More

    ವಸತಿ ಶಾಲೆಗೆ ಸ್ವಂತ ಕಟ್ಟಡ

    ಶಂಕರನಾರಾಯಣ: ನಕ್ಸಲ್ ಪೀಡಿತ ಪ್ರದೇಶ ಹಾಗೂ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಶಂಕರನಾರಾಯಣದಲ್ಲಿ ಆರಂಭವಾದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ.

    ಊರವರ ಸೃಜನಾತ್ಮಕ ಹಾಗೂ ಶಂಕರನಾರಾಯಣ ತಾಲೂಕು ರಚನಾ ಸಮಿತಿ ನಿರಂತರ ಪ್ರಯತ್ನದಿಂದ ವಸತಿ ಶಾಲೆ ಉಳಿಸಿಕೊಂಡದ್ದಷ್ಟೇ ಅಲ್ಲದೆ ಕಟ್ಟಡ, ಕಾಂಪೌಂಡ್ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ನೀಡಿ, 22 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕೂಡ ಆಗಿದೆ. ಶಂಕರನಾರಾಯಣ ತಾಲೂಕು ಕೇಂದ್ರವಾಗಿ ರಚನೆ ಮಾಡಬೇಕೆಂಬ ಹೋರಾಟ ಸಮಿತಿ ಆಶಯ ಈಡೇರದಿದ್ದರೂ ಶಾಲೆ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.

    ಶಂಕರನಾರಾಯಣ ಭಾಗದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಸೇರಲು ಆಗದೆ ಶಿಕ್ಷಣದಿಂದ ವಂಚಿತರಾಗಿ ಗುಳೇ ಹೋಗುತ್ತಿದ್ದುದು ತಾಲೂಕು ಹೋರಾಟ ಸಮಿತಿ ಗಮನಕ್ಕೆ ಬಂದಿತ್ತು. ಸಮಿತಿ ತಾಲೂಕು ರಚನೆಗಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿ ವಸತಿ ಶಾಲೆ ನೀಡುವಂತೆ ಬೇಡಿಕೆ ಇಟ್ಟಿತ್ತು.

    ಹೋರಾಟ ಸಮಿತಿ ಬೇಡಿಕೆ ಮನ್ನಿಸಿದ ಅಂದಿನ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ಶಾಲೆ ಪುರಸ್ಕರಿಸಿ ಮಂಜೂರು ಮಾಡಿದ್ದರು. 2017ರಲ್ಲಿ ಶಂಕರನಾರಾಯಣದಲ್ಲಿ ಪ್ರಾರಂಭವಾದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ತಿಂಗಳಿಗೆ 81 ಸಾವಿರ ರೂ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಇನ್ನೇನು ಸದ್ಯದಲ್ಲೇ ಶಾಲೆ ಸ್ವಂತ ಕಟ್ಟಡ ಕಾಣಲಿದೆ. ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಕುರಿತು ವಿಜಯವಾಣಿ ಸರಣಿ ವರದಿ ಮಾಡಿತ್ತು.

    ಹೋರಾಟ ಸಮಿತಿ ಪ್ರಯತ್ನ
    ವಸತಿ ಶಾಲೆ ಪ್ರಾರಂಭವಾಗಿ ಒಂದೆರಡು ವರ್ಷದೊಳಗೆ ಸ್ವಂತ ನಿವೇಶನ ಹಾಗೂ ಕಟ್ಟಡ ಹೊಂದಬೇಕೆಂಬ ನಿಯಮವಿದ್ದರೂ ಕುಮಾರಸ್ವಾಮಿ ಅವಧಿಯ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಶಂಕರನಾರಾಯಣ ಗ್ರಾಮದಲ್ಲಿ ಸರ್ಕಾರಿ ಸ್ಥಳ ಲಭ್ಯವಿಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಬೇರೆ ಗ್ರಾಮಕ್ಕೆ ಸ್ತಳಾಂತರಿಸುವ ಪ್ರಯತ್ನ ನಡೆಯಿತು. ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ ಯತ್ನದಿಂದ ವಸತಿ ಶಾಲೆ ಇಲ್ಲೇ ಉಳಿಯಿತು. ಬಳಿಕ ಇಲ್ಲಿನ ಸರ್ಕಾರಿ ಸ್ಥಳಗಳ ಸಂಪೂರ್ಣ ಮಾಹಿತಿಯನ್ನು ಹೋರಾಟ ಸಮಿತಿ ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ಗೆ ನೀಡಿತ್ತು. ಎಚ್ಚೆತ್ತ ಜಿಲ್ಲಾಡಳಿತ, ಸ್ಥಳೀಯ ಗ್ರಾಪಂ ಅಧ್ಯಕ್ಷ ರವಿ ಕುಲಾಲ ನೆರವಿನಲ್ಲಿ ಶಂಕರನಾರಾಯಣ ಗ್ರಾಮದಲ್ಲೇ ಎಂಟು ಎಕರೆ ಸರ್ಕಾರಿ ಸ್ಥಳ ಗುರುತಿಸಿ ವಸತಿ ಶಾಲೆ ಹೆಸರಿಗೆ ಮಂಜೂರು ಮಾಡಿದ್ದರಿಂದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಗ್ರಾಮದಲ್ಲೇ ಉಳಿಯಿತು.

    ಶಂಕರನಾರಾಯಣ ಪೇಟೆಗೆ ಅತಿ ಸನಿಹ ಸೌಡಾ ಪಕ್ಕ ಸಾಕಷ್ಟು ನೀರು, ರಸ್ತೆ ಸಂಪರ್ಕ ಹೊಂದಿರುವ ಸರ್ವೇ ನಂಬರ್ 176/1ಪಿ1 ರಲ್ಲಿ ಎಂಟು ಎಕರೆ ಸರ್ಕಾರಿ ಸ್ಥಳ ವಸತಿ ಶಾಲೆಗಾಗಿ ಮಂಜೂರಾಗಿದೆ. 22 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ, ಕಾಂಪೌಂಡ್ ನಿರ್ಮಿಸಲಾಗುತ್ತಿದ್ದು, ಟೆಂಡರ್ ಕೂಡ ಆಗಿದೆ. 2017ರಿಂದ ಆರಂಭಗೊಂಡಿರುವ ವಸತಿ ಶಾಲೆ ಪ್ರಸ್ತುತ 9ನೇ ತರಗತಿವರೆಗೆ ಕಾರ್ಯನಿರ್ವಹಿಸುತ್ತಿದೆ. 140 ಮಕ್ಕಳು ವಸತಿ ಶಾಲೆಯಲ್ಲಿ ಇದ್ದಾರೆ. ಸ್ವಂತ ಕಟ್ಟಡ ರಚನೆಯಾದ ನಂತರ ಪದವಿ ತರಗತಿ ಆರಂಭವಾಗಲಿದೆ.
    ಚಿಟ್ಟೆ ರಾಜಗೋಪಾಲ ಹೆಗ್ಡೆ, ಸಂಚಾಲಕ, ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ

    ಶಂಕರನಾರಾಯಣ ಗ್ರಾಪಂ ಅಧ್ಯಕ್ಷನಾಗಿದ್ದಾಗ ವಸತಿ ಶಾಲೆ ಇಲ್ಲಿಂದ ಎತ್ತಂಗಡಿಗೆ ಪ್ರಯತ್ನ ನಡೆದಿತ್ತು. ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಜತೆ ಚರ್ಚಿಸಿ ವಸತಿ ಶಾಲೆಗೆ ಸೌಡ ರಸ್ತೆಯಲ್ಲಿ ಸರ್ಕಾರಿ ಜಾಗ ಮಂಜೂರಾತಿ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ವಸತಿ ಶಾಲಾ ಆವರಣ ಗೋಡೆ, ಕಟ್ಟಡ ರಚನೆ, ಸಂಕೀರ್ಣ ರಚನೆಗಾಗಿ ತುಮಕೂರು ಮೂಲದ ಗುತ್ತಿಗೆದಾರರೊಬ್ಬರಿಗೆ 22 ಕೋಟಿ ರೂ.ಗೆ ಟೆಂಡರ್ ಆಗಿದ್ದು ಶೀಘ್ರದಲ್ಲೇ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
    ರವಿ ಕುಲಾಲ್, ಶಂಕರನಾರಾಯಣ ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts