More

    ಕನಿಷ್ಠ ವೇತನ, ಸೌಲಭ್ಯಗಳನ್ನು ಒದಗಿಸಿ- ವಿಜಯನಗರ ಅಪರ ಜಿಲ್ಲಾಧಿಕಾರಿ ಟಿ.ವಿ.ಪ್ರಕಾಶ್ ಸೂಚನೆ

    ಹೊಸಪೇಟೆ: ಜಿಲ್ಲೆಯಲ್ಲಿರುವ ಎಲ್ಲಾ ಸಫಾಯಿ ಕಾರ್ಮಚಾರಿಗಳಿಗೆ ಕನಿಷ್ಠ ವೇತನ, ಪಿ.ಎಫ್., ಇ.ಎಸ್.ಐ ಹಾಗೂ ಕೆಲಸ ನಿರ್ವಹಿಸಲು ಹ್ಯಾಂಡ್ ಗ್ಲೌಸ್, ಸಮವಸ್ತ್ರ ಮತ್ತಿತರ ಸೌಲಭ್ಯ ಒದಗಿಸಬೇಕು ಎಂದು ವಿಜಯನಗರ ಅಪರ ಜಿಲ್ಲಾಧಿಕಾರಿ ಟಿ.ವಿ.ಪ್ರಕಾಶ್ ಹೇಳಿದರು.

    ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ದೊರಕುವ ಸೌಲಭ್ಯಗಳ ಕುರಿತು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದವರಿಗೆ ಮಾಹಿತಿ ಒದಗಿಸಬೇಕು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ತಿಳಿಸಿದರು.

    ಜಿಲ್ಲಾ ವ್ಯಾಪ್ತಿಯ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಆರೋಗ್ಯ ಕಾರ್ಡ್ ಕಲ್ಪಿಸಬೇಕು. ಕಾಲ ಕಾಲಕ್ಕೆ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಬೇಕು. ಅಗತ್ಯವಿದ್ದವರಿಗೆ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಿ ಬೇಕಾದ ಔಷಧಗಳನ್ನು ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

    ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳ ಮರು ಸಮೀಕ್ಷೆ ಕೈಗೊಂಡಿದ್ದು, ಹೊಸಪೇಟೆ ನಗರ ವ್ಯಾಪ್ತಿಯಲ್ಲಿ 2 ಹಾಗೂ ಮರಿಯಮ್ಮನಹಳ್ಳಿಯಲ್ಲಿ 9 ಜನರ ಅರ್ಜಿ ಸಲ್ಲಿಕೆಯಾಗಿದೆ. ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿಯಲ್ಲಿ ಮರು ಸಮೀಕ್ಷೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜಾನಂದರೆಡಿ ಸಭೆಗೆ ತಿಳಿಸಿದರು.

    ದೌರ್ಜನ್ಯ ತಡೆ ಕಾಯ್ದೆ: ಅನುಸೂಚಿತ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ 2010 ರಿಂದ 2022 ರವರೆಗೂ 194 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 4 ಕೊಲೆ ಪ್ರಕರಣಗಳು ಸೇರಿವೆ. 194 ಪ್ರಕರಣಗಳಲ್ಲಿ 10 ಪ್ರಕರಣಗಳಲ್ಲಿ ಶಿಕ್ಷೆ ಆಗಿವೆ. 184 ಪ್ರಕರಣಗಳು ಖುಲಾಸೆಗೊಂಡಿವೆ. ಎಲ್ಲಾ ಪ್ರಕರಣಗಳಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ ಇಲ್ಲಿಯವರೆಗೂ 1.25 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದರು.

    ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಕೊಂಬಿಹಳ್ಳಿ ಗ್ರಾಮದಲ್ಲಿ ಅನುಸೂಚಿತ ಜಾತಿಗೆ ಸೇರಿದವರು 30 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವ್ಯವಸಾಯ ಮಾಡುತ್ತಿದ್ದು, ಅದೇ ಗ್ರಾಮದ ಇತರೆ ಜನಾಂಗಕ್ಕೆ ಸೇರಿದ 400 ಜನರು ಅವರಿಗೆ ಅಡ್ಡಿಪಡಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯರೊಬ್ಬರು ಸಭೆಗೆ ಒತ್ತಾಯಿಸಿದರು.

    ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್, ವಿಜಯನಗರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಅರುಣ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯ್ಕ, ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಜಿಲ್ಲಾ ನಾಮನಿರ್ದೇಶಕ ಕಂದೂಕೂರು ರಾಮುಡು, ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts