More

    ಜಡಿಮಳೆಗೆ ನೆಲಕಚ್ಚಿದ ಬೆಳೆ ; ಹೊಲದಲ್ಲೇ ಕಪ್ಪಾಗುತ್ತಿದೆ ರಾಗಿ ; ಅನ್ನದಾತರಿಗೆ ಗಾಯದ ಮೇಲೆ ಬರೆ

    ತಿಪಟೂರು: ಜಡಿಮಳೆಯಿಂದಾಗಿ ಕಣಜ ಸೇರುವ ಮುನ್ನವೇ ಹೊಲದಲ್ಲಿ ರಾಗಿ ಮೊಳಕೆಯೊಡೆಯಲಾರಂಭಿಸಿದ್ದು, ಮೇವೂ ಕೈ ತಪ್ಪುವ ಆತಂಕ ಎದುರಾಗಿದೆ.

    ಪ್ರತಿ ಎಕರೆಗೆ ಅಂದಾಜು 12 ರಿಂದ 15 ಕ್ವಿಂಟಾಲ್ ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಆದರೆ, 10 ದಿನಗಳಿಂದ ಸುರಿಯುತ್ತಿರುವ ಮಳೆ ರೈತರ ನಿದ್ದೆಗೆಡಿಸಿದೆ. ಬೆಳೆದ ರಾಗಿ ಮನೆ ಸೇರುವ ಮುಂಚೆಯೇ ಮೊಳಕೆಯಾಗಿ ಹುಲ್ಲು ಕಪ್ಪಾಗುತ್ತಿದೆ. ಸಮಾಧಾನದ ಸಂಗತಿಯೆಂದರೆ ಹಿಂಗಾರಿನಲ್ಲಿ ಬಿತ್ತನೆ ಮಾಡಲಾಗಿದ್ದ ಶೇ.40 ರಾಗಿ ಮನೆ ಸೇರಿದೆ.

    ಕಟಾವು ಯಂತ್ರಗಳ ಮೂಲಕ ನೆಲ ಕಚ್ಚಿದ ಬೆಳೆ ಕತ್ತರಿಸಿ ಬೇರ್ಪಡಿಸುವುದು ಕಷ್ಟವಾಗಿದೆ. ಪರಿಣಾಮ ಬೆಳೆ ಮೊಳಕೆ ಒಡೆದು, ಗೆದ್ದಲು ಹಿಡಿಯುವ ಸ್ಥಿತಿಯಲ್ಲಿದೆ. ಹೇಗಾದರಾಗಲಿ ಮಣ್ಣು ಪಾಲಾಗಲು ಬಿಡಬಾರದು ಎಂದು ನಿರ್ಧರಿಸಿ, ಕೆಲವು ಕಡೆ ಯಂತ್ರಗಳ ಆಸೆ ಬಿಟ್ಟ ರೈತರು ಕೈಯಿಂದಲೆ ರಾಗಿ ಕೊಯ್ಲು ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೊಯ್ದ ತೆನೆ ಒಣಗಿಸಲು ಬಿಸಿಲಿನ ಕೊರತೆ ಕಾಡುತ್ತಿದೆ. ಜತೆಗೆ ತೇವದಿಂದ ಹುಲ್ಲು ಕೊಳೆಯುವ ಸಾಧ್ಯತೆ ಹೆಚ್ಚಿದೆ.

    ಕಟಾವಿನ ಯಂತ್ರಗಳಿಗೆ ಈಗ ಬೇಡಿಕೆ ಇಲ್ಲದಂತಾಗಿದೆ. ಹೊಲದ ತೇವಾಂಶ ಮತ್ತು ನೆಲ ಕಚ್ಚಿರುವ ತೆನೆಯನ್ನು ಯಂತ್ರದ ಬ್ಲೇಡ್‌ಗಳಿಂದ ಬೇರ್ಪಡಿಸುವುದು ಸಾಧ್ಯವಾಗದ ಕಾರಣ ಸದ್ಯಕ್ಕೆ ಯಂತ್ರಗಳಿಗೆ ಕೆಲಸ ಇಲ್ಲದಂತಾಗಿದೆ.

    ತಾಲೂಕಿನಲ್ಲಿ ಶೇ.40ರಿಂದ 50 ರಾಗಿ ಕಟಾವು ಮುಗಿದಿದೆ. ಆದರೆ, ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ರಾಗಿ ಮಳೆಗೆ ತುತ್ತಾಗಿದೆ. ಯಾವುದಕ್ಕೂ ಹವಾಮಾನ ಇಲಾಖೆ ಮುನ್ಸೂಚನೆ ಗಮನಿಸಿ ಕಟಾವು ಮಾಡಿಸುವುದು ಒಳಿತು. ಸದ್ಯದ ಸ್ಥಿತಿಯಲ್ಲಿ ಹಾನಿ ಸಾಧ್ಯತೆ ಕಡಿಮೆ, ಆದರೆ ಯಾವುದನ್ನೂ ಈಗಲೇ ಹೇಳಲು ಆಗಲ್ಲ.
    ಡಾ.ಎನ್.ಕೆಂಗೇಗೌಡ, ಸಹಾಯಕ ಕೃಷಿ ನಿರ್ದೇಶಕ ತಿಪಟೂರು

    ವಾಯುಭಾರ ಕುಸಿತದ ಜತೆಗೆ ಡಿ.3ರಿಂದ 15ರವರೆಗೆ ಜ್ಯೇಷ್ಠಾ ಮಳೆ ಪ್ರಾರಂಭವಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ನೆಲ ಕಚ್ಚಿರುವ ಪೈರು ಬೇರ್ಪಡಿಸುವುದು ಕಷ್ಟ. ಡಿ.12ರಿಂದ 3 ದಿನ ಮಳೆ ಬಿಡುವು ಕೊಡುವ ಮುನ್ಸೂಚನೆ ಇದೆ. ಆದರೂ, ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕನಿಷ್ಠ ಶೇ.30 ಬೆಳೆ ಕೈ ತಪ್ಪುವ ಅಂದಾಜಿದೆ.
    ಡಾ.ಎಂ.ಪದ್ಮನಾಭನ್, ಜಿಲ್ಲಾ ಹವಾಮಾನ ವಿಷಯ ತಜ್ಞ, ಕೆವಿಕೆ ಕೊನೇಹಳ್ಳಿ ತಿಪಟೂರು

    ಮಳೆಯಿಂದಾಗಿ ರಾಗಿ ನೆಲ ಕಚ್ಚಿ ಮೊಳಕೆಯಾಗುತ್ತಿದೆ. ಹೆಚ್ಚು ಕೂಲಿ ಕೊಟ್ಟು ಕೈಯಲ್ಲಿ ಕಟಾವು ಮಾಡಿಸೋಣ ಎಂದರೂ ತೆನೆಯನ್ನು ಒಣಗಿಸಲು ಆಗುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ.
    ಷಣ್ಮುಗಪ್ಪ, ರೈತ, ಗುಡಿಗೊಂಡನಹಳ್ಳಿ, ತಿಪಟೂರು ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts