More

    ಸೋರುವ ಛಾವಣಿ ಮೇಲೆ ಮತ್ತೊಂದು ಸಿಮೆಂಟ್ ಸ್ಲಾಬ್

    ಕುಂದಾಪುರ: ಮಿನಿ ವಿಧಾನ ಸೌಧಕ್ಕೆ ಅಡಿಪಾಯ ಹಾಕುವಾಗಲೇ ಹಿಡಿದ ಗ್ರಹಣ ಉದ್ಘಾಟನೆಯಾಗಿ, ೨೩ ಸರ್ಕಾರಿ ಕಚೇರಿ ಕಾರ‌್ಯಾರಂಭ ಮಾಡಿದರೂ ಇನ್ನೂ ಬಿಟ್ಟಿಲ್ಲ. ಸ್ಲಾೃಬ್ ಸೋರುತ್ತದೆ ಎಂದು ಅದರ ಮೇಲೆ ಶನಿವಾರ ಮತ್ತೆ ಕಾಂಕ್ರೀಟ್ ಸ್ಲಾೃಬ್ ಹಾಕುವ ಮೂಲಕ ಹೊಸ ವಿವಾದಕ್ಕೆ ದಾರಿ ಮಾಡಿಕೊಡಲಾಗಿದೆ.

    ಕುಂದಾಪುರ ಮಿನಿ ವಿಧಾನ ಸೌಧ ಮೂರು ಬಾರಿ ಸ್ಲಾೃಬ್ ಗಾರೆ ಕಳಚಿ ಬೀಳುವ ಮೂಲಕ ದೊಡ್ಡ ಸುದ್ದಿಯಾಗಿತ್ತು. ನಂತರ ಮಳೆಗಾಲದಲ್ಲಿ ಕಟ್ಟಡ ಸೋರುವ ಮೂಲಕ ಮತ್ತೊಮ್ಮೆ ಸುದ್ದಿಯಾಯಿತು. ಎರಡನೇ ಬಾರಿ ಸ್ಲಾೃಬ್ ಸಿಮೆಂಟ್ ಪ್ಲಾಸ್ಟರ್ ಸಿಬ್ಬಂದಿ ಮೇಲೆ ಬಿದ್ದಿತ್ತು. ಈಗ ಸೋರುವ ಸ್ಲಾೃಬ್ ಮೇಲೆ ಮತ್ತೊಂದು ಸುತ್ತಿನ ಸಿಮೆಂಟ್ ಹಾಕುತ್ತಿದೆ.

    ಮಿನಿ ವಿಧಾನ ಸೌಧದಲ್ಲಿ ಧೈರ್ಯವಾಗಿ ಕೆಲಸ ಮಾಡುವುದಕ್ಕೆ ಸಿಬ್ಬಂದಿ ಹೆದರುತ್ತಾರೆ. ಮಳೆಗಾಲದಲ್ಲಿ ಕೊಡೆ ಹಿಡಿದು ಕೂರುವ ಸ್ಥಿತಿ. ಲೋಕೋಪಯೋಗಿ ಇಲಾಖೆ ಮೂಲಕ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಿಸಿದ್ದು, ಮಳೆ ನೀರು ಸೋರದಂತೆ ಸ್ಲಾೃಬ್ ಮೇಲಿನ ಕೂಡು ಸಂಧು ಆಧಾರ ಕಂಬದಲ್ಲಿ ನೀರು ಇಳಿಯದಂತೆ ಸಿಮೆಂಟ್ ಪ್ಲಾಸ್ಟರ್ ಮಾಡಿದರೂ ಸೋರುವುದು ಕಡಿಮೆ ಆಗಿಲ್ಲ.

    ಮಿನಿ ವಿಧಾನ ಸೌಧ ಹಿಂಭಾಗದ ನೆಲ ಅಂತಸ್ತಿನ ಮೇಲ್ಛಾವಣಿಯಲ್ಲಿ ಕಂದಾಯ, ಆಹಾರ, ಲೆಕ್ಕ ಪರಿಶೋಧನೆ, ನೋಂದಣಿ ಕಚೇರಿಗಳಿವೆ.
    ಸೋರುವುದನ್ನು ನಿಲ್ಲಿಸಲು ಶನಿವಾರ ಸ್ಲಾೃಬ್ ಮೇಲೆ ಮತ್ತೊಂದು ಸಿಮೆಂಟ್ ಹಾಸು ಹಾಕಲಾಗುತ್ತಿದೆ. ಸ್ಲಾೃಬ್ ಸಮತಟ್ಟಾಗಿರದೆ ಇರುವುದರಿಂದ ಸಮತಟ್ಟು ಮಾಡಲು ಸಿಮೆಂಟ್ ಹಾಕಲಾಗುತ್ತದೆ ಎಂದು ಕೆಲಸ ನಿರ್ವಹಿಸುತ್ತಿರುವ ಮುಖ್ಯಸ್ಥ ತಿಳಿಸಿದ್ದಾರೆ. ಸಿಮೆಂಟ್ ಸ್ಲಾೃಬ್ ಹಾಕಿ ಅದು ಗಟ್ಟಿಯಾದ ನಂತರ ಅದರ ಮೇಲೆ ಮತ್ತೊಂದು ಹಾಸು ಅಂಟುತ್ತದೆಯೇ ಎಂದು ಕೇಳಿದರೆ ಕೆಮಿಕಲ್ ಸಿಂಪಡಣೆ ಮಾಡುತ್ತೇವೆ ಎನ್ನುತ್ತಾರೆ..!

    ಕಳಪೆ ಕಾಮಗಾರಿ ವಿರುದ್ಧ ಕ್ರಮವಿಲ್ಲ: ಕುಂದಾಪುರ ಮಿನಿ ವಿಧಾನ ಸೌಧ ಹಿಂದೆ ಎಸಿ ಕಚೇರಿಯಾಗಿದ್ದು, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿತ್ತು. ಹೆಂಚಿನ ಮಾಡಿನ ಕಟ್ಟಡ ಅತ್ಯಂತ ವಿಶಾಲವಾಗಿತ್ತು. ಈ ಕಟ್ಟಡ ಉಳಿಸಿಕೊಳ್ಳಬೇಕು ಎನ್ನುವ ಹೋರಾಟ ಕೂಡ ನಡೆದಿತ್ತು. ಕೆಲಸ ಆರಂಭವಾದಾಗ ಕಾಮಗಾರಿ ಕಳಪೆ ಎನ್ನುವ ಕೂಗು ಎದ್ದಿತ್ತು. ನಂತರ ಕಾಮಗಾರಿ ಸಂಪೂರ್ಣವಾಗದೆ ತರಾತುರಿಯಲ್ಲಿ ಉದ್ಘಾಟಿಸಲಾಗಿತ್ತು. ಕಟ್ಟಡ ಕಾಮಗಾರಿ ಕಳಪೆ ಎನ್ನುವುದಕ್ಕೆ ಯಾವುದೇ ಸರ್ಟಿಫಿಕೇಟ್ ಬೇಡ. ಅಲ್ಲಲ್ಲಿ ಸೋರಿ ಪಾಚಿಕಟ್ಟಿದ ಗೋಡೆ, ಸ್ಲಾಬ್‌ಗಳು, ಹಲವೆಡೆ ಸ್ಲಾಬ್ ಕಳಚಿ ಬಿದ್ದಿದೆ. ಕಳಪೆ ಕಾಮಗಾರಿ ಮಾಡಿದವರ ಬಗ್ಗೆ ಕ್ರಮ ಕೈಗೊಳ್ಳದೆ ಅದರ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಹಣ ಸುರಿಯುತ್ತಿರುವುದು ದುರಂತ.

    ಲೋಕೋಪಯೋಗಿ ಇಲಾಖೆ ಮೂಲಕ ಮಿನಿ ವಿಧಾನ ಸೌಧ ಸೋರುವ ಸ್ಲಾೃಬ್‌ಗೆ ಸಿಮೆಂಟ್ ಹಾಸು ಹಾಕಲಾಗುತ್ತಿದೆ. ಬಳಿಕ ಅದರ ಮೇಲೆ ಮತ್ತೊಂದು ಹಾಸು ಹಾಕಿದರೆ ಗಟ್ಟಿಯಾಗುತ್ತದೋ ಇಲ್ಲವೋ ಇಲ್ಲವೋ ಎನ್ನುವುದು ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಗೊತ್ತು. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ತೆಗೆದುಕೊಂಡ ನಿರ್ಧಾರ.
    ತಿಪ್ಪೇಸ್ವಾಮಿ ತಹಸೀಲ್ದಾರ್ ಕುಂದಾಪುರ

    ಮಿನಿ ವಿಧಾನ ಸೌಧ ಕಟ್ಟಡವೇ ಅಪಾಯಕಾರಿಯಾಗಿದ್ದು, ಕಟ್ಟಡ ನಿರ್ಮಸುವಾಗ ಡಬಲ್ ಲೇಯರ್ ಮೂಲಕ ಕಬ್ಬಿಣದ ರಾಡ್ ಬಳಸದೆ ಸಿಂಗಲ್ ಆಗಿ ಉದ್ದುದ್ದಕ್ಕೆ ಜೋಡಿಸಿರುವುದು ಸರಿಯಾದ ಕ್ರಮವಲ್ಲ. ಈಗಾಗಲೇ ಸೋರುವ ಜಾಗದಲ್ಲಿ ಸಿಮೆಂಟ್ ಪ್ಲಾಸ್ಟ್ ಮಾಡಿದರೂ ಸೋರುವುದು ನಿಂತಿಲ್ಲ. ಮತ್ತೆ ಸ್ಲಾೃಬ್ ಮೇಲೆ ಸ್ಲಾೃಬ್ ಹಾಕುವುದು ಎಷ್ಟು ಸರಿ ಎನ್ನುವುದು ಇಂಜಿನಿಯರ್ ಸ್ಪಷ್ಟ ಪಡಿಸಬೇಕು.
    ರಮೇಶ್ ಕಾಂಚನ್ ನಾಗರಿಕ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts