More

    ಗಣಿಗಾರಿಕೆಯಿಂದ ಭೂಕಂಪನ, ಪುಷ್ಪಗಿರಿ ಅಭಯಾರಣ್ಯದಲ್ಲಿ ಭೌಗೋಳಿಕ ವಿನ್ಯಾಸಕ್ಕೆ ಧಕ್ಕೆ

    ಶ್ರವಣ್ ಕುಮಾರ್ ನಾಳ ಪುತ್ತೂರು

    ಪುಷ್ಪಗಿರಿ ರಾಷ್ಟ್ರೀಯ ಉದ್ಯಾನದ ತಪ್ಪಲು ಪ್ರದೇಶ ಸುಳ್ಯ, ಕೊಡಗು ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಣಿಗಾರಿಕೆಯೇ ಭೂಕಂಪನಕ್ಕೆ ಕಾರಣ!
    ಮಂಗಳೂರು ವಿಶ್ವವಿದ್ಯಾಲಯದ ಸಾಗರ ಮತ್ತು ಭೂವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ, ಹಿರಿಯ ಭೂ ವಿಜ್ಞಾನಿ ಪ್ರೊ.ಗಂಗಾಧರ್ ಭಟ್ ನೇತೃತ್ವದ ತಜ್ಞರ ತಂಡ ಇತ್ತೀಚೆಗೆ ಪುಷ್ಪಗಿರಿ, ಸಂಪಾಜೆ, ಸುಳ್ಯ ಭಾಗದಲ್ಲಿ ಅಧ್ಯಯನ ನಡೆಸಿ ಮಹತ್ವದ ಅಂಶಗಳನ್ನು ದಾಖಲಿಸಿದೆ.
    ಕಳೆದ ಎಂಟು ವರ್ಷಗಳಿಂದ ಗುತ್ತಿಗಾರು ಕಾನನದ ಮಧ್ಯೆ ಸದ್ದಿಲ್ಲದೆ ನಡೆಯುತ್ತಿರುವ ಕೆಂಪುಕಲ್ಲು ಗಣಿಗಾರಿಕೆ, ಪಶ್ಚಿಮಘಟ್ಟದ ರೆಡ್‌ಸ್ಟೋನ್ ವ್ಯಾಲಿ ಎಂದೇ ಪ್ರಸಿದ್ಧಿ ಪಡೆದ ಪುಷ್ಪಗಿರಿ ಅಭಯಾರಣ್ಯದ ಬೆಟ್ಟಗಳಲ್ಲಿ ನಡೆದಿರುವ ಹರಳು ದಂಧೆ ಸಹಿತ ವಿವಿಧ ಗಣಿಗಾರಿಕೆಗಳಿಂದ ನೈಸರ್ಗಿಕ ಭೌಗೋಳಿಕ ವಿನ್ಯಾಸಕ್ಕೆ ಹಾನಿಯಾಗಿರುವುದು ಅಧ್ಯಯನದಲ್ಲಿ ಖಚಿತಗೊಂಡಿದೆ. ಈ ಶೋಧನಾ ವರದಿಯು ಅರಣ್ಯ ಇಲಾಖಾ ಅಧಿಕಾರಿಗಳ ನಿದ್ದೆಗೆಡಿಸಿದೆ. ಈ ಎಲ್ಲ ದಂಧೆಗಳು ನಡೆದಿರುವುದು ಅರಣ್ಯ ಇಲಾಖಾ ಅಧೀನದ ಬೃಹತ್ ಬೆಟ್ಟಗುಡ್ಡ ವ್ಯಾಪ್ತಿಗಳಲ್ಲಿ ಎಂಬುದು ಇದಕ್ಕೆ ಕಾರಣ.

    50 ಎಕರೆಯಲ್ಲಿ ಗಣಿಗಾರಿಕೆ: ಗುತ್ತಿಗಾರು ಸರ್ಕಾರಿ ಅರಣ್ಯ ವ್ಯಾಪ್ತಿಯ 50 ಎಕರೆಗೂ ಅಧಿಕ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅನಧಿಕೃತ ಗಣಿಗಾರಿಕೆಗೂ ಪ್ರಾಕೃತಿಕ ದುರಂತಕ್ಕೂ ಸಂಬಂಧವಿದೆ. 150 ಮೀಟರ್ ಎತ್ತರವಿದ್ದ ಬೃಹತ್ ಗುಡ್ಡವನ್ನು ಮೈದಾನದವರೆಗೆ ಬೋಳಿಸಿ ಗಣಿಗಾರಿಕೆ ನಡೆಸಿದ್ದ ಬಗ್ಗೆ ಸುಳ್ಯ ತಾಲೂಕು ಆಡಳಿತ, ಜಿಲ್ಲಾಡಳಿತ, ಜಿಲ್ಲಾ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಕ್ರಮ ಕೈಗೊಂಡಿಲ್ಲ.
    ಗುತ್ತಿಗಾರು ಗಣಿಗಾರಿಕಾ ಪ್ರದೇಶಕ್ಕೆ ಬಂಟಮಲೆ, ಇದಕ್ಕೆ ಎದುರುಮುಖವಾಗಿ ಪಶ್ಚಿಮಘಟ್ಟ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟವ್ಯಾಪ್ತಿಗಳಿವೆ. ಗುತ್ತಿಗಾರಿನ ಅನಧಿಕೃತ ಗಣಿಗಾರಿಕಾ ವ್ಯಾಪ್ತಿಯಲ್ಲೇ ಕೊಲ್ಲಮೊಗ್ರು ಅರಣ್ಯ ಭಾಗವಿದೆ. 2018ರಲ್ಲಿ ಗುತ್ತಿಗಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚುತ ಗಣಿಗಾರಿಕೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಮಾತ್ರವಲ್ಲದೆ ಇಲ್ಲಿ ನಡೆಯುವ ಚಟುವಟಿಕೆ ಬಗ್ಗೆ ‘ವಿಜಯವಾಣಿ’ ವರದಿ ಪ್ರಕಟಿಸಿದ್ದರಿಂದ ಸುಳ್ಯದ ಅಂದಿನ ತಹಸೀಲ್ದಾರ್ ಅನಂತಶಂಕರ್ ದಾಳಿ ನಡೆಸಿ ಕೆಂಪುಕಲ್ಲು ಗಣಿಗಾರಿಕೆ ನಡೆದ ದಾಖಲೆ ಪಡೆದು ಗಣಿಗಾರಿಕೆಗೆ ಬಳಸುವ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದರು.

    ಹರಳು ದಂಧೆ: 1850ರ ಸಂದರ್ಭ ಬ್ರಿಟಿಷ್ ಸರ್ಕಾರವು ಪುಷ್ಪಗಿರಿ ಅಭಯಾರಣ್ಯ ಭಾಗದ ಕೂಜಿಮಲೆ ಮತ್ತು ಸುಟ್ಟತ್‌ಮಲೆ ವ್ಯಾಪ್ತಿಯ 3 ಬೆಟ್ಟಗಳನ್ನು ರೆಡ್‌ಸ್ಟೋನ್ ವ್ಯಾಲಿ ಎಂದು ಹೆಸರಿಟ್ಟು ಕರೆಯಲಾಗಿತ್ತು. ಆ ಸಂದರ್ಭ ಇಲ್ಲಿ ಹೇರಳವಾಗಿ ಸಿಗುತ್ತಿದ್ದ ರೆಡ್‌ಸ್ಟೋನ್‌ಗಳನ್ನು ನೆಲಹಾಸು ಹಾಗೂ ವಾಸ್ತು ಶಿಲ್ಪಗಳಲ್ಲಿ ಬಳಸಲಾಗುತ್ತಿತ್ತು. ಇತ್ತೀಚೆಗೆ ಇದು ಬೃಹತ್ ದಂಧೆಯಾಗಿ ಪರಿಣಮಿಸಿದೆ. ಅಸ್ಸೋಂನ ಕಾರ್ಮಿಕರ ತಂಡ ಗುಡ್ಡದಲ್ಲಿ ಅಪಾಯಕಾರಿ ಸುರಂಗ ಕೊರೆದು ಹೊಳೆಯುವ ಕಲ್ಲುಗಳಿಗಾಗಿ ಹುಡುಕಾಟ ನಡೆಸುತ್ತಾರೆ. ಬಾವಿಯ ಸ್ವರೂಪದ ಈ ಬೃಹತ್ ಸುರಂಗಗಳಿಂದಾಗಿ ಭೂಮಿಯ ಭೌಗೋಳಿಕ ವಿನ್ಯಾಸಕ್ಕೆ ಧಕ್ಕೆಯಾಗಿದೆ ಎಂಬುದು ತಜ್ಞರ ಅಭಿಪ್ರಾಯ.
    ಇದೇ ವೇಳೆ ಬೋರ್‌ವೆಲ್‌ಗಳಿಂದಾಗಿ ಭೂಕಂಪನ ಉಂಟಾಗಿದೆ ಎಂಬ ವಾದವನ್ನು ತಜ್ಞರು ತಳ್ಳಿ ಹಾಕಿದ್ದಾರೆ. ಗುಡ್ಡ ಪ್ರದೇಶಗಳಲ್ಲಿ ಬೋರ್‌ವೆಲ್‌ಗಳಿಲ್ಲ. ಅಪಾಯಕಾರಿಯಾದ ಗಣಿಗಾರಿಕೆಯ ಬಾವಿಗಳಿಂದಾಗಿಯೇ ಭೂಕಂಪನ ಉಂಟಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಸ್ಯಾಟಲೈಟ್ ಚಿತ್ರದಲ್ಲಿ ಕುರುಹು
    ಗೂಗಲ್ ಸ್ಯಾಟ್‌ಲೈಟ್ ಇಮೇಜ್‌ನಲ್ಲಿ 2015ರಲ್ಲಿ ಗುತ್ತಿಗಾರು ಬೆಟ್ಟ ಹಚ್ಚಹಸಿರಾಗಿತ್ತು. 2022ರ ಜನವರಿಯಲ್ಲಿ ಸ್ಯಾಟ್‌ಲೈಟ್ ಇಮೇಜಿಂಗ್ ಗಮನಿಸಿದಾಗ ಭೂಮಿಯ ಒಡಲು ಬಗೆದಂತಿದೆ. ಅಧಿಕ ಪ್ರಮಾಣದಲ್ಲಿ ಗಣಿಗಾರಿಕೆ, ಬೆಟ್ಟದ ಆಳದವರೆಗೂ ಭೂಮಿಯನ್ನು ಗಣಿಗಾರಿಕೆಗಾಗಿ ಕೊರೆದ ಬಗ್ಗೆ ಸ್ಯಾಟಲೈಟ್ ದಾಖಲೆಗಳು ತಜ್ಞರಿಗೆ ಲಭ್ಯವಾಗಿವೆ. ಪುಷ್ಪಗಿರಿ ಅಭಯಾರಣ್ಯ ಭಾಗದ ಕೂಜಿಮಲೆ ಮತ್ತು ಸುಟ್ಟತ್‌ಮಲೆ ಸಹಿತ ವಿವಿಧೆಡೆ ಹರಳುಕಲ್ಲು ದಂಧೆಕೋರರಿಂದ ನಿರ್ಮಾಣಗೊಂಡ ಮಾನವ ನಿರ್ಮಿತ ಭೂರಂಧ್ರಗಳ ಬಗ್ಗೆಯೂ ದಾಖಲೆ ಲಭಿಸಿದೆ.

    ಪಶ್ಚಿಮ ಘಟ್ಟದ ಪುಷ್ಪಗಿರಿ ರಾಷ್ಟ್ರೀಯ ಉದ್ಯಾನ ತಳಪ್ರದೇಶ, ಸುಳ್ಯ, ಕೊಡಗು ಭಾಗಗಳಲ್ಲಿ ಯಥೇಚ್ಛವಾಗಿ ನಡೆದಿರುವ ಗಣಿಗಾರಿಕೆಯಿಂದ ಭೌಗೋಳಿಕ ವಿನ್ಯಾಸಕ್ಕೆ ಹಾನಿಯಾಗಿದೆ. ಈ ಬಗ್ಗೆ ದಾಖಲೆ ಸಂಗ್ರಹವಾಗಿದ್ದು, ಇನ್ನೂ ಹೆಚ್ಚಿನ ಪರಿಶೀಲನೆ ಅಗತ್ಯವಿದೆ. ಇತ್ತೀಚೆಗೆ ಈ ಭಾಗದಲ್ಲಿ ಉಂಟಾಗಿರುವ ಭೂ ಕಂಪನಕ್ಕೆ ಗಣಿಗಾರಿಕೆಯಂತಹ ಚಟುವಟಿಕೆಗಳೇ ಮೂಲ ಕಾರಣ ಎಂಬುದಾಗಿ ಪ್ರಾಥಮಿಕ ದತ್ತಾಂಶದಲ್ಲಿ ಪತ್ತೆಯಾಗಿದೆ.
    – ಪ್ರೊ. ಗಂಗಾಧರ್ ಭಟ್, ಹಿರಿಯ ಭೂ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts