More

    ಲಕ್ಷಾಂತರ ಜಾನುವಾರು, ವೈದ್ಯರು ಮೂವರು

    | ಡಾ.ರೇವಣಸಿದ್ದಪ್ಪ ಕುಳ್ಳೂರ ರಾಮದುರ್ಗ

    ಸರ್ಕಾರ ಜಾನುವಾರುಗಳ ಆರೋಗ್ಯ ಕಾಪಾಡಲು ಆಯಾ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪಶು ಆಸ್ಪತ್ರೆಗಳನ್ನು ಆರಂಭಿಸಿದೆ. ಆದರೆ, ರಾಮದುರ್ಗ ತಾಲೂಕಿನ ಬಹುತೇಕ ಪಶು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರೇ ಇಲ್ಲ. ಇದರಿಂದ ರೈತರು ದನ-ಕರುಗಳಿಗೆ ಚಿಕಿತ್ಸೆ ಕೊಡಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ರಾಮದುರ್ಗ ತಾಲೂಕು ಬರಪೀಡಿವಾಗಿದ್ದು, ಇಲ್ಲಿರುವ ಬಹುತೇಕ ಪಶು ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳು ಸಿಬ್ಬಂದಿ ಕೊರತೆಯಿಂದ ನರಳುತ್ತಿವೆ. ಬೇಸಿಗೆಯಲ್ಲಿ ಜಾನುವಾರುಗಳು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿವೆ. ಆದರೆ, ಇಲ್ಲಿನ ಪಶು ಆಸ್ಪತ್ರೆಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ.

    ಮೂವರೇ ವೈದ್ಯರು: ರಾಮದುರ್ಗ ತಾಲೂಕಿನಲ್ಲಿ ಹಸು, ಎಮ್ಮೆ, ಕುರಿ, ಮೇಕೆ, ಕೋಳಿ ಹಾಗೂ ಹಂದಿ ಸೇರಿ ಒಟ್ಟು 2, 75, 727 ಜಾನುವಾರು-ಪ್ರಾಣಿಗಳು ಇವೆ. ಆದರೆ, ಇವೆಲ್ಲವುಗಳಿಗೆ ಚಿಕಿತ್ಸೆಗೆ ಇರುವುದು ಕೇವಲ 3 ವೈದ್ಯರು. ತಾಲೂಕಿನಲ್ಲಿ ನಿಯಮಾನುಸಾರ ಪಶುಸಂಗೋಪನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು, ಮುಖ್ಯ ಪಶುವೈದ್ಯಾಧಿಕಾರಗಳು ಹಾಗೂ ಪಶುವೈದ್ಯ ಸಹಾಯಕರು, ದ್ವಿತೀಯ
    ಮತ್ತು ಡಿ ದರ್ಜೆ, ವಾಹನ ಚಾಲಕರು ಸೇರಿ 81 ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಆದರೆ, ಸದ್ಯ ಇಲ್ಲಿ ಕೇವಲ 39 ಜನ ಕಾರ್ಯನಿರ್ವಹಿಸುತ್ತಿದ್ದು, 42 ಹುದ್ದೆಗಳು ಖಾಲಿ ಇವೆ.

    ಇದರಿಂದ ಗ್ರಾಮೀಣ ಭಾಗದ ಜನರು ಜಾನುವಾರುಗಳ ಚಿಕಿತ್ಸೆಗೆ ಅಲೆದಾಡುತ್ತಿದ್ದಾರೆ. ಇನ್ನು ತಾಲೂಕಿನ 15 ಪಶು ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಗಳೇ ಇಲ್ಲ. ಕೆಲ ಆಸ್ಪತ್ರೆಗಳಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿ, ಜಾನುವಾರು ಅಧಿಕಾರಿ, ಹಿರಿಯ ಪಶುವೈದ್ಯ ಪರೀಕ್ಷಕರು, ಪಶುವೈದ್ಯ ಪರೀಕ್ಷಕರು, ಪಶುವೈದ್ಯ ಸಹಾಯರ ಹುದ್ದೆಗಳು ಖಾಲಿ ಉಳಿದಿದ್ದು, ಹಲವು ವರ್ಷ ಕಳೆದರೂ ಈವರೆಗೆ ಆ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿಲ್ಲ.

    ಚಿಕಿತ್ಸೆಗಾಗಿ ಪರದಾಟ: ರಾಮದುರ್ಗ ಪಟ್ಟಣ ಹಾಗೂ ಸುರೇಬಾನ ಗ್ರಾಮದಲ್ಲಿ ತಲಾ ಒಂದೊಂದು ಪಶು ಆಸ್ಪತ್ರೆಗಳಿವೆ. 10 ಪಶು ಚಿಕಿತ್ಸಾಲಯಗಳು ಹಾಗೂ 4 ಪ್ರಾಥಮಿಕ ಪಶು ಚಿಕಿತ್ಸಾಲಯಗಳು ಇವೆ. ಆದರೆ, ಇವುಗಳಲ್ಲಿ ಸೂಕ್ತ ಸಿಬ್ಬಂದಿಯೇ ಇಲ್ಲ. ಇದರಿಂದ ರೈತರು ಜಾನುವಾರುಗಳಿಗೆ ಚಿಕಿತ್ಸೆ ಕೊಡಬೇಕಾದರೆ ದೂರದ ಊರುಗಳಿಂದ ಸುಮಾರು 20ರಿಂದ 30 ಕಿ.ಮೀ.ಸಂಚರಿಸುವುದು ಅನಿವಾರ್ಯ. ಕೆಲ ಪಶು ಆಸ್ಪತ್ರೆ ಹಾಗೂ ಪಶು ಚಿಕಿತ್ಸಾಲಯಗಳಲ್ಲಿ ದ್ವಿತೀಯ ದರ್ಜೆ ಹಾಗೂ ಡಿ ದರ್ಜೆ ನೌಕಕರೇ ವೈದ್ಯರಾಗಿ ಕಾರ್ಯನಿರ್ವಹಿಸುತ್ತಾರೆ. ರಾಮದುರ್ಗ ತಾಲೂಕಿನಲ್ಲಿ ಒಂದೇ ಒಂದು ಸಂಚಾರಿ ಪಶುಚಿಕಿತ್ಸಾಲಯವಿದೆ. ಆದರೆ, ಅದೂ ಕೂಡ ಸಿಬ್ಬಂದಿ ಕೊರತೆಯಿಂದ ಸಂಚರಿಸದಂತಾಗಿದೆ.

    ಕಾಂಪೌಂಡ್ ಇಲ್ಲ, ಕಟ್ಟಡಗಳೂ ಶಿಥಿಲ

    ರಾಮದುರ್ಗ ತಾಲೂಕಿನಲ್ಲಿ 2 ಪಶು ಆಸ್ಪತ್ರೆ, 12 ಪಶು ಚಿಕಿತ್ಸಾಲಯ ಹಾಗೂ 4 ಪ್ರಾಥಮಿಕ ಪಶು ಚಿಕಿತ್ಸಾಲಯ ಹಾಗೂ ಒಂದು ಸಂಚಾರಿ ಪಶು ಚಿಕಿತ್ಸಾಲಯ ಇವೆ. ಆದರೆ, ಇಲ್ಲಿನ ಬಹುತೇಕ ಆಸ್ಪತ್ರೆಗಳಿಗೆ ಕಾಂಪೌಂಡ್‌ಗಳೇ ಇಲ್ಲ. ಕೆಲ ಪಶು ಚಿಕಿತ್ಸಾಲಯದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಆಸ್ಪತ್ರೆಗಳಿಗೆ ಕಾಂಪೌಂಡ್ ಇಲ್ಲದರಿವುದರಿಂದ ಜಾನುವಾರುಗಳನ್ನು ಗಿಡ-ಮರಗಳು ಹಾಗೂ ಕಂಬಗಳಿಗೆ ಕಟ್ಟಿ ಚಿಕಿತ್ಸೆ ನೀಡುವ ಪರಿಸ್ಥಿತಿ ಎದುರಾಗಿದೆ. ಈ ವರ್ಷ ಸುರಿದ ಭಾರಿ ಮಳೆ ಹಾಗೂ ನೆರೆಯ ಹಾವಳಿಗೆ ಪಶು ಚಿಕಿತ್ಸಾಲಯದ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿವೆ. ಕೆಲ ಕಟ್ಟಡಗಳು ಕುಸಿಯುವ ಹಂತಕ್ಕೆ ತಲುಪಿವೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಇನ್ನಾದರೂ ಮೂಕ ಪ್ರಾಣಿಗಳ ಆರೋಗ್ಯಕ್ಕೆ ಅನುಕೂಲವಾಗಲು ಸರ್ಕಾರ ಸೂಕ್ತ ಸಿಬ್ಬಂದಿ ನೇಮಕ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ನಾವು ಕುರಿ-ಮರಿಗಳ ಚಿಕಿತ್ಸೆಗೆ ದೂರದ ರಾಮದುರ್ಗ ತಾಲೂಕು ಪಶು ಆಸ್ಪತ್ರೆಗೆ ಹೋಗಲು 15-20 ಕಿ.ಮೀ. ದೂರ ಸಂಚರಿಸಬೇಕು. ಹಾಗಾಗಿ ತಾಲೂಕಾದ್ಯಂತ ಸಂಚಾರಿ ಚಿಕಿತ್ಸಾಲಯಗಳನ್ನು ತೆರೆಯಬೇಕು. ಜಾನುವಾರುಗಳಿಗೂ ಸೂಕ್ತ ಚಿಕಿತ್ಸೆ ನೀಡಲು ಪಶುವೈದ್ಯರನ್ನು ನೇಮಕ ಮಾಡಬೇಕು.
    | ಬೀರಪ್ಪ ಹಲಕಿ ಪಂಚಗಾಂವಿ ಗ್ರಾಮಸ್ಥ

    ರಾಮದುರ್ಗ ತಾಲೂಕಿನಲ್ಲಿ ಕೇವಲ 3 ಪಶುವೈದ್ಯಾಧಿಕಾರಿಗಳು ಇದ್ದಾರೆ. ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು.
    | ಡಾ. ಎ.ಕೆ. ಚಂದ್ರಶೇಖರ ಉಪನಿರ್ದೇಶಕ, ಪಶುಸಂಗೋಪನೆ ಇಲಾಖೆ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts