More

    ಕಾಡಲಿದೆ ಕಾರ್ಮಿಕರ ಕೊರತೆ

    ಹರೀಶ್ ಮೋಟುಕಾನ ಮಂಗಳೂರು

    ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿದ್ದ 35 ಸಾವಿರಕ್ಕಿಂತಲೂ ಅಧಿಕ ವಲಸೆ ಕಾರ್ಮಿಕರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರಿಗೆ ಮರಳಿದ ಪರಿಣಾಮ ಮುಂದಿನ ಕೆಲ ತಿಂಗಳು ಕಾರ್ಮಿಕರ ಸಮಸ್ಯೆ ತೀವ್ರವಾಗಿ ಕಾಡುವ ಭೀತಿ ಎದುರಾಗಿದೆ.

    ಮನೆ ಕೆಲಸದಿಂದ ಹಿಡಿದು ತೋಟದ ಕೆಲಸ, ಕಟ್ಟಡ ನಿರ್ಮಾಣ, ರಸ್ತೆ-ಸೇತುವೆ ಕಾಮಗಾರಿ ಮತ್ತಿತರ ಶ್ರಮದ ಕೆಲಸಗಳಿಗೆ ಉತ್ತರ ಕರ್ನಾಟಕದ ಕಾರ್ಮಿಕರನ್ನು ಇಲ್ಲಿನವರು ನೆಚ್ಚಿಕೊಂಡಿದ್ದರು. ಕುಟುಂಬ ಸಮೇತರಾಗಿ ಬರುತ್ತಿದ್ದ ಕಾರ್ಮಿಕರು ಇಲ್ಲಿ ಬದುಕು ಕಟ್ಟಿಕೊಂಡಿದ್ದರು.
    ಲಾಕ್‌ಡೌನ್ ಬಳಿಕ ಸುಮಾರು ಒಂದೂವರೆ ತಿಂಗಳು ಕಾರ್ಮಿಕರು ಕೆಲಸ ಇಲ್ಲದೆ ವಾಸ ಮಾಡುತ್ತಿದ್ದ ಸ್ಥಳದಲ್ಲಿ ಬಂಧಿಯಾಗಿದ್ದು, ಮೂರು ಹೊತ್ತು ಊಟ ಇಲ್ಲದೆ ಪರದಾಡಿ ಊರಿಗೆ ಹೋಗಲು ತವಕಿಸಿದ್ದರು. ಕೊನೆಗೂ ಅವರನ್ನು ಸರ್ಕಾರ ಊರಿಗೆ ಮುಟ್ಟಿಸಿದೆ.

    ಶೇ.80 ಮಂದಿ ಊರಿಗೆ
    ಕಾರ್ಮಿಕ ಇಲಾಖೆ ಪ್ರಕಾರ ದ.ಕ. 20 ಸಾವಿರ ಹಾಗೂ ಉಡುಪಿ ಜಿಲ್ಲೆಯಲ್ಲಿ 15 ಸಾವಿರ ವಲಸೆ ಕಾರ್ಮಿಕರಿದ್ದಾರೆ. ಕಾರ್ಮಿಕರ ಮಕ್ಕಳು ಇಲ್ಲಿಯೇ ಸರ್ಕಾರಿ ಶಾಲೆಗಳಿಗೆ ಸೇರ್ಪಡೆಗೊಂಡಿದ್ದರು.
    ಮಂಗಳೂರು ನಗರದ ಮೂಲ್ಕಿ, ಸುರತ್ಕಲ್, ಬೈಕಂಪಾಡಿ, ಕಾವೂರು, ಕೂಳೂರು ಹಾಗೂ ಉಡುಪಿಯಲ್ಲಿ ಬೀಡಿನಗುಡ್ಡೆ, ನಿಟ್ಟೂರು, ಕುಂದಾಪುರ, ಬೈಂದೂರು, ಮಲ್ಪೆ ಮೊದಲಾದ ಕಡೆ ವಲಸೆ ಕಾರ್ಮಿಕರು ನೆಲೆಸಿದ್ದಾರೆ. ಕೆಲವರು ಮೀನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಈಗ ಶೇ.80ರಷ್ಟು ಮಂದಿ ಊರಿಗೆ ಮರಳಿದ್ದಾರೆ.
    ಊರಿನಲ್ಲಿ ಸಾಕಷ್ಟು ಜಮೀನು ಹೊಂದಿದ್ದವರು ಕೂಡ ವಲಸೆ ಕಾರ್ಮಿಕರಾಗಿ ಬಂದಿದ್ದಾರೆ. ಕೃಷಿಗೆ ಬಂಡವಾಳ ಹಾಕಲು ಸಾಧ್ಯವಿಲ್ಲದವರು, ಈ ಹಿಂದೆ ನಷ್ಟ ಅನುಭವಿಸಿದವರು, ನೀರಿನ ಕೊರತೆ ಇದ್ದವರು ಊರು ಬಿಟ್ಟು ಕರಾವಳಿಗೆ ಬಂದು ಇಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರ ಕೆಲಸಕ್ಕೆ ಇಲ್ಲಿ ಸಿಗುವಷ್ಟು ವೇತನ ಅವರ ಜಿಲ್ಲೆಗಳಲ್ಲಿ ಸಿಗುವುದಿಲ್ಲ. ವರ್ಷಪೂರ್ತಿ ಕೆಲಸವೂ ಇರುವುದಿಲ್ಲ. ಹಾಗಾಗಿ ಕರಾವಳಿ ಜಿಲ್ಲೆಗಳಲ್ಲಿ ಅವರಿಗೆ ಉದ್ಯೋಗಾವಕಾಶ ಹೆಚ್ಚಿರುವುದರಿಂದ ಇಲ್ಲಿಗೆ ಬರಲು ಮೊದಲ ಆದ್ಯತೆ ನೀಡುತ್ತಿದ್ದಾರೆ.

    ರಸ್ತೆ, ಕಟ್ಟಡ ಕಾಮಗಾರಿ ಸ್ಥಗಿತ: ನಿರ್ಮಾಣ ಕಾಮಗಾರಿ ಗುತ್ತಿಗೆದಾರರು ವಲಸೆ ಕಾರ್ಮಿಕರನ್ನೇ ನೆಚ್ಚಿಕೊಂಡು ಕಟ್ಟಡ, ಸೇತುವೆ, ರಸ್ತೆ ಮೊದಲಾದ ನಿರ್ಮಾಣ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದಾರೆ. ಅವರೊಂದಿಗೆ ಕೆಲಸ ಮಾಡುತ್ತಿದ್ದವರೆಲ್ಲ ಊರಿಗೆ ಮರಳಿದ್ದಾರೆ. ಇನ್ನು ಮಳೆಗಾಲ ಆರಂಭವಾಗುವುದರಿಂದ ಸದ್ಯಕ್ಕೆ ಅವರು ಮರಳುವ ಸಾಧ್ಯತೆ ಕಡಿಮೆ. ವಹಿಸಿಕೊಂಡ ಕೆಲಸ ಪೂರ್ಣಗೊಳಿಸುವುದು ಸವಾಲಾಗಿದೆ.

    ಕೈಗಾರಿಕೆಗಳಿಗೆ ತೊಂದರೆ: ಮಂಗಳೂರು ಪರಿಸರದ ಎಂಆರ್‌ಪಿಎಲ್, ಒಎನ್‌ಜಿಸಿ, ಎಂಸಿಎಫ್ ಸಹಿತ ನೂರಾರು ಕೈಗಾರಿಕೆಗಳಲ್ಲಿ ಶ್ರಮದ ಕೆಲಸ ಮಾಡುವವರು ವಲಸೆ ಕಾರ್ಮಿಕರು. ಅಲ್ಲಿನ ಗುತ್ತಿಗೆದಾರರು ವಲಸೆ ಕಾರ್ಮಿಕರನ್ನು ನೆಚ್ಚಿಕೊಂಡಿದ್ದಾರೆ. ಕೈಗಾರಿಕೆಗಳು ಪುನರಾರಂಭವಾಗುತ್ತಿದ್ದರೂ ಕಾರ್ಮಿಕರ ಕೊರತೆ ಚಟುವಟಿಕೆಗಳಿಗೆ ಅಡ್ಡಿಯಾಗಲಿದೆ.

    ಸಲೂನ್, ಪಾನ್ ಕಷ್ಟ: ಕರಾವಳಿಯಲ್ಲಿರುವ ಶೇ.60ರಷ್ಟು ಸಲೂನ್‌ಗಳಲ್ಲಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಕಾರ್ಮಿಕರಿದ್ದಾರೆ. ಪಾನ್ ಬೀಡಾ ಮಾರಾಟ ಮಾಡುವವರೂ ಹೊರ ರಾಜ್ಯದವರು. ಹೋಟೆಲ್, ಫಾಸ್ಟ್‌ಫುಡ್ ಅಂಗಡಿಗಳಲ್ಲಿ ಹೊರರಾಜ್ಯದ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು.

    ಕೃಷಿ ಚಟುವಟಿಕೆಗೆ ಸಮಸ್ಯೆ: ಗ್ರಾಮೀಣ ಭಾಗದಲ್ಲಿ ಅಡಕೆ, ತೆಂಗು ತೋಟ, ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದವರು ವಲಸೆ ಕಾರ್ಮಿಕರು. ಮಳೆಗಾಲ ಆರಂಭವಾದ ತಕ್ಷಣ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಗಿಡ ನಾಟಿ, ಗೊಬ್ಬರ ಹಾಕುವ ಪ್ರಕ್ರಿಯೆಗಳು ಆರಂಭಗೊಳ್ಳುತ್ತವೆ. ಈ ಬಾರಿ ಅವರ ಕೊರತೆ ಕಾಡಲಿದೆ.

    ಸೆಕ್ಯುರಿಟಿ ಗಾರ್ಡ್
    ಉಭಯ ಜಿಲ್ಲೆಗಳಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುವವರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದವರು. ಶೇ.80ರಷ್ಟು ವಸತಿ ಸಮುಚ್ಚಯಗಳಲ್ಲಿ ಉತ್ತರ ಕರ್ನಾಟಕದವರು ಭದ್ರತಾ ಸಿಬ್ಬಂದಿ. ಅವರ ಕುಟುಂಬಕ್ಕೆ ಆ ವಸತಿ ಸಮುಚ್ಚಯದಲ್ಲಿ ಪ್ರತ್ಯೇಕ ಸಣ್ಣ ಕೊಠಡಿ ಕಲ್ಪಿಸಿದ್ದು, ಹೆಚ್ಚಿನವರು ಊರಿಗೆ ಹೋಗಿರುವುದರಿಂದ ಭದ್ರತಾ ಸಿಬ್ಬಂದಿ ಕೊರತೆ ಎದುರಾಗಲಿದೆ.

    ಇಲಾಖೆಯಲ್ಲಿ 60 ಸಾವಿರ ಕಾರ್ಮಿಕರ ನೋಂದಣಿಯಾಗಿದೆ. ಇದರಲ್ಲಿ ವಲಸೆ ಕಾರ್ಮಿಕರು ಎಷ್ಟು ಎಂಬ ಮಾಹಿತಿ ಇಲ್ಲ. ಎಷ್ಟು ಮಂದಿ ಊರಿಗೆ ಹೋಗಿದ್ದಾರೆ ಎಂದು ನಿರ್ದಿಷ್ಟವಾಗಿ ಹೇಳಲಾಗದು. ಬಹುತೇಕ ಮಂದಿ ಊರಿಗೆ ಮರಳಿರುವುದರಿಂದ ಮುಂದಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಎದುರಾಗಲಿದೆ.
    – ನಾಗರಾಜ್, ಕಾರ್ಮಿಕ ಇಲಾಖೆ ಅಧಿಕಾರಿ, ಮಂಗಳೂರು

    ಮಂಗಳೂರಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದು, ನಾಲ್ಕು ದಿನಗಳ ಹಿಂದೆ ಊರಿಗೆ ಮರಳಿದ್ದೇವೆ. ಇನ್ನು ಮೀನುಗಾರಿಕೆ ರಜೆ ಆರಂಭವಾಗುವ ಕಾರಣ ಸದ್ಯಕ್ಕೆ ಕೆಲಸ ಇಲ್ಲ. ಮೂರು ತಿಂಗಳು ಕಳೆದು ಪರಿಸ್ಥಿತಿ ಸರಿ ಇದ್ದರೆ ಬರುತ್ತೇವೆ. ಜತೆಗೆ ಊರಿಗೆ ಬಂದವರು ಕೂಡ ಸದ್ಯದ ಮಟ್ಟಿಗೆ ಮಂಗಳೂರಿಗೆ ಹೋಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.
    – ಬೀರೇಶ, ವಲಸೆ ಕಾರ್ಮಿಕ, ಬಾದಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts