More

    ಹೈನುಗಾರಿಕೆಯಿಂದ ನೆಮ್ಮದಿ ಜೀವನ, ಬಮುಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ಅಭಿಪ್ರಾಯ

    ನೆಲಮಂಗಲ: ಗ್ರಾಮೀಣ ಭಾಗದ ಕೃಷಿಕ ಕುಟುಂಬಗಳ ಆರ್ಥಿಕ ಸುಧಾರಣೆಯಲ್ಲಿ ಪಶುಸಂಗೋಪನೆ ಸಹಕಾರಿ ಎಂದು ತಾಲೂಕು ಬಮುಲ್ ನಿರ್ದೇಶಕ ಜಿ.ಆರ್. ಭಾಸ್ಕರ್ ಹೇಳಿದರು.

    ನಗರದ ಸೊಂಡೇಕೊಪ್ಪ ರಸ್ತೆಯ ಶ್ರೀ ಬಯಲು ಉದ್ಬವ ಗಣಪತಿ ದೇವಸ್ಥಾನದ ಆವರಣದಲ್ಲಿ ತಾಲೂಕು ಪಶುಪಾಲಕರ ಸಂಘ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳು ಭಾನುವಾರ ಆಯೋಜಿಸಿದ್ದ 10ನೇ ವರ್ಷದ ಅಧಿಕ ಹಾಲು ಕರೆಯುವ ರಾಸುಗಳ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

    ಸರ್ಕಾರಿ ನೌಕರರಿಗಿಂತ ಹೈನುಗಾರಿಕೆ ಅವಲಂಬಿತ ಕುಟುಂಬಗಳು ಹೆಚ್ಚು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ. ಅನಕ್ಷರಸ್ಥರು ಆರ್ಥಿಕವಾಗಿ ಸಬಲರಾಗಬಹುದು ಎಂಬುದಕ್ಕೆ ಹೈನುಗಾರಿಕೆ ಸಾಕ್ಷಿ ಎಂದರು.

    ಹಾಲು ಉತ್ಪಾದನಾ ಕ್ಷೇತ್ರಕ್ಕೆ ಸರ್ಕಾರ ಸಾವಿರಾರು ಕೋಟಿ ಅನುದಾನ ಮೀಸಲಿಡುತ್ತಿದೆ. ವಿಶೇಷ ಯೋಜನೆಗಳ ಜಾರಿಗೆ ತಂದಿದ್ದು, ಪಶುಪಾಲಕರಿಗೆ ಅನುಕೂಲ ಮಾಡಿಕೊಡುತ್ತಿದೆ. ದೇಶಿಯ ತಳಿ ಹಸುವಿಗೆ ಹೆಚ್ಚು ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಸಾಯಿವಾಲ್ ತಳಿ ಹಸುಗಳನ್ನು ಕಡಿಮೆ ದರದಲ್ಲಿ ಕೊಡಿಸಲಾಗುವುದು ಎಂದರು.

    ಬೆಂಗಳೂರು ರಾಸು ಪ್ರಥಮ: ಬೆಂಗಳೂರಿನ ಪಾದರಾಯನಪುರದ ರಿಶಿತಾ ಎಂಬುವವರ ರಾಸು 43.380 ಕೆ.ಜಿ. ಹಾಲು ಕರೆದು 80 ಸಾವಿರ ರೂ. ನಗದು ಒಳಗೊಂಡ ಪ್ರಥಮ ಬಹುಮಾನ, ಕೋಲಾರದ ಪೈಲ್ವಾನ್ ನಾರಾಯಣ್ಣಪ್ಪ ಅವರ ರಾಸು 41.700 ಕೆ.ಜಿ. ಹಾಲು ಕರೆದು 60 ಸಾವಿರ ರೂ. ನಗದು ಒಳಗೊಂಡ ದ್ವಿತೀಯ ಬಹುಮಾನ, ಕೋಲಾರದ ಯೂನೀಸ್ ಪಾಷಾ ಅವರ ರಾಸು 40.640 ಕೆ.ಜಿ. ಹಾಲು ಕರೆದು, 40 ಸಾವಿರ ರೂ. ಒಳಗೊಂಡ ತೃತೀಯ ಬಹುಮಾನ, ಪಡೆದುಕೊಂಡವು. ತಾಲೂಕಿನ ಚೇತನ್ ಅವರ ರಾಸು 39.420 ಕೆ.ಜಿ. 20 ಸಾವಿರ ರೂ. ಒಳಗೊಂಡ 4ನೇ ಸ್ಥಾನ ಪಡೆದುಕೊಂಡಿತು. ಪಾದರಾಯನಪುರದ ಜಯಪ್ಪ ಅವರ ರಾಸು 35.420 ಕೆ.ಜಿ. ಹಾಲು ಕರೆದು 10 ಸಾವಿರ ರೂ. ನಗದು ಒಳಗೊಂಡ 5ನೇ ಬಹುಮಾನ ಪಡೆಯಿತು.

    ವಿಧಾನಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ಯೂನಿಯನ್ ಸಹಕಾರಿ ಜಿಲ್ಲಾ ನಿರ್ದೇಶಕ ಜಗದೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಗುರುಪ್ರಕಾಶ್, ಬಮುಲ್ ತಾಲೂಕು ಉಪವ್ಯವಸ್ಥಾಪಕ ಎ.ಆರ್.ಗೋಪಾಲ್​ಗೌಡ್ರು, ಪಶುವೈದ್ಯ ಮನು, ಆದರ್ಶ ತಾಲೂಕು ಪಶುಪಾಲಕರ ಸಂಘದ ಗೌರವಾಧ್ಯಕ್ಷ ಎನ್.ಗಂಗರಾಜು, ಅಧ್ಯಕ್ಷ ಡಾ. ಮಂಜುನಾಥ್, ಉಪಾಧ್ಯಕ್ಷ ವಿಜಯ್ಕುಮಾರ್, ಪ್ರಧಾನ ಕಾರ್ಯದರ್ಶಿ ಜಿ.ಎಚ್. ರಾಜಗೋಪಾಲ್, ಖಜಾಂಚಿ ಮುನಿರಾಜು, ಕಾರ್ಯದರ್ಶಿ ಸದಾಶಿವಯ್ಯ, ಸಹಕಾರ್ಯದರ್ಶಿ ಚೇತನ್ ಮತ್ತಿತರರು ಇದ್ದರು.

    ಕರುಗಳ ಪ್ರದರ್ಶನ ಸ್ಪರ್ಧೆ: ಕರುಗಳ ಪ್ರದರ್ಶನ ಸ್ಪರ್ಧೆಯಲ್ಲಿ ಭಕ್ತನಪಾಳ್ಯ ಮುನಿರಾಜು (ಪ್ರಥಮ) 5 ಸಾವಿರ ರೂ. ನಗದು, ಮುನೀರ್ (ದ್ವಿತೀಯ) 3 ಸಾವಿರ ರೂ. ನಗದು, ಹೊನ್ನಪ್ಪ (ತೃತೀಯ) 2 ಸಾವಿರ ರೂ. ನಗದು ಮತ್ತು ಪಾರಿತೋಷಕ ಪಡೆದುಕೊಂಡರು.

    ಹೈನೋದ್ಯಮ ಕಷ್ಟದ ಕೆಲಸವಾದರೂ ಲಾಭದಾಯಕ ಉದ್ಯಮವಾಗಿದೆ. ದೇಶಿಯ ಸಂಸ್ಕೃತಿಯ ಪ್ರತೀಕವಾಗಿರುವ ಗೋಮಾತೆಯ ರಕ್ಷಣೆ ಮತ್ತು ಪೋಷಣೆ ಮಾಡಬೇಕು. ಸರ್ಕಾರದ ಸೌಲಭ್ಯಗಳನ್ನು ಗ್ರಾಮೀಣ ಭಾಗದ ರೈತರು ಉಪಯೋಗಿಸಿಕೊಳ್ಳಬೇಕು.

    | ಡಾ.ಕೆ.ಶ್ರೀನಿವಾಸ್​ವುೂರ್ತಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts