೆಯಲ್ಲಿ ವಾಸ್ತವ್ಯ
    ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಸೋಮವಾರ ಭೇಟಿ ನೀಡಿದ ಸಚಿವರು, ಕಾಮಗಾರಿ ಮತ್ತು ಜೆಟ್ಟಿ ಕುಸಿತ ಪ್ರದೇಶವನ್ನು ವೀಕ್ಷಿಸಿದರು. ಮೀನುಗಾರರ ಸಮಸ್ಯೆಗಳನ್ನು ಅರಿಯಲು ಈ ಭಾಗದ ಮೀನುಗಾರರ ಮನೆಯಲ್ಲಿ ಒಂದು ದಿನ ವಾಸ್ತವ್ಯ ಮಾಡಲು ಯೋಚನೆ ನಡೆಸಿದ್ದೇನೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts