More

    ವಿದ್ಯುತ್ ಉಪವಿಭಾಗ ಎತ್ತಂಗಡಿ ಭೀತಿ

    ಶ್ರೀಪತಿ ಹೆಗಡೆ ಹಕ್ಲಾಡಿ ಶಂಕರನಾರಾಯಣ

    ಸಪ್ತ ಕ್ಷೇತ್ರ, ಪಂಚಕ್ಷೇತ್ರ, ಕ್ರೋಢ ಮುನಿ ತಪಸ್ಸು ಮಾಡಿದ ಪ್ರಸಿದ್ಧಿಯ ಶಂಕರನಾರಾಯಣ ಪೌರಾಣಿಕ ಹಿನ್ನೆಲೆಯಿಂದ ಎಷ್ಟೇ ಹೆಸರುವಾಸಿಯಾದರೂ ಪ್ರಸ್ತುತ ಅದೃಷ್ಟವಿಲ್ಲದ ನಾಡು ಎಂಬಂತಾಗಿದೆ.
    ಶಂಕರನಾರಾಯಣ ತಾಲೂಕು, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ, ಸೌಡ ಸೇತುವೆ ಎಲ್ಲ್ಲ ಆಯಿತು ಎನ್ನುವಷ್ಟರಲ್ಲಿ ನಿರಾಸೆ. ಜನರ ಹೋರಾಟದ ಫಲವಾಗಿ ಸಿಕ್ಕ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಉಳಿಸಿಕೊಳ್ಳಲು ಮತ್ತೆ ಹೋರಾಟ ಮಾಡಬೇಕಾದ ವಿಪರ್ಯಾಸ.
    ತಾಲೂಕು ಕೇಂದ್ರ ರಚಿಸಲು ತಾಲೂಕು ಹೋರಾಟ ಸಮಿತಿ ದಶಕಗಳಿಂದಲೂ ಹೋರಾಟ ಮಾಡುತ್ತಿದ್ದು, ಈ ಮಧ್ಯೆ ಸ್ವಂತ ಕಟ್ಟಡ ಇಲ್ಲದೆ ಒಂದೊಂದೇ ಇಲಾಖೆಗಳು ಇಲ್ಲಿಂದ ಕಾಲ್ಕೀಳಲು ಹವಣಿಸುತ್ತಿವೆ. ಈಗ ವಿದ್ಯುತ್ ಉಪ ವಿಭಾಗ ಕಚೇರಿಗೆ ಸರ್ಕಾರಿ ಸ್ಥಳ ಲಭ್ಯವಿಲ್ಲವೆಂಬ ಕುಂಟುನೆಪದಲ್ಲಿ ಎತ್ತಂಗಡಿಯಾಗುವ ಆತಂಕವಿದೆ.

    ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿ ಲಭ್ಯವಿರುವ ಡೀಮ್ಡ್ ರಹಿತ ಸರ್ಕಾರಿ ಸ್ಥಳ ಗುರುತಿಸಿ ಕಂದಾಯ ಇಲಾಖೆ, ವಿದ್ಯುತ್ ಇಲಾಖೆ, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರಿಗೆ ನೀಡಿದೆ. ಮುಂದೇನಾಗುತ್ತದೋ ನೋಡಬೇಕಿದೆ.

    ವಿಸ್ತೀರ್ಣ ದೊಡ್ಡದಿದೆ..
    ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ ಮನವಿಯ ಮೇರೆಗೆ ಅಂದಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಹಾಗೂ ಬೈಂದೂರು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಕ್ಷ್ಮಿನಾರಾಯಣ ಹಾಗೂ ಇಲಾಖಾ ಹಿರಿಯ ಅಧಿಕಾರಿಗಳ ಶಿಫಾರಸ್ಸು ಮೇಲೆ ವಿದ್ಯುತ್ ಉಪ ವಿಭಾಗ ಶಂಕರನಾರಾಯಣಕ್ಕೆ ಮಂಜೂರು ಆಗಿತ್ತು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವ್ಯಾಪ್ತಿಯಲ್ಲಿ ಬೆಳ್ವೆ, ಹಾಲಾಡಿ, ಸಿದ್ದಾಪುರ, ಅಂಪಾರು, ಹೊಸಂಗಡಿಯಲ್ಲಿ ಈ ಕಚೇರಿ ಶಾಖೆಯನ್ನು ಹೊಂದಿ ಹಳ್ಳಿಹೊಳೆಯಿಂದ ಕಾವ್ರಾಡಿ, ಹಳ್ಳಾಡಿ ಹರ್ಕಾಡಿ, ಆಮಸೆಬೈಲ್, ಶೇಡಿಮನೆ, ಮಾಡಮಕ್ಕಿವರೆಗೆ 26 ಗ್ರಾಮ ವ್ಯಾಪ್ತಿ ಹೊಂದಿದೆ.

    ಕಚೇರಿ ಬಿಳಿಯಾನೆ..
    2013ರಲ್ಲಿ ಕಚೇರಿ ಆರಂಭವಾಗಿದ್ದು ತಿಂಗಳಿಗೆ 18,000 ರೂ. ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ದುರಂತ ಎಂದರೆ ಅನುದಾನ ಲಭ್ಯವಿದ್ದರೂ ಸ್ವಂತ ಕಚೇರಿ, ಅಧಿಕಾರಿಗಳ ಕ್ವಾರ್ಟರ್ಸ್, ಗೋದಾಮು, ಗ್ರಾಹಕರಿಗೆ ಬಿಲ್ಲು ಕಟ್ಟಲು ಕೌಂಟರ್ ನಿರ್ಮಿಸಿಲ್ಲ. ಇಲಾಖಾ ಹಿರಿಯ ಅಧಿಕಾರಿಗಳ ಹಾಗೂ ಜನ ಸಂಪರ್ಕ ಸಭೆಯಲ್ಲೂ ಸ್ವಂತ ಕಟ್ಟಡ ಅವಶ್ಯಕತೆ ಕುರಿತು ಚರ್ಚೆ ನಡೆದಿದ್ದೇ ಸಾರ್ಥಕತೆ ಅಷ್ಟೇ.

    ಶಂಕರನಾರಾಯಣ ವಿದ್ಯುತ್ ಉಪ ವಿಭಾಗಕ್ಕೆ ಅನುದಾನವಿದ್ದರೂ ಸರ್ಕಾರಿ ಸ್ಥಳ ಲಭ್ಯವಿಲ್ಲವೆಂಬ ವಿಚಾರ ತಿಳಿಯಿತು. ಇಲಾಖಾ ಅಧಿಕಾರಿಗಳು ಗ್ರಾಪಂ ಕಚೇರಿ ಸಂಪರ್ಕ ಮಾಡಿದ್ದಾರೆ. ಶೀಘ್ರವಾಗಿ ವಿದ್ಯುತ್ ಉಪ ವಿಭಾಗಕ್ಕೆ ಸೂಕ್ತ ಸ್ಥಳ ಗ್ರಾಪಂ ವತಿಯಿಂದ ಒದಗಿಸಿಕೊಡಲಾಗುವುದು.
    ರವಿ ಕುಲಾಲ, ಶಂಕರನಾರಾಯಣ ಗ್ರಾಪಂ ಉಪಾಧ್ಯಕ್ಷ

    ಶಂಕರನಾರಾಯಣ ತಾ.ರ.ಹೋ. ಸಮಿತಿ ಅಂದಿನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಲಾಖಾ ಹಿರಿಯ ಅಧಿಕಾರಿಗಳು, ಇಂಧನ ಸಚಿವೆ, ಶಾಸಕರಿಗೆ ಮನವಿ ಅರ್ಪಿಸಿತು. ನಮ್ಮ ಮನವಿಗೆ ಇಲಾಖೆ ಸ್ಪಂದಿಸಿ ಕುಂದಾಪುರ ಉಪ ವಿಭಾಗ ವಿಭಜಿಸಿ ನೂತನ ಶಂಕರನಾರಾಯಣ ಉಪ ವಿಭಾಗ ಮಂಜೂರು ಮಾಡಿದೆ. ಸ್ವಂತ ಕಟ್ಟಡಕ್ಕೆ ಸ್ಥಳ ಲಭ್ಯವಿಲ್ಲವೆಂದು ಎತ್ತಂಗಡಿಯಾದರೆ ಸಾರ್ವಜನಿಕರು ಪುನಃ ಹೋರಾಟ ಮಾಡಬೇಕಾಗುತ್ತದೆ.
    ಚಿಟ್ಟೆ ರಾಜಗೋಪಾಲ ಹೆಗ್ಡೆ, ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ ಸಂಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts