More

    ಸಾಂಪ್ರದಾಯಕ ಕಟ್ಟಕ್ಕೆ ಹೊಸ ರೂಪ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಸಾಂಪ್ರದಾಯಿಕ ಪರಿಕಲ್ಪನೆಯ ಕಟ್ಟಗಳ ಮಾದರಿಯಲ್ಲೇ ಆಧುನಿಕ ತಂತ್ರಜ್ಞಾನದ ನೆರವಿನಿಂದ ಕಟ್ಟ ನಿರ್ಮಿಸುವ ಪ್ರಯತ್ನ ಯಶಸ್ಸು ಪಡೆದಿದೆ.
    ಸುಳ್ಯ ತಾಲೂಕಿನ ಕಲ್ಮಡ್ಕ ಜೋಗಿಬೆಟ್ಟು ಮನೆಯ 67 ವರ್ಷದ ಗೋವಿಂದ ಭಟ್ ನೆಟ್ಟಾರು ಆಧುನಿಕ ಪರಿಕಲ್ಪನೆಯ ಇಂಥ ಕಟ್ಟ ನಿರ್ಮಿಸಿದ್ದಾರೆ. ಈ ಮೂಲಕ ಕೆಲವು ದಶಕಗಳಿಂದ ಕಟ್ಟಗಳ ನಿರ್ಮಾಣ ಸಂದರ್ಭ ಎದುರಿಸುತ್ತಿದ್ದ ಸಮಸ್ಯೆಯಿಂದ ಬಿಡುಗಡೆ ಹೊಂದಿದ್ದಾರೆ. ಭಟ್ಟರ ಹೊಸ ಪರಿಕಲ್ಪನೆಯ ಕಟ್ಟ ವಿನ್ಯಾಸಗೊಳಿಸಿದವರು ‘ತೂಗು ಸೇತುವೆಗಳ ಸರದಾರ’ ಎಂದು ಖ್ಯಾತಿ ಪಡೆದ ಗಿರೀಶ್ ಭಾರದ್ವಾಜ್ ಅವರ ಪುತ್ರ ಇಂಜಿನಿಯರ್ ಪತಂಜಲಿ ಭಾರದ್ವಾಜ್.

    ಹಿಂದೆ ವರ್ಷಂಪ್ರತಿ ಕಲ್ಲು ಮಣ್ಣಿನ ಕಟ್ಟಗಳನ್ನು ನಿರ್ಮಿಸುತ್ತಿದ್ದ ಭಟ್ಟರಿಗೆ ಪರಿಣಿತ ಕಾರ್ಮಿಕರದೇ ದೊಡ್ಡ ಸಮಸ್ಯೆಯಾಗುತ್ತಿತ್ತು. ಬಳಿಕ ಕೆಲವು ವರ್ಷ ಮರಳಿನ ಚೀಲಗಳಿಂದ ಕಟ್ಟಗಳನ್ನು ಕಟ್ಟುವ ಪ್ರಯತ್ನ ನಡೆದಾಗಲೂ ಹೆಚ್ಚು ಫಲ ನೀಡಲಿಲ್ಲ. ಈ ಸಮಸ್ಯೆಯಿಂದ ಹೊರಬರಲು ಕನಿಷ್ಠ ಮಾನವ ಸಂಪನ್ಮೂಲ ಬಳಸಿ 3- 4 ಗಂಟೆ ಅವಧಿಯಲ್ಲಿ ಕಟ್ಟ ಜೋಡಿಸುವ ಅಥವಾ ಬೇರ್ಪಡಿಸುವ ತಂತ್ರಜ್ಞಾನ ಒಳಗೊಂಡಿರುವ ಹೊಸ ಪ್ರಯೋಗವನ್ನು ಪತಂಜಲಿ ಪರಿಚಯಿಸಿದ್ದಾರೆ. ಇಂಥ ಕಟ್ಟಗಳನ್ನು ಅರೆ ಶಾಶ್ವತ ಕಟ್ಟ ಎಂದು ಹೇಳಬಹುದು ಎನ್ನುತ್ತಾರೆ ಜಲ ಸಾಕ್ಷರತೆಯ ಹರಿಕಾರ ಶ್ರೀ ಪಡ್ರೆ. ಗೋವಿಂದ ಭಟ್ ಅವರಿಂದ ಪ್ರೇರಣೆ ಪಡೆದ ಅವರ ಹತ್ತಿರದ ಬಂಧು ಉದಯ ಕುಮಾರ್ ನೆಟ್ಟಾರು ಈ ವರ್ಷ ತಮ್ಮ ಜಮೀನಿನಲ್ಲಿ ಇಂಥ ಕಟ್ಟ ನಿರ್ಮಿಸಲು ಮುಂದಾಗಿದ್ದಾರೆ. ಇವರಿಗೆ ಕೂಡ ಪತಂಜಲಿ ಭಾರದ್ವಾಜ್ ಮಾರ್ಗದರ್ಶಕರಾಗಿದ್ದಾರೆ.

    ಹೊಸ ಪರಿಕಲ್ಪನೆ ಏನು?: ತೋಡಿನ ನೆಲದಲ್ಲಿ ಕಾಂಕ್ರೀಟ್ ಫೌಂಡೇಶನ್ ಹಾಕಿ, ಕಬ್ಬಿಣದ ಕಂಬಗಳನ್ನು ಅಳವಡಿಸಲು ಅಲ್ಲಲ್ಲಿ ಅಗತ್ಯವಿದ್ದಷ್ಟು ತೂತುಗಳನ್ನು ಕೊರೆಯಬೇಕು. ಪ್ರತಿಬಾರಿ ಕಟ್ಟ ನಿರ್ಮಿಸುವಾಗ ಕಬ್ಬಿಣದ ಕಂಬಗಳನ್ನು ಅಳವಡಿಸಬೇಕು. ಈ ಕಂಬಗಳಿಗೆ ಕೆಳಗೆ ಮತ್ತು ಮೇಲೆ ತಲಾ ನಾಲ್ಕು (ಒಟ್ಟು ಎಂಟು) ಉಕ್ಕಿನ ಹಲಗೆಗಳನ್ನು ಹಾಕಿ ಬೋಲ್ಟ್‌ಗಳಿಂದ ಭದ್ರಪಡಿಸಬೇಕು. ಇಷ್ಟಾದರೆ ಕಟ್ಟ ರೆಡಿ. ಇಬ್ಬರು ಕಾರ್ಮಿಕರು ಮೂರು- ನಾಲ್ಕು ಗಂಟೆ ದುಡಿದರೆ ಸ್ಟೀಲ್ ಹಲಗೆಗಳನ್ನು ಜೋಡಿಸಿ ಕಟ್ಟಗಳ ಮರು ಜೋಡಿಸುವ ಕಾರ್ಯ ಪೂರ್ಣಗೊಳ್ಳುತ್ತದೆ. ಭಟ್ಟರು ನಿರ್ಮಿಸಿದ ಮೂರು ಕಂಬಗಳ ಕಟ್ಟಕ್ಕೆ ತಗಲಿದ ಒಟ್ಟು ವೆಚ್ಚ 1.75 ಲಕ್ಷ ರೂ. ಇಂಥ ಹೊಸ ಕಟ್ಟಗಳ ನಿರ್ಮಾಣಕ್ಕೆ ಎರಡು ವರ್ಷ ಬೇಕು. ಮುಂದಿನ ವರ್ಷ ಕಟ್ಟ ನಿರ್ಮಿಸಲು ಈ ವರ್ಷ ಬೇಸಿಗೆಯಲ್ಲಿ ನೆಲ ಒಣಗಿರುವ ಸಂದರ್ಭದಲ್ಲೇ ಕಾಂಕ್ರೀಟ್ ಫೌಂಡೇಶನ್ ನಿರ್ಮಿಸಿ ಇಟ್ಟುಕೊಳ್ಳಬೇಕು.

    ಹಿಂದೆ ಸಾಂಪ್ರದಾಯಿಕ ಮಣ್ಣಿನ ಕಟ್ಟಗಳನ್ನು ನಿರ್ಮಿಸಲು ಕಾರ್ಮಿಕರು ಸಿಗುತ್ತಿರಲಿಲ್ಲ. ಸಿಕ್ಕಿದರೂ ತುಂಬ ಖರ್ಚು ವೆಚ್ಚವಾಗುತ್ತಿತ್ತು. ಬಳಿಕ ಮರಳಿನ ಕಟ್ಟ ನಿರ್ಮಿಸಲು ಆರಂಭಿಸಿದ ಸಂದರ್ಭ 100- 200 ಕೆ.ಜಿ ತೂಕದ ಮರಳಿನ ಚೀಲಗಳನ್ನು ಸಾಗಿಸಲು ಕಾರ್ಮಿಕರಿಗೆ ಕಷ್ಟವಾಗುತ್ತಿತ್ತು. ಇಂಥ ಸಮಸ್ಯೆಗಳಿಂದ ಹೊಸ ಕಟ್ಟದಲ್ಲಿ ಪರಿಹಾರ ದೊರೆತಿದೆ. ತೋಡಿನ ಎರಡು ಬದಿ ಇರುವ ನಮ್ಮ ಜಮೀನು ಸದಾ ತಂಪಾಗಿದೆ.
    ಗೋವಿಂದ ಭಟ್ ನೆಟ್ಟಾರು, ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts