More

  ಕಾಲ್ನಡಿಗೆ, ಬಸ್​, ರೈಲು ಹಿಡಿದು ಊರಿಗೆ ಬಂದಾಯ್ತು…., ಮುಂದೇನು?

  ಬೆಂಗಳೂರು: ಕರೊನಾ ವ್ಯಾಪಿಸುವುದನ್ನು ತಡೆಗಟ್ಟಲು ಲಾಕ್​ಡೌನ್​ ಘೋಷಣೆಯಾಗುತ್ತಿದ್ದಂತೆ ಉದ್ಯೋಗ ಕಳೆಕೊಂಡ ಜನರು ಹೇಗಾದರೂ ಸರಿ, ಊರು ಸೇರಿಕೊಂಡರೆ ಸಾಕಪ್ಪಾ ಎಂದು ಬಯಸಿದ್ದರು. ಕೆಲ ದಿನಗಳವರೆಗೆ ಕಾಯೋಣ ಎಂಬ ನಿರೀಕ್ಷೆ ಹೊತ್ತವರು ಎರಡನೇ ಹಂತದಲ್ಲೂ ಲಾಕ್​ಡೌನ್​ ವಿಸ್ತರಣೆಯಾದಾಗ, ಕೈಲ್ಲಿದ್ದ ಹಣವನ್ನು ಖಾಲಿ ಮಾಡಿಕೊಂಡಾಗಿತ್ತು. ಹೀಗಾಗಿ ಕಾಲ್ನಡಿಗೆಯಲ್ಲೇ ಊರಿನತ್ತ ಮುಖ ಮಾಡಿದರು. ಬಸ್​, ಲಾರಿ, ರೈಲು ಹಿಡಿದು ಊರುಗಳಿಗೆ ತಲುಪಿಕೊಂಡರು.
  ರೈಲ್ವೆ ಇಲಾಖೆ ಅಂದಾಜು 3,800 ಶ್ರಮಿಕ ಎಕ್ಸ್​ಪ್ರೆಸ್​ ರೈಲುಗಳನ್ನು ಓಡಿಸಿ 50 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಊರುಗಳಿಗೆ ತಲುಪಿಸಲಾಗಿದೆ ಎಂದು ಲೆಕ್ಕ ನೀಡಿದೆ. ಇನ್ನು ಹಲವು ರಾಜ್ಯಗಳು ಬಸ್​ಗಳನ್ನು ಕಳುಹಿಸಿ ತಮ್ಮವರನ್ನು ರಾಜ್ಯಗಳಿಗೆ ಕರೆಯಿಸಿಕೊಂಡಿವೆ.

  ಇದನ್ನೂ ಓದಿ; ಶ್ರಮಿಕ ಎಕ್ಸ್​ಪ್ರೆಸ್​ ರೈಲುಗಳಲ್ಲಿ 80 ವಲಸೆ ಕಾರ್ಮಿಕರ ಸಾವು 

  ಕರೊನಾ ವಾರಿಯರ್ಸ್​ ಎಂಬ ಹೆಮ್ಮೆ ಅವರದ್ದಾದರೆ, ಇವರದ್ದು ಕರೊನಾ ಕ್ಯಾರಿಯರ್ಸ್​ ಎಂಬ ಅಪಖ್ಯಾತಿ. ಹಲವರು ನೇರವಾಗಿ, ಇನ್ನುಳಿದವರು ಕ್ವಾರಂಟೈನ್​ ಮುಗಿಸಿ ಮನೆಗಳಿಗೆ ಸೇರಿಕೊಂಡಿದ್ದಾರೆ. ಇದಾಗಿ ಈಗ ವಾರಗಳೇ ಕಳೆದಿವೆ. ಸರ್ಕಾರ ನೀಡಿದ ಉಚಿತ ದಿನಸಿ, ಮನೆಯಲ್ಲಿದ್ದ ಅಕ್ಕಿ, ಗೋಧಿ, ಬೇಳೆಗಳು ಮುಗಿದಿವೆ. ಮುಂದೇನು? ಎಂಬ ಚಿಂತೆ ಈಗ ತಮ್ಮೂರಿಗೆ ಮರಳಿರುವ ‘ವಲಸೆ ಕಾರ್ಮಿಕ’ರನ್ನು ಕಾಡುತ್ತಿದೆ.

  ದೂರದ ಮುಂಬೈ, ನೆರೆಯ ತಮಿಳುನಾಡು, ಆಂಧ್ರ, ಕೇರಳ ಗಡಿಭಾಗದಲ್ಲಿದ್ದು ಪರವೂರುಗಳಲ್ಲಿ ನೆಲೆ ಕಂಡಿದ್ದವರು, ದೂರದ ಊರುಗಳಿಂದ ರಾಜಧಾನಿಗೆ ಬಂದು ಉದ್ಯೋಗದಲ್ಲಿದ್ದವರ ಸ್ಥಿತಿಯೂ ಇದೇ ಆಗಿದೆ. ಅತ್ತ ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಕ್ಕೆ ತೆರಳಿರುವ ಜನರೂ ಕೂಡ ಇದನ್ನೇ ಯೋಚಿಸುತ್ತಿದ್ದಾರೆ.
  ಸರ್ಕಾರವೇನೋ ಕೈಗಾರಿಕೆಗಳ ಪುನಾರಂಭಕ್ಕೆ ಅವಕಾಶ ನೀಡಿ ವಾರಗಳೇ ಕಳೆದಿವೆ. ಆದರೆ, ಉತ್ಪಾದನೆ ಆರಂಭಿಸಿದರೆ ಯಾರಿಗೆ ಪೂರೈಸೋಣ ಎಂಬ ಚಿಂತೆ ಅವರದ್ದು. ಇತ್ತ, ಅಂಗಡಿಗಳನ್ನು ತೆರೆದಿದ್ದರೂ ಗ್ರಾಹಕರಿಲ್ಲದ ಚಿಂತೆ ವ್ಯಾಪಾರಿಗಳದ್ದು. ಸದ್ಯ, ತರಕಾರಿ ದಿನಬಳಕೆಯ ವಸ್ತುಗಳನ್ನು ಹೊರತುಪಡಿಸಿದರೆ ಬೇರಾವುದಕ್ಕೂ ಬೇಡಿಕೆ ಕುದುರುತ್ತಿಲ್ಲ.

  See also  ಆಯಿಲ್ ಇಂಜಿನ್‌ನಲ್ಲೇ ಬೆಂಗಳೂರಿನಿಂದ ರಾಜಸ್ಥಾನಕ್ಕೆ ಪಯಣ ಬೆಳೆಸಿದ ನಾಲ್ವರು ಕಾರ್ಮಿಕರು

  ಇದನ್ನೂ ಓದಿ; ಆರ್ಥಿಕ ಪುನಶ್ಚೇತನಕ್ಕೆ ಮೂರನೇ ಸುತ್ತಿನ ಪ್ಯಾಕೇಜ್​ ನಿರೀಕ್ಷೆ; ಬೇಡಿಕೆ ಸೃಷ್ಟಿಗೆ ಸಿಗಲಿದೆಯೇ ನಗದು ಪರಿಹಾರ

  ಇತ್ತ, ಹಳ್ಳಿಗಳಲ್ಲೂ ಕೆಲಸವಿಲ್ಲ. ಕೃಷಿ ಚಟುವಟಿಕೆಗಳು ಊರಿನ ಎಲ್ಲರಿಗೂ ಕೆಲಸ ನೀಡಲ್ಲ. ಉದ್ಯೋಗ ಖಾತ್ರಿಯ ಸಂಬಳ ನಂಬಿಕೊಂಡು ಜೀವನ ಸಾಗಿಸಲಾಗದು.
  ನಗರದಲ್ಲಿ ಇನ್ನೊಂದು ವಾರದಲ್ಲಿ ಹೋಟೆಲ್​, ಮಾಲ್​ಗಳು ಹಾಗೂ ಧಾರ್ಮಿಕ ಕೇಂದ್ರಗಳು ಆರಂಭವಾಗಲಿವೆ. ಆದರೆ, ಸೇವಾ ವಲಯದ ಉದ್ದಿಮೆಗಳಿಗೂ ಗ್ರಾಹಕರದ್ದೇ ಚಿಂತೆ. ಹೀಗಿದ್ದರೂ ಆರಂಭವಂತೂ ಮಾಡಲೇ ಬೇಕಲ್ಲ. ಹೀಗಾಗಿ ಊರಿಗೆ ತೆರಳಿರುವ ಕಾರ್ಮಿಕರನ್ನು ಕರೆಯಿಸಿಕೊಳ್ಳಲಾಗುತ್ತಿದೆ.

  ಊರಿನಲ್ಲಿ ಉದ್ಯೋಗ ಇಲ್ಲ ಎನ್ನುವ ಕಾರಣಕ್ಕೆ ಬೇರೆಡೆ ತೆರಳಿ ‘ವಲಸೆ ಕಾರ್ಮಿಕರು’ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದವರೀಗ ಮತ್ತದೇ ಕೆಲಸಕ್ಕಾಗಿ, ಮತ್ತದೇ ಹಣೆಪಟ್ಟಿಯೊಂದಿಗೆ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಕಳೆದು ಹೋದಲ್ಲೇ ಮತ್ತೆ ಹುಡುಕಾಟ ಶುರು ಮಾಡಲಿದ್ದಾರೆ.

  ಇನ್ಫೋಸಿಸ್​ ಸಿಇಒ, ಸಿಒಒ, ಅಧ್ಯಕ್ಷರ ಸಂಬಳಕ್ಕಿಲ್ಲ ಕರೊನಾ ಭೀತಿ…!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts