More

    ಕೆಂಪು ಕಲ್ಲು ಗಣಿಗೆ ಲೋಕಲ್ ಟಾಸ್ಕ‌ಫೋರ್ಸ್

    ವೇಣುವಿನೋದ್ ಕೆ.ಎಸ್.ಮಂಗಳೂರು
    ಕೆಂಪುಕಲ್ಲು ಗಣಿಗಾರಿಕೆಗೆ ಅನುಮತಿ ಕೊಡುವಾಗ ಸ್ಥಳೀಯವಾಗಿ ಸಮಸ್ಯೆಯಾಗಬಹುದೇ ಎಂಬುದನ್ನು ಅರಿಯಲು ಗ್ರಾಮಮಟ್ಟದಲ್ಲಿ ಟಾಸ್ಕ್‌ಫೋರ್ಸ್ ರಚಿಸಲು ಜಿಲ್ಲಾಧಿಕಾರಿ ತೀರ್ಮಾನಿಸಿದ್ದಾರೆ.

    ಮುಡಿಪುವಿನಿಂದ ಆಂಧ್ರಪ್ರದೇಶಕ್ಕೆ ಕೆಂಪು ಮಣ್ಣು ಸಾಗಾಟದ ಬಳಿಕ ದಿಢೀರ್ ಆಗಿ ಕೆಂಪು ಕಲ್ಲುಗಣಿಗಾರಿಕೆ ಬಗ್ಗೆ ಗಮನ ಕೇಂದ್ರೀಕೃತವಾಗಿತ್ತು. ಆ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಪಟ್ಟಾ ಜಾಗದಲ್ಲಿ ಕಲ್ಲು ತೆಗೆಯಲು ಅನುಮತಿ ಇದೆ. ಆದರೆ ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಅನುಸರಿಸಬೇಕು, ಅಕ್ರಮವಾಗಿ ಮಾಡುತ್ತಿರುವವರಿಗೆ ಅದನ್ನು ಸಕ್ರಮಗೊಳಿಸಲು ಕಾಲಾವಕಾಶ ಕಲ್ಪಿಸುವುದಾಗಿ ಹೇಳಿದ್ದರು.

    ಬಂದಿರುವ 250ಕ್ಕೂ ಹೆಚ್ಚು ಅರ್ಜಿಗಳನ್ನು ಈ ತಿಂಗಳೊಳಗೆ ವಿಲೇ ಮಾಡಲು ಗಣಿ ಸಚಿವ ಸಿ.ಸಿ.ಪಾಟೀಲ್ ಕೂಡ ಸೂಚನೆ ನೀಡಿದ್ದರು. 2020ರ ಜೂನ್‌ನಿಂದ ಕೆಎಂಎಂಆರ್ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಕೃಷಿಕರು ಪಟ್ಟಾ ಜಾಗದಲ್ಲಿ ಕೃಷಿ ಉದ್ದೇಶಕ್ಕಾಗಿ ಅಭಿವೃದ್ಧಿ ಮಾಡುವುದಾದರೆ ಕಲ್ಲು ತೆಗೆಯಲು, ಮಾರಲು ಅವಕಾಶ ನೀಡಲಾಗುತ್ತದೆ.

    ಸ್ಥಳೀಯ ಟಾಸ್ಕ್‌ಫೋರ್ಸ್ ಯಾಕೆ?: ಜಿಲ್ಲಾಮಟ್ಟದಲ್ಲಿ ಕಲ್ಲು, ಮರಳು ಕುರಿತು ಸಾಮಾನ್ಯವಾಗಿ ಜಿಲ್ಲಾ ಮಟ್ಟದ ಡಿಸಿ ನೇತೃತ್ವದ ಟಾಸ್ಕ್‌ಫೋರ್ಸ್ ನಿರ್ಣಯ ಕೈಗೊಳ್ಳುತ್ತದೆ. ಆದರೆ ಇದುವರೆಗೆ ಗ್ರಾಮೀಣ ಭಾಗಗಳಲ್ಲಿ ನೇರವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸೀನಿಯರ್ ಭೂ ವಿಜ್ಞಾನಿಗಳು ಕರ್ನಾಟಕ ಮೈನರ್ ಮಿನರಲ್ ರೂಲ್ಸ್ 1994ರ ಸೆಕ್ಷನ್ 3ಎ ಅನ್ವಯ ಅನುಮತಿ ನೀಡುತ್ತಿದ್ದರು. ಆದರೆ ಈ ವಿಧಾನದಲ್ಲಿ ಗಣಿ ಅಧಿಕಾರಿಗಳಿಗೆ ಸ್ಥಳೀಯ ಸಮಸ್ಯೆಗಳ ಅರಿವಿರುವುದಿಲ್ಲ. ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್‌ನಲ್ಲಿ ಚರ್ಚೆಗೆ ಬಾರದಿರುವುದರಿಂದ ಜಿಲ್ಲಾಧಿಕಾರಿಗಳಿಗೂ ಗೊತ್ತಾಗುವುದಿಲ್ಲ. ಇದಕ್ಕಾಗಿ ಸ್ಥಳೀಯ ಗ್ರಾಮ ಮಟ್ಟದ ಅಧಿಕಾರಿಗಳನ್ನೂ ಜವಾಬ್ದಾರರನ್ನಾಗಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಈ ವಿಲೇಜ್ ಟಾಸ್ಕ್‌ಫೋರ್ಸ್ ರಚನೆಗೆ ಮುಂದಾಗಿದ್ದಾರೆ.

    ವಾಣಿಜ್ಯ ಮಟ್ಟವಾದರೆ ಕ್ವಾರಿ ಲೀಸ್: ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ನಡೆಸುವುದಿದ್ದರೆ ಕ್ವಾರಿ ಲೀಸ್ ಅಡಿಯಲ್ಲಿ ಅನುಮತಿ ಆಗಬೇಕು. ಇದಕ್ಕೆ ಕಡ್ಡಾಯವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಶಿಫಾರಸು ಇರಬೇಕು. ಮುಡಿಪುವಿನಲ್ಲಿ ಸದ್ಯದ ಮಾಹಿತಿ ಪ್ರಕಾರ ನಡೆದಿರುವ ಕಲ್ಲುಗಣಿಗಾರಿಕೆಗೆ ಟಾಸ್ಕ್‌ಫೋರ್ಸ್ ಶಿಫಾರಸು ಆಗಿಲ್ಲ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಆದರೆ 2018ರಿಂದೀಚೆಗೆ ಗಣಿಗಾರಿಕೆ ಆಗುತ್ತಿದೆ, ಕೆಂಪುಮಣ್ಣು ಕೂಡ ಹೊರರಾಜ್ಯದ ಸಿಮೆಂಟ್ ಕೈಗಾರಿಕೆಗಳಿಗೆ ನಿರಂತರ ಸಾಗಾಟ ಆಗುತ್ತಿದೆ. ಆದರೆ ರಾಜಸ್ವ ಪಾವತಿಯಾಗುತ್ತಿದೆ. ಹಾಗಾಗಿ ಇಲ್ಲಿ ಪ್ರಕ್ರಿಯಾ ಲೋಪಗಳಾಗಿವೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ.

    ರೆಡ್ ಬಾಕ್ಸೈಟ್ ಅಲ್ಲ, ಸಿಲಿಕಾ ಹೆಚ್ಚಿರುವ ಮಣ್ಣು: ಗಣಿಗಾರಿಕೆ ಇಲಾಖೆ ಅಧಿಕಾರಿಗಳ ಪ್ರಕಾರ ಮುಡಿಪುವಿನಲ್ಲಿರುವ ಮಣ್ಣು ರೆಡ್ ಬಾಕ್ಸೈಟ್ ಅಲ್ಲ, ಅಂತಹ ಪದವೂ ಇಲ್ಲ. ಅದು ಸಿಲಿಕಾ ಅಂಶ ಹೆಚ್ಚಿರುವ ಮಣ್ಣು. ಸಾಮಾನ್ಯವಾಗಿ ಅಲ್ಯುಮಿನಿಯಂ ಅಂಶ ಶೇ.20ಕ್ಕಿಂತ ಹೆಚ್ಚು, ಸಿಲಿಕಾ ಅಂಶ ಶೇ.5ಕ್ಕಿಂತ ಕಡಿಮೆ ಇರುವ ಮಣ್ಣಿನಿಂದ ಅಲ್ಯುಮಿನಿಯಂ ತಯಾರಿಸಲಾಗುತ್ತದೆ, ಅದನ್ನು ಬಾಕ್ಸೈಟ್ ಎನ್ನಲಾಗುತ್ತದೆ. ಆದರೆ ಮುಡಿಪಿನಲ್ಲಿರುವ ಮಣ್ಣಿನಲ್ಲಿ ಸಿಲಿಕಾ ಅಂಶ ಅಧಿಕ ಇರುವುದರಿಂದ ಅದು ಅಲ್ಯುಮಿನಿಯಂಗೆ ಆಗದು ಬದಲು ಸಿಮೆಂಟ್‌ಗೆ ಬಳಕೆಯಾಗುತ್ತದೆ.

    ಮಣ್ಣಿಗೆ ರಾಜಸ್ವ ಹೆಚ್ಚು: ಕೆಂಪು ಕಲ್ಲು ಟನ್‌ಗೆ 60 ರೂ. ರಾಜಸ್ವ ಪಾವತಿಸಿದರೆ ಮಣ್ಣಿಗೆ 80 ರೂ. ರಾಜಸ್ವ ಪಾವತಿಯಾಗುತ್ತದೆ. ಕೆಂಪು ಮಣ್ಣಿನಿಂದ ಗಣಿ ಇಲಾಖೆಗೆ 2019ರಲ್ಲಿ 2.5 ಕೋಟಿ ರೂ.ನಷ್ಟು ರಾಜಸ್ವ ಬಂದಿದೆ. ಕಳೆದ ಸಾಲಿನಲ್ಲಿ ಕೋವಿಡ್‌ಕಾರಣದಿಂದ ಇದು 1 ಕೋಟಿ ರೂ.ನಷ್ಟು ಇಳಿಕೆಯಾಗಿದೆ. ಅಂತಾರಾಜ್ಯ ಮಣ್ಣು ಸಾಗಿಸುವುದಕ್ಕೆ ಈ ವರೆಗೆ 13 ಮಂದಿಗೆ ಲೀಸ್ ಕೊಡಲಾಗಿದೆ. ಇವೆಲ್ಲವೂ 5ರಿಂದ 20 ವರ್ಷದ ಲೀಸ್ ಆಗಿವೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts