More

    ಎತ್ತಿನಹೊಳೆ ಶಂಕುಸ್ಥಾಪನೆಗೆ ಆಹ್ವಾನಿಸಿಲ್ಲವೆಂದು ತಾಪಂ ಸದಸ್ಯರ ಅಸಮಾಧಾನ

    ತಿಪಟೂರು: ಎರಡು ದಿನಗಳ ಹಿಂದೆ ಸಚಿವ ಮಾಧುಸ್ವಾಮಿ ಅವರಿಂದ ಶಂಕುಸ್ಥಾಪನೆಗೊಂಡ ಎತ್ತಿನಹೊಳೆ ಕಾಮಗಾರಿಯ ಭೂಮಿ ಪೂಜೆ ಸರ್ಕಾರಿ ಕಾರ್ಯಕ್ರಮವಲ್ಲ. ಅದು ಗುತ್ತಿಗೆದಾರರ ಆತುರದ ಶಂಕುಸ್ಥಾಪನೆ ಕಾರ್ಯಕ್ರಮ ಎಂದು ಎತ್ತಿನಹೊಳೆ ನೀರಾವರಿ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಈಶ್ವರಪ್ಪ ಶುಕ್ರವಾರ ತಾಪಂ ಅಧ್ಯಕ್ಷ ಜಿ.ಎಸ್.ಶಿವಸ್ವಾಮಿ ಸಮ್ಮುಖದಲ್ಲಿ ನಡೆದ ಸಾಮಾನ್ಯ ಸಭೆಗೆ ಮಾಹಿತಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಇತ್ತೀಚೆಗೆ ಬಿದರೇಗುಡಿಯ ಕೆವಿಕೆ ಬಳಿ ಎತ್ತಿನಹೊಳೆ ಭೂಮಿ ಪೂಜೆಗೆ ಚುನಾಯಿತ ಜನ ಪ್ರತಿನಿಧಿಗಳನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂಬ ಸದಸ್ಯರ ಆರೋಪಕ್ಕೆ ಉತ್ತರಿಸಿದ ಈಶ್ವರಪ್ಪ, ಅಂದು ನಡೆದದ್ದು ಸರ್ಕಾರಿ ಕಾರ್ಯಕ್ರಮವಲ್ಲ, ಗುತ್ತಿಗೆದಾರರ ಆತುರದ ಶಂಕುಸ್ಥಾಪನೆ ಎಂದು ಸಭೆಗೆ ತಿಳಿಸಿದರು.

    ಉದ್ದೇಶಿತ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಇಲ್ಲ, ಯೋಜನೆ ಹಾದು ಹೋಗುವ ಜಾಗ ಸರಿಯಾಗಿ ನಿಗಧಿಯಾಗಿದೆಯೇ ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ, ಸರ್ಕಾರಿ ಜಾಗದಲ್ಲಿ ಮೊದಲು ಯೋಜನೆ ಪ್ರಾರಂಭವಾಗಲಿದೆ, ನಂತರ ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದರು.

    ಯೋಜನೆ ಹಾದು ಹೋಗುವ ಜಮೀನಿನ ಪಕ್ಕದ ಕೆರೆಗಳಿಗೆ ನೀರು ಹರಿಸುವ ಸಾಧ್ಯತೆಗಳ ಬಗ್ಗೆ ಮೊದಲು ಇಲ್ಲ ಎಂದು ಹೇಳಿಕೆ ನೀಡಿದ ನಂತರ, ಇದು ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ್ದು ಎಂದು ದ್ವಂದ್ವ ಹೇಳಿಕೆ ನೀಡಿದ್ದು ಸದಸ್ಯರಿಗೆ ಸಮಾಧಾನ ತರಲಿಲ್ಲ. ತಾಲೂಕಿನಲ್ಲಿ ಕಾರ್ಮಿಕ ಇಲಾಖೆ ಮಂದಗತಿಯಲ್ಲಿ ಕಾರ‌್ಯನಿರ್ವಹಿಸುತ್ತಿದ್ದು, ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರಪತ್ರ ಮುದ್ರಿಸಿ ಪ್ರಚಾರ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

    ತಾಪಂ ಉಪಾಧ್ಯಕ್ಷ ಎನ್.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿಕುಮಾರ್, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ತಾಪಂ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಭೆಯಿದ್ದಾಗಲೇ ಕಲಾಪ ಬರುತ್ತಾ?: ಹಾಲು ಉತ್ಪಾದಕರ ಸಂಘಗಳು, ಪ್ರಾಥಮಿಕ ಸಹಕಾರ ಸಂಘಗಳ ಬಗ್ಗೆ ಸಹಕಾರ ಇಲಾಖೆಯ ಎಫ್‌ಡಿಎ ನೌಕರ ಸಂಜಯ್, ಸಭೆಗೆ ತಪ್ಪು ಮಾಹಿತಿ ನೀಡಿದಾಗ ಸದಸ್ಯರು ಕೆಂಡಾಮಂಡಲರಾಗಿ ಯಾವುದೇ ಕೆಡಿಪಿ ಹಾಗೂ ಸಾಮಾನ್ಯ ಸಭೆಗೆ ಕರೆದಾಗ ಹಿರಿಯ ಅಧಿಕಾರಿ ಗೈರಾಗುವುದು, ಕೋರ್ಟ್ ಕಲಾಪದ ನೆಪ ಹೇಳುವುದು ತರವಲ್ಲ. ಮುಖ್ಯ ಸಭೆಗಳ ದಿನದಂದೇ ನಿಮಗೆ ಕೋರ್ಟ್ ನೆಪ ಕಾಣಿಸುತ್ತೆ, ಮುಂದಿನ ಸಭೆ ಕರೆದಾಗ ಸರಿಯಾದ ಮಾಹಿತಿಯೊಂದಿಗೆ ಅಧಿಕಾರಿಯೇ ಖುದ್ದು ಹಾಜರಾಗಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಎಚ್ಚರಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts