More

    ಮಾ.6ಕ್ಕೆ ಹಾಲಿನ ಭವಿಷ್ಯ

    ಬೆಂಗಳೂರು: ಆರ್​ಸಿಇಪಿ ಒಪ್ಪಂದದ ಗುಮ್ಮ ತಾತ್ಕಾಲಿಕವಾಗಿ ಮರೆಯಾಗಿ ರೈತರು ನೆಮ್ಮದಿಯಾಗಿ ಉಸಿರು ಬಿಟ್ಟಿರುವಾಗಲೇ, ಐಸ್ಕ್ರೀಂ ಲಾಬಿ ಹಾಲಿನ ಉತ್ಪನ್ನಗಳ ಆಮದಿಗೆ ಒಪ್ಪಿಗೆ ನೀಡುವಂತೆ ಕೇಂದ್ರದ ಮೇಲೆ ಒತ್ತಡ ತರಲಾರಂಭಿಸಿದ್ದು, ಆ ಮೂಲಕ ಪರೋಕ್ಷವಾಗಿ ಮುಕ್ತ ಮಾರುಕಟ್ಟೆಗೆ ಅವಕಾಶ ತೆರೆಯುವಂತೆ ಮಾಡುವ ಪ್ರಯತ್ನ ನಡೆದಿದೆ.

    ಕೇಂದ್ರ ಪಶು ಸಂಗೋಪನೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶುಕ್ರವಾರ ನಡೆಸಿದ ಸಭೆಯಲ್ಲಿ ಖಾಸಗಿ ಐಸ್ಕ್ರೀಂ, ತುಪ್ಪ, ಸಿಹಿ ತಿಂಡಿ ಹಾಗೂ ಇತರ ಉತ್ಪನ್ನಗಳ ತಯಾರಿಕಾ ಸಂಸ್ಥೆಗಳು ವಿದೇಶದಿಂದ ಹಾಲಿನ ಉತ್ಪನ್ನಗಳ ಆಮದಿಗೆ ಅವಕಾಶ ನೀಡುವಂತೆ ಒತ್ತಡ ತಂದಿವೆ. ಆದರೆ ಅಮುಲ್ ಹಾಗೂ ಕೆಎಂಎಫ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಾರ್ಚ್ 6ಕ್ಕೆ ಮತ್ತೊಂದು ಮಹತ್ವದ ಸಭೆ ನಡೆಯಲಿದೆ.

    ಐದು ವರ್ಷಕ್ಕೊಮ್ಮೆ ಕೊರತೆ: ಪ್ರತಿ ಐದು ವರ್ಷಕ್ಕೊಮ್ಮೆ ಹಾಲು ಕೊರತೆ ಕಾಡುತ್ತದೆ. ಆರನೇ ವರ್ಷದಿಂದ ಸರಿಯಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಕೊರತೆ ಇರಲಿಲ್ಲ. ಈ ವರ್ಷ ಸ್ವಲ್ಪ ಕೊರತೆಯಾಗಿದೆ. ಮಾರ್ಚ್, ಏಪ್ರಿಲ್ ನಂತರ ಹಾಲು ಸಮೃದ್ಧಿಯಾಗಿ ಉತ್ಪಾದನೆಯಾಗಲಿದೆ ಎಂಬ ಮಾಹಿತಿಯನ್ನು ಅಮುಲ್ ಮತ್ತು ಕೆಎಂಎಫ್ ನೀಡಿವೆ.

    ಒಂದು ವೇಳೆ ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟರೆ, ದೇಶದಲ್ಲಿ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೆಟ್ಟ ಹೆಸರು ಬರಲಿದೆ ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿವೆ.

    ಆಮದು ಸುಂಕಕ್ಕೆ ವಿರೋಧ: ಅಮುಲ್, ಕೆಎಂಎಫ್​ನಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೇ. 60 ಸುಂಕ ಕಟ್ಟಿ ಆಮದು ಮಾಡಿಕೊಳ್ಳಬಹುದೆಂದು ಖಾಸಗಿ ಸಂಸ್ಥೆಗಳಿಗೆ ಹೇಳಿದೆ. ಶೇ. 60 ಸುಂಕ ವಿಧಿಸಿದರೆ ಬೆಲೆ ಹೆಚ್ಚಳವಾಗಲಿದೆ ಎಂಬ ಕಾರಣಕ್ಕೆ ಖಾಸಗಿ ಸಂಸ್ಥೆಗಳು ಒಪ್ಪಿಲ್ಲ. ಆದ್ದರಿಂದಲೇ ಮಾ.6ಕ್ಕೆ ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಗಿದೆ.

    ಡೋನಾಲ್ಡ್ ಟ್ರಂಪ್ ಜತೆ ಒಪ್ಪಂದವಿಲ್ಲ

    ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಭೇಟಿಯ ಸಂದರ್ಭದಲ್ಲಿ ಹಾಲಿನ ಆಮದು ಕುರಿತು ಚರ್ಚೆ ನಡೆಯುತ್ತಿಲ್ಲ. ಈ ಬಗ್ಗೆ ಸುದ್ದಿಗಳು ಬರುತ್ತಿದ್ದಂತೆ ಕೆಎಂಎಫ್, ಅಮುಲ್ ಮತ್ತಿತರ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಸಂರ್ಪಸಿವೆ. ಆ ರೀತಿಯ ಒಪ್ಪಂದ ಆದರೆ ಕಷ್ಟವೆಂದು ಮನವರಿಕೆ ಮಾಡಿಕೊಟ್ಟಿವೆ. ಅಂತಹ ಯಾವುದೇ ಒಪ್ಪಂದ ಇಲ್ಲವೆಂದು ಕೇಂದ್ರ ಪಶು ಸಂಗೋಪನಾ ಇಲಾಖೆ ಸ್ಪಷ್ಟಪಡಿಸಿದೆ.

    ಆಮದು ಸುಂಕ ಏಕೆ?

    ದೇಶದಲ್ಲಿ ಹಾಲಿನ ಪುಡಿ ಬೆಲೆ ಕೆಜಿಗೆ ಸರಾಸರಿ 300 ರೂ. ಇದೆ. ಬೇರೆ ದೇಶದಿಂದ ಆಮದಾದರೆ ಸರಾಸರಿ 200 ರೂ. ಇರುತ್ತದೆ. ಆಮದು ಸುಂಕ ವಿಧಿಸಿದರೆ ಅದು ಸಹ 300 ರಿಂದ 320 ರೂ. ಆಗುತ್ತದೆ. ಆಮದು ಸುಂಕ ವಿಧಿಸದಿದ್ದರೆ ದೇಶದ ಹಾಲಿನ ಪುಡಿ ಬೇಡಿಕೆ ಇರುವುದಿಲ್ಲ. ಸುಂಕ ವಿಧಿಸಿದರೆ ಪೈಪೋಟಿ ಇದ್ದರೂ ಗುಣಮಟ್ಟದಿಂದ ದೇಶದ ಹಾಲಿನ ಪುಡಿಗೆ ಬೇಡಿಕೆ ಕುಂದುವುದಿಲ್ಲವೆಂಬುದು ಒಂದು ವಾದ.

    ಹಾಲಿನ ಪುಡಿ ಆಮದಿಗೆ ಕೆಎಂಎಫ್ ಹಾಗೂ ಅಮುಲ್ ವಿರೋಧ ವ್ಯಕ್ತಪಡಿಸಿವೆ. ಮಾರ್ಚ್ ನಂತರ ಹಾಲಿನ ಉತ್ಪಾದನೆ ಜಾಸ್ತಿಯಾಗಲಿದೆ. ಒಂದು ವೇಳೆ ಮಾ. 6ರ ಸಭೆಯಲ್ಲಿ ಕೇಂದ್ರ ಸರ್ಕಾರವೇನಾದರೂ ಆಮದು ಸುಂಕವಿಲ್ಲದೇ ಒಪ್ಪಿಗೆ ನೀಡಿದರೆ ಅದರ ವಿರುದ್ದ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ರೈತರ ಹಿತ ಕಡೆಗಣಿಸಿ ಒಪ್ಪಿಗೆ ನೀಡುವುದಿಲ್ಲವೆಂಬ ವಿಶ್ವಾಸವಿದೆ.

    | ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷ, ಕರ್ನಾಟಕ ಹಾಲು ಮಹಾಮಂಡಲ

    ಆರ್​ಸಿಇಪಿಗೆ ವಿರೋಧ

    ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಲು ಆರ್​ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಇಡೀ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಸಹಿ ಹಾಕುವುದನ್ನು ಮುಂದೂಡಿತ್ತು.

    ಹಾಲಿನ ಪುಡಿ ದಾಸ್ತಾನು ಎಷ್ಟಿದೆ?:

    ಅಮುಲ್ ಬಳಿಯಲ್ಲಿ 20 ಸಾವಿರ ಮೆಟ್ರಿಕ್ ಟನ್. ಕೆಎಂಎಫ್ ಬಳಿಯಲ್ಲಿ 2 ಸಾವಿರ ಮೆಟ್ರಿಕ್ ಟನ್.

    ಖಾಸಗಿ ಸಂಸ್ಥೆಗಳಿಗೆ ದಿನಕ್ಕೆ ಬೇಕಾಗುವ ಹಾಲಿನ ಪುಡಿ: ಅಂದಾಜು 2 ಸಾವಿರ ಮೆಟ್ರಿಕ್ ಟನ್.

    ರಾಜ್ಯದಲ್ಲಿ ಉತ್ಪಾದನೆಯಾಗುವ ಹಾಲು: ಪ್ರತಿ ನಿತ್ಯ ಸರಾಸರಿ 86 ಲಕ್ಷ ಲೀಟರ್.

    ಕ್ಷೀರಭಾಗ್ಯಕ್ಕೆ ಎಷ್ಟು ಪುಡಿ ಬೇಕು?: ನಿತ್ಯ ಕ್ಷೀರ ಭಾಗ್ಯಕ್ಕೆ 82 ಮೆಟ್ರಿಕ್

    ಟನ್ ಹಾಲಿನ ಪುಡಿ ಅಗತ್ಯ. ಇಷ್ಟು ಹಾಲಿನ ಪುಡಿ ತಯಾರಿಕೆಗೆ 7 ಲಕ್ಷ ಲೀಟರ್ ಹಾಲು ಬೇಕು.

    ಎಲ್ಲಿಂದ ಹೆಚ್ಚು ಆಮದು?:

    ನ್ಯೂಜಿಲೆಂಡ್, ಆಸ್ಟ್ರೇಲಿಯಾ

    ಹಾಗೂ ಇತರ ರಾಷ್ಟ್ರಗಳಿಂದ.

    ದೇಶದಲ್ಲಿ ಹೈನೋದ್ಯಮದಲ್ಲಿ ತೊಡಗಿದವರು: ರೈತರ ಸಂಖ್ಯೆ

    10 ಕೋಟಿ. ಡೇರಿಗಳಲ್ಲಿನ

    ನೌಕರರ ಸಂಖ್ಯೆ 5 ಕೋಟಿ.

    ದೇಶದಲ್ಲಿ ಹಾಲಿನ ಉತ್ಪಾದನೆ: ಅಂದಾಜು 188 ಮಿಲಿಯನ್ ಟನ್.

    ರುದ್ರಣ್ಣ ಹರ್ತಿಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts