More

    ಮತದಾರನ ಮನ ಓಲೈಕೆಗೆ ಕಸರತ್ತು

    ಮತದಾರನ ಮನ ಓಲೈಕೆಗೆ ಕಸರತ್ತುಮತದಾರನ ಮನ ಓಲೈಕೆಗೆ ಕಸರತ್ತು

    ಚಿತ್ರದುರ್ಗ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ, ಮಧ್ಯ ಕರ್ನಾಟಕದಲ್ಲಿ ಮತಬೇಟೆಗೆ ಪ್ರಮುಖ ರಾಜಕೀಯ ಪಕ್ಷಗಳು ಸಜ್ಜಾಗಿವೆ.
    ವಾರದಿಂದೀಚೆಗೆ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳ ಸುನಾಮಿ ಶುರುವಾಗಿದ್ದು, ತಂತ್ರ-ಪ್ರತಿತಂತ್ರಗಳ ಮೂಲಕ ಮತದಾರರನ್ನು ಸೆಳೆಯುವ ಪೈಪೋಟಿಗೆ ಚಾಲನೆ ನೀಡಿವೆ.
    ದಾವಣಗೆರೆಯಲ್ಲಿ ನಾಲ್ಕು ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್ ಮತ್ತು ಪಕ್ಷದ ಜಿಲ್ಲಾಧ್ಯಕ್ಷರ ಸಭೆ ಹಾಗೂ ಚಿತ್ರದುರ್ಗದಲ್ಲಿ ಬಿಜೆಪಿ ಎಸ್ಸಿ, ಎಸ್ಟಿ, ಒಬಿಸಿ ಕಾರ‌್ಯಕರ್ತರ ಸಮಾವೇಶ ನಡೆಸುವ ಮೂಲಕ ಮತದಾರರ ಓಲೈಸುವ, ಚುನಾವಣೆ ರಣ-ತಂತ್ರಗಳ ಕುರಿತು ಚರ್ಚೆಗ ಳನ್ನು ಆರಂಭಿಸಿದೆ.
    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಇದರ ನೇತೃತ್ವ ವಹಿಸಿದ್ದು, ಕರ್ನಾಟಕದ ಚುನಾವಣೆಯನ್ನು ಭಾಜಪ ಹೈಕಮಾಂಡ್ ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದಕ್ಕೆ ಸಾಕ್ಷಿಯಾಗಿದೆ. ನಡ್ಡಾ ನಡೆಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಕೂಡ ಸಿದ್ಧತೆ ನಡೆಸಿದೆ. ಈ ಕಾರ‌್ಯಕ್ರಮದ ಪೂರ್ವದಲ್ಲೇ ನಿಗದಿಯಾಗಿದ್ದ, ಚಿತ್ರದುರ್ಗದ ಕೆಪಿಸಿಸಿ ಎಸ್‌ಸಿ, ಎಸ್‌ಟಿ ಸಮಾವೇಶವನ್ನು ಯಶಸ್ವಿಯಾಗಿ ನಡೆಸುವ ಮೂಲಕ ತನ್ನ ಸಾಂಪ್ರದಾಯಿಕ ಮತಗಳನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಹೆಜ್ಜೆ ಹಾಕಿದೆ.
    ಪಕ್ಷದ ಚಿತ್ರದುರ್ಗ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನಡ್ಡಾ, ಮರುದಿನ ದಾವಣಗೆರೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು. ಅವಳಿ ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿ ಎರಡೂ ಜಿಲ್ಲೆಗಳಲ್ಲಿ ಮಠ ಮಾನ್ಯಗಳಿಗೆ ಭೇಟಿ ನೀಡಿ ಮಠಾಧೀಶರನ್ನು ಭೇಟಿಯಾಗಿ ಚರ್ಚಿಸಿರುವುದು ದೇಶದ ಗಮನ ಸೆಳೆದಿದೆ. ನಡ್ಡಾ ಅವರ ಈ ನಡೆ ಹಿಂದೆ ಮತ ಮಂತ್ರದ ಜಪವಿರುವುದನ್ನು ತಳ್ಳಿ ಹಾಕುವಂತಿಲ್ಲ.
    ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಚಿತ್ರದುರ್ಗ ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ, ಮಾದಾರ ಗುರುಪೀಠದ ಶ್ರೀ ಚನ್ನಯ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿರುವುದರ ಹಿಂದೆ ರಾಜಕೀಯ ಸಂದೇಶ ರವಾನಿಸುವ ಉದ್ದೇಶವಿರುವುದನ್ನು ತಳ್ಳಿ ಹಾಕಲಾಗದು.
    ದಾವಣಗೆರೆ ಜಿಲ್ಲೆ ರಾಜನಹಳ್ಳಿ ವಾಲ್ಮೀಕಿ ಮಠಕ್ಕೂ ಭೇಟಿ ನೀಡಿದ್ದಾರೆ. ಬೆಳ್ಳೂಡಿ ಕನಕ ಶಾಖಾ ಮಠದಲ್ಲಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ವಚನಾನಂದ ಶ್ರೀಗಳನ್ನು ಭೇಟಿಯಾಗಿ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ಈ ಚರ್ಚೆಗಳಲ್ಲಿ ಹಾಗೂ ದುರ್ಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಡಿವಾಳ ಸಮುದಾಯದ ಪ್ರಮುಖ ಬೇಡಿಕೆ ಎಸ್‌ಸಿ ಮೀಸಲು ನೀಡುವ ಕುರಿತು ಪರಿಶೀಲಿಸುವ ಭರವಸೆ ನೀಡಿರುವುದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೀಸಲು ವಿಚಾರ ಪ್ರಧಾನ ಪಾತ್ರ ಪಡೆಯಲಿರುವುದು ಸ್ಪಷ್ಟ.
    ಎಸ್‌ಸಿ, ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಿಸಿ ಅದರ ಕ್ರೆಡಿಟ್, ರಾಜಕೀಯ ಲಾಭವನ್ನು ಪಡೆಯಲು ಹವಣಿಸುತ್ತಿರುವ ಬಿಜೆಪಿ ತಂತ್ರಗಾರಿಕೆಗೆ ಬ್ರೇಕ್ ಹಾಕಲು ಕಾಂಗ್ರೆಸ್ ಎಸ್‌ಸಿ-ಎಸ್‌ಟಿ ಸಮಾವೇಶದ ಮೂಲಕ ಪ್ರತಿತಂತ್ರ ರೂಪಿಸಿದೆ. ಜ.31ರೊಳಗೆ ಸಂವಿಧಾನಕ್ಕೆ ತಿದ್ದುಪಡಿ ತಂದು, ಮೀಸಲು ಹೆಚ್ಚಳ ಕಾಯ್ದೆಯನ್ನು 9 ನೇ ಷೆಡ್ಯೂಲ್‌ಗೆ ಸೇರಿಸದಿದ್ದರೆ ಹೋರಾಟ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಬಿಜೆಪಿಗೆ ಎಚ್ಚರಿಕೆಯ ರವಾನಿಸಿದ್ದಾರೆ.
    ಬಿಜೆಪಿ ನಮ್ಮನ್ನು ಒಡೆದಾಳುತ್ತಿದೆ. ಅದರ ಈ ನೀತಿ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ರಾಜಕೀಯ ಲಾಭವನ್ನೂ ಪಡೆಯಲು ಏಕತಾ ಸಮಾವೇಶ ಆಯೋಜಿಸಿದ್ದೇವೆ ಎಂದು ಪರಮೇಶ್ವರ ಹೇಳಿದ್ದಾರೆ.
    ಎಸ್‌ಸಿಗೆ ಸೇರಿದ 101 ಹಾಗೂ ಎಸ್‌ಟಿಗೆ ಸೇರಿರುವ 52 ಸಮುದಾಯದವರು ಒಗ್ಗಟ್ಟಾಗಿರಬೇಕೆಂಬ ಸಂದೇಶವನ್ನು ಸಮಾವೇಶದ ಮೂಲಕ ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೊದಲಾದ ನಾಯಕರು ದುರ್ಗದಲ್ಲಿ ದೇಶ, ರಾಜ್ಯಕ್ಕೆ ಸಾರಿದ್ದಾರೆ.
    ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಪೈಕಿ, 173 ಕ್ಷೇತ್ರಗಳ ಫಲಿತಾಂಶದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಈ ಬಾರಿ ದಲಿತ ಶಕ್ತಿ ಎಚ್ಚೆತ್ತಿದೆ. ದಲಿತರನ್ನು, ಬಡವರನ್ನು, ಅಲ್ಪಸಂಖ್ಯಾತರನ್ನು ಇನ್ನು ಮುಂದೆ ವಂಚಿಸಲಾಗದು. ಸುಳ್ಳುಗಳಿಗೆ ಮರಳಾಗುವುದಿಲ್ಲವೆಂಬ ಪರಮೇಶ್ವರ ಅವರ ಮಾತುಗಳು ಹಾಗೂ ದೇಶದಲ್ಲಿ ಕಾಂಗ್ರೆಸ್ ಸಂಕಟದಲ್ಲಿದ್ದರೂ, ಕರ್ನಾಟಕದಲ್ಲಿ 134 ಸೀಟುಗಳನ್ನು ಗೆಲ್ಲುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತು, ರಾಜ್ಯದಲ್ಲಿ ಸಂಘಟನೆಗೆ ಕೈ ಪಕ್ಷ ವಿಶೇಷ ಆದ್ಯತೆ ಕೊಡುತ್ತಿದೆ ಎಂಬುದನ್ನು ಸಾರಿದೆ.
    ಇದೇ ವೇಳೆ ಸಂವಿಧಾನ, ಮೀಸಲು ನೀತಿ ಬಗ್ಗೆ ಬಿಜೆಪಿ, ಸಂಘ ಪರಿವಾರದೆಡೆ ಎಚ್ಚರಿಕೆಯಿಂದ ಇರಬೇಕೆಂದು ಶೋಷಿತರು, ಬಡವರನ್ನು ಕೈ ನಾಯಕರು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts