More

    ಮಾನಸಿಕ ಸ್ಥೈರ್ಯವೇ ಯಶಸ್ಸಿನ ಸಾಧನ


    ವಿಜಯಪುರ: ನಿರ್ದಿಷ್ಟ ಗುರಿ ಸಾಧನೆಗೆ ಮಾನಸಿಕ ಸ್ಥೈರ್ಯವೇ ನಿಜವಾದ ಸಾಧನ ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ. ಬಿರಾದಾರ ಹೇಳಿದರು.

    ಇಲ್ಲಿನ ಸಂಗನಬಸವ ಸಮುದಾಯ ಭವನದಲ್ಲಿ ವಿಜಯವಾಣಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆದ ಎಜುಕೇಷನ್ ಎಕ್ಸಪೋ-2024’ರಲ್ಲಿ ಐಎಎಸ್, ಐಪಿಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗೆ ಹೇಗೆ? ಎಂಬುದರ ಕುರಿತು ಅವರು ಉಪನ್ಯಾಸ ನೀಡಿದರು. ಕ್ಷೇತ್ರ ಯಾವುದೇ ಆದರೂ ಸಾಧನೆಗೆ ಕಠಿಣ ಪರಿಶ್ರಮ, ಸತತ ಪ್ರಯತ್ನ ಮುಖ್ಯ. ಸೋಲು, ನೋವು, ಹತಾಸೆಗಳಿದ್ದರೂ ಅವುಗಳಿಗೆ ಕುಗ್ಗದೆ ಮುನ್ನುಗ್ಗಬೇಕು. ಬದುಕಿನಲ್ಲಿ ಏನೆಲ್ಲ ಕಳೆದುಕೊಂಡರೂ ಅದು ಕಳೆದುಕೊಂಡಂತಲ್ಲ; ಮಾನಸಿಕ ಸ್ಥೈರ್ಯ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ.

    ಯಾರು ಮಾನಸಿಕವಾಗಿ ಸದೃಢರಿರುತ್ತಾರೋ ಅವರು ಎಂಥದ್ದೇ ಸವಾಲು ಎದುರಾದರೂ ಗಟ್ಟಿಯಾಗಿ ನಿಂತು ಎದುರಿಸಬಲ್ಲ ಛಾತಿ ಹೊಂದಿರುತ್ತಾರೆ ಎಂದರು. ಓರ್ವ ಸ್ಪರ್ಧಾತ್ಮಕ ಪರೀಕ್ಷಾರ್ಥಿ ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂದು ಆತ್ಮಹತ್ಯೆಗೆ ಶರಣಾದ ಕಥೆ ಕೇಳಿದ್ದೇವೆ. ಇನ್ನೊಂದೆಡೆ ಅಂಥದ್ದೇ ಪರೀಕ್ಷಾರ್ಥಿ ಕೈಕೊಟ್ಟ ಹುಡುಗಿಗೆ ಸವಾಲೆಸೆದು ಐಎಎಸ್ ತೇರ್ಗಡೆ ಹೊಂದಿದ ಯಶೋಗಾಥೆಯನ್ನೂ ಕೇಳಿದ್ದೇವೆ. ಈ ಎರಡೂ ಸನ್ನಿವೇಶದಲ್ಲಿ ಗಮನಿಸಬೇಕಾದ ಅಂಶವೆಂದರೆ ಮಾನಸಿಕ ಸ್ಥೈರ್ಯ.

    ಆತ್ಮಹತ್ಯೆಗೆ ಶರಣಾದ ಪರೀಕ್ಷಾರ್ಥಿಗೆ ಆತ್ಮಸ್ಥೈರ್ಯವೇ ಇರಲಿಲ್ಲ, ಆದರೆ, ಆತ್ಮಸ್ಥೈರ್ಯ ಇರುವ ಪರೀಕ್ಷಾರ್ಥಿ ಕೈಕೊಟ್ಟ ಹುಡುಗಿ ಎದುರೆ ಐಎಎಸ್ ಅಧಿಕಾರಿಯಾಗಿ ಉನ್ನತ ಬದುಕು ರೂಪಿಸಿ ತೋರಿಸಿದನು. ಇಂಥ ಆತ್ಮಸ್ಥೈರ್ಯ ಎಲ್ಲರಲ್ಲೂ ಬರಬೇಕೆಂದರು. ಆತ್ಮವಿಶ್ವಾಸವೇ ಮನುಷ್ಯನ ಬಲ. ಅದು ಸಾಮರ್ಥ್ಯದಿಂದ ಕೂಡಿದರೆ ಸಾಧನೆಯ ಹೆಜ್ಜೆ ಮೈಲಿಗಲ್ಲಾಗಬಹುದು. ಈ ದಿಸೆಯಲ್ಲಿ ಪ್ರಯತ್ನ ಸಾಗಬೇಕು. ವಿದ್ಯಾರ್ಥಿ ದಿಸೆಯಿಂದಲೇ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವ ಕೆಲಸವಾಗಬೇಕೆಂದರು. ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಸವರಾಜ ಕವಲಗಿ ಮಾತನಾಡಿ, ಯಶಸ್ಸು ಎನ್ನುವುದು ಪರಿಶ್ರಮದಿಂದ ಮಾತ್ರ ಸಿಗುವಂಥದ್ದು. ಅದಕ್ಕಾಗಿ ಕೆಲವು ಸೂತ್ರಗಳನ್ನು ಕಲಿಯಲೇ ಬೇಕು.

    ಪರೀಕ್ಷೆಯಲ್ಲಿ ಗಳಿಸುವ ಯಶಸ್ಸು ಮತ್ತು ಜೀವನದಲ್ಲಿ ಗಳಿಸುವ ಯಶಸ್ಸು ಬೇರೆ ಬೇರೆ. ಎರಡನ್ನೂ ಸಮನಾಗಿ ಕಲಿಯಲೇಬೇಕು ಎಂದರು. ವಿಜಯಪುರ ಗುಮ್ಮಟಗಳ ನಗರಿ. ಆದಿಲ್‌ಶಾಹಿ ಕಟ್ಟಿದ ಗೋಳಗುಮ್ಮಟ, ಫ.ಗು. ಹಳಕಟ್ಟಿ ಅವರು ಕಟ್ಟಿದ ವಚನ ಗುಮ್ಮಟ, ಲಿಂ. ಸಿದ್ಧೇಶ್ವರ ಶ್ರೀಗಳು ಕಟ್ಟಿದ ಜ್ಞಾನ ಗುಮ್ಮಟದ ಸಾಲಿನಲ್ಲಿ ಇನ್ನೊಂದು ಗುಮ್ಮಟ ಇದೆ. ಅದುವೇ ಚಾಣಕ್ಯ ಗುಮ್ಮಟ. ಅದನ್ನು ಕಟ್ಟಿದವರು ಎನ್.ಎಂ. ಬಿರಾದಾರ ಅವರು. ಆ ಚಾಣಕ್ಯ ಗುಮ್ಮಟದಲ್ಲಿ ಸಹಸ್ರಾರು ಜನ ಕಲಿತು ಸಾಧನೆಗೈದಿದ್ದಾರೆ. ಆ ಸಾಲಿನಲ್ಲಿ ಎಲ್ಲರೂ ಸಾಗಬೇಕೆಂದರು.

    ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಎನ್.ಎಂ. ಬಿರಾದಾರ ಅವರೇ ಸಾಕ್ಷಿ. ಅಮೆರಿಕನ್‌ರು ತಮ್ಮ ಮನೆಯಲ್ಲಿ ಕಲಿಸುವ ಮೊದಲ ಪಾಠವೇಐ ಕ್ಯಾನ್’ ಎಂಬುದನ್ನು. ಅಂದರೆ ನನ್ನಿಂದ ಸಾಧ್ಯ, ನಾನು ಮಾಡುತ್ತೇನೆ ಎಂದು. ಹಾಗೆಯೇ ನಮ್ಮ ವಿಜಯಪುರದವರಿಗೆ ಜಿಲ್ಲೆಯ ಹೆಸರೇ ಪ್ರೇರಣೆ. ವಿಜಯಪುರ ಎಂಬ ಪದದಲ್ಲಿಯೇ `ವಿಜಯ‘ ಪದ ಅಡಗಿದೆ. ಆ ವಿಜಯ ನಮ್ಮದಾಗಬೇಕೆಂದು ಮಾರ್ಮಿಕವಾಗಿ ನುಡಿದರು. ವೇದ ಅಕಾಡೆಮಿ ಅಧ್ಯಕ್ಷ ಶಿವಾನಂದ ಕೆಲೂರ ಮಾತನಾಡಿ, ಕಠಿಣ ಪರಿಶ್ರಮಕ್ಕೆ ಬೇರೆ ಮಾರ್ಗವಿಲ್ಲ. ಏನೇ ಸಾಧನೆ ಮಾಡಿದರೂ ಹಾರ್ಡ್ವರ್ಕ್ ಒಂದೇ ದಾರಿ. ನಮ್ಮ ದೌರ್ಬಲ್ಯಗಳ ಅರಿವು ನಮಗಿಂತ ಹೆಚ್ಚಾಗಿ ಬೇರೆಯವರಿಗೆ ಗೊತ್ತಿರಲು ಸಾಧ್ಯವಿಲ್ಲ. ನಮ್ಮ ದೌರ್ಬಲ್ಯ ಅರಿತು ಅವುಗಳನ್ನು ಮೆಟ್ಟಿ ಸಾಧನೆಯತ್ತ ಹೆಜ್ಜೆ ಹಾಕಬೇಕೆಂದರು.

    ಗುರಿ ಸಾಧನೆಗೆ ಬಾಲ್ಯದಿಂದಲೇ ಪ್ರಯತ್ನ ಮುಂದುವರಿಸಬೇಕು. ಅದಕ್ಕಾಗಿ ತಪಸ್ಸು ಮಾಡಬೇಕು. ಅಂದಾಗ ಗುರಿ ಸಾಧಿಸಲು ಸಾಧ್ಯ ಎಂದರು. ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಹಿನ್ನೆಲೆಯಲ್ಲಿ 50 ರಸಪ್ರಶ್ನೆಗಳ ಸ್ಪರ್ಧೆ ಆಯೋಜಿಸಿದ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ. ಬಿರಾದಾರ ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts