More

    ತುಮುಲ್‌ನಲ್ಲಿ ಹಾಲಿನ ಹೊಳೆ; ಪ್ರತಿನಿತ್ಯ 9 ಲಕ್ಷ ಲೀಟರ್ ಕ್ಷೀರ ; ನಷ್ಟ ಭರಿಸಲು ರೈತರ ಜೇಬಿಗೆ ಕತ್ತರಿ

    ತುರುವೇಕೆರೆ : ಲಾಕ್‌ಡೌನ್ ಜಾರಿ ಪರಿಣಾಮ ಪಟ್ಟಣ ಬಿಟ್ಟು ಹಳ್ಳಿ ಸೇರಿದ್ದ ಜನರು ಹೈನುಗಾರಿಕೆಗೆ ಒತ್ತು ಕೊಟ್ಟ ಕಾರಣ ಜಿಲ್ಲೆಯಲ್ಲಿ ಹಾಲಿನ ಹೊಳೆಯೇ ಉಕ್ಕಿದೆ. ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್)ದ ಇತಿಹಾಸದಲ್ಲೇ ಅತಿಹೆಚ್ಚು 9.03 ಲಕ್ಷ ಲೀಟರ್ ಹಾಲು ನಿತ್ಯ ಹರಿದುಬರುತ್ತಿದೆ. ಇದರ ಹೊರೆಯ ಭಾರ ಇಳಿಸಲು ರೈತರ ಜೇಬಿಗೆ 2 ರೂ., ಕತ್ತರಿಹಾಕಲಾಗಿದೆ.

    ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ವಾತಾವರಣ ತಂಪಾಗಿದ್ದು, ರಾಸುಗಳಲ್ಲಿ ಹಾಲು ಇಳುವರಿ ಸಹಜವಾಗಿ ಹೆಚ್ಚಾಗಿದೆ. ಅಲ್ಲದೆ, ಲಾಕ್‌ಡೌನ್ ಜಾರಿ ಪರಿಣಾಮ ಪಟ್ಟಣ ತೊರೆದು ಹಳ್ಳಿ ಸೇರಿರುವವರು ಹೈನುಗಾರಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಜೂನ್ ಮೊದಲ ವಾರ ಆರಂಭದಲ್ಲಿ 8.16 ಲಕ್ಷ ಲೀ., ಹಾಲು ಸಂಗ್ರಹವಾಗುತ್ತಿದ್ದು ಎರಡನೇ ವಾರದ ಹೊತ್ತಿಗೆ 9.03 ಲಕ್ಷ ಲೀ., ಹಾಲು ಹರಿದುಬರುತ್ತಿದೆ. ಜೂನ್ ಮೊದಲವಾರ ಪ್ರತಿನಿತ್ಯ ಸರಾಸರಿ 10-12 ಸಾವಿರ ಲೀ., ಹೆಚ್ಚಾಗಿದ್ದು ಶುಕ್ರವಾರ ಹಾಲಿನ ಪ್ರಮಾಣ 9.03 ಲಕ್ಷ ಲೀ.,ಗೆ ಮುಟ್ಟಿದೆ.

    2 ರೂ., ಕಡಿತ: ಕಳೆದ ವರ್ಷ ಇದೇ ಸಮಯದಲ್ಲಿ 7.40 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ಈ ಬಾರಿ ಅತಿ ಹೆಚ್ಚು ಹಾಲು ಹರಿದುಬರುತ್ತಿದ್ದು ಇದರಿಂದ ನಷ್ಟ ಎದುರಿಸುವಂತಾಗಿದೆ. ಇದನ್ನು ಸರಿದೂಗಿಸಲು ಅನಿವಾರ್ಯವಾಗಿ ಪ್ರತೀ ಲೀಟರ್ ಹಾಲಿಗೆ 2 ರೂ., ಬೆಲೆ ಕಡಿತಗೊಳಿಸಿ ಜೂನ್ 8 ರಿಂದ ಆಡಳಿತಮಂಡಳಿ ಆದೇಶ ಹೊರಡಿಸಿದೆ.

    ಪ್ರತಿದಿನ 4 ಲಕ್ಷ ಲೀ., ಹಾಲನ್ನು ಜನರ ಬಳಕೆಗೆ ಪೂರೈಸಲಾಗುತ್ತದೆ. ಇನ್ನೂ 4 ಲಕ್ಷ ಲೀ., ಹಾಲಿನ ಪುಡಿ ಹಾಗೂ ಬೆಣ್ಣೆಯಾಗಿ ಪರಿವರ್ತಿಸಲಾಗುತ್ತಿದೆ. ಕರ್ಯ್ೂ ಹಿನ್ನೆಲೆಯಲ್ಲಿ ಹಾಲಿನ ಉತ್ಪನ್ನಗಳಿಗೂ ಮಾರುಕಟ್ಟೆ ಇಲ್ಲವಾಗಿದೆ. ರಾಮನಗರದ ಹಾಲಿನ ಪೌಡರ್ ಘಟಕಕ್ಕೆ 1.69 ಲೀ., ಮದರ್‌ಡೇರಿಗೆ 50 ಸಾವಿರ ಲೀ., ಚನ್ನರಾಯಪಟ್ಟಣಕ್ಕೆ 50 ಸಾವಿರ ಲೀ., ಆಂಧ್ರ ಸಮೀಪದ ತಲ್ಲಿಗೆ 60 ಸಾವಿರ ಲೀ., ಕಳುಹಿಸಲಾಗುತ್ತಿದೆ. ಮೊಸರು, ಬೆಣ್ಣೆ, ತುಪ್ಪ , ಪೇಡಾ, ಮೈಸೂರು ಪಾಕ್ ಈ ರೀತಿ ಉತ್ಪನ್ನಗಳಿಗೂ ಈಗ ಬೇಡಿಕೆ ಇಲ್ಲವಾಗಿದೆ.

    ಲೀಟರ್ ಹಾಲಿಗೆ 25.93 ರೂಪಾಯಿ: ಜೂ.8ರಿಂದ ಜಾರಿಯಾಗಿರುವಂತೆ ಸಂಘಗಳಿಂದ ಖರೀದಿಸುವ ಶೇ. 3.5 ಜಿಡ್ಡಿನಾಂಶ ಹಾಗೂ ಶೇ. 8.50 ಎಸ್‌ಎನ್‌ಎ್ ಗುಣಮಟ್ಟದ ಪ್ರತಿ ಕೆಜಿ ಹಾಲಿಗೆ 25.93 ರೂ., ಮತ್ತು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 25.93 ರೂ., ನಿಗದಿಪಡಿಸಲಾಗಿದೆ. ಪ್ರಸ್ತುತ ಒಕ್ಕೂಟದಲ್ಲಿ ಶೇಖರಣೆಯಾಗುತ್ತಿರುವ ಶೇ.90 ಹಾಲು ಶೇ.8.50 ಎಸ್‌ಎನ್‌ಎ್ ಗುಣಮಟ್ಟದ್ದೇ ಆದ್ದರಿಂದ ಜಿಲ್ಲೆಯ ಬಹುತೇಕ ಹಾಲು ಉತ್ಪಾದಕ ರೈತರಿಗೆ 25.93ರೂ. ಸಿಗಲಿದೆ. ಶೇ.4.1ಜಿಡ್ಡಿನ ಪ್ರತಿ ಕೆಜಿ ಹಾಲಿಗೆ 27.99ರೂ., ಹಾಗೂ ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 26.99ರೂ, ನಿಗದಿಗೊಳಿಸಲಾಗಿದೆ.

    ತುಮುಲ್‌ನಲ್ಲಿ 2300 ಮೆಟ್ರಿಕ್ ಟನ್ ಹಾಲಿನ ಪೌಡರ್, 1300 ಮೆಟ್ರಿಕ್ ಟನ್ ಬೆಣ್ಣೆ ದಾಸ್ತಾನು ಉಳಿದಿದೆ. ಇದರ ಒಟ್ಟು ಮೌಲ್ಯ ಸುಮಾರು 85 ಕೋಟಿ ರೂ., ಹಾಗಾಗಿ, ಒಕ್ಕೂಟಕ್ಕೆ ಕಳೆದ 2 ತಿಂಗಳಲ್ಲಿ ಸುಮಾರು 19 ಕೋಟಿ ರೂ., ನಷ್ಟ ಆಗಿದೆ. ಇದನ್ನು ಸರಿದೂಗಿಸಲು ರೈತರಿಂದ ಖರೀದಿಸುವ ಹಾಲಿಗೆ 2 ರೂ., ಕಡಿತಗೊಳಿಸಲಾಗಿದೆ. ಈಗ ಒಕ್ಕೂಟದ ಇತಿಹಾಸದಲ್ಲೇ ದಾಖಲೆ ಎಂಬಂತೆ 9 ಲಕ್ಷ ಲೀ. ಹಾಲು ಹರಿದುಬರುತ್ತಿದೆ.
    ಸಿ.ವಿ.ಮಹಲಿಂಗಯ್ಯ, ಅಧ್ಯಕ್ಷ, ತುಮುಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts