More

    ಮೇಲುಕೋಟೆ ಡೇರಿ ಚುನಾವಣೆ ಫಲಿತಾಂಶ ಪ್ರಕಟ

    ಪಾಂಡವಪುರ: ತೀವ್ರ ಕುತೂಹಲ ಕೆರಳಿಸಿದ್ದ ಮೇಲುಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಚುನಾವಣಾ ಫಲಿತಾಂಶ ಹೈಕೋರ್ಟ್ ನಿರ್ದೇಶನದಂತೆ ಸೋಮವಾರ ಪ್ರಕಟವಾಗಿದೆ.

    ಕಾನೂನು ಸಂಘರ್ಷಕ್ಕೆ ಕಾರಣವಾಗಿ ತಡೆಯಾಗಿದ್ದ ಚುನಾವಣೆಯಲ್ಲಿ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಅವರ ತಂಡವಾದ ರೈತಸಂಘ ಮತ್ತು ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳು 10 ಸ್ಥಾನ ಹಾಗೂ ಜೆಡಿಎಸ್ ಬೆಂಬಲಿತ ಇಬ್ಬರು ಗೆಲುವು ಸಾಧಿಸಿದ್ದಾರೆ.

    ಒಟ್ಟು 12 ಸದಸ್ಯ ಬಲದ ಡೇರಿ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಳೆದ ಜ.11ರಂದು ಚುನಾವಣೆ ನಡೆದಿತ್ತು. 231 ಅರ್ಹ ಮತದಾರರು ಮತ್ತು 128 ಅನರ್ಹ ಮತದಾರರು ಚುನಾವಣೆಯಲ್ಲಿ ಮತದಾನ ಮಾಡಿದ್ದರು. ಆದರೆ ಅನರ್ಹ ಮತದಾರರ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದೆಂದು ರಾಮಚಂದ್ರು ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಫಲಿತಾಂಶ ಪ್ರಕಟಕ್ಕೆ ತಡೆ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಕೇವಲ ಅರ್ಹ ಮತದಾರರ ಮತಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸುವಂತೆ ಸಹಕಾರ ಇಲಾಖೆಗಳ ಸಹಾಯಕ ನಿಬಂಧಕರಿಗೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಫಲಿತಾಂಶ ಘೋಷಣೆ ಮಾಡಲಾಯಿತು.

    ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಚಲಾವಣೆಗೊಂಡ ಮತಪತ್ರಗಳನ್ನು ಪಾಂಡವಪುರ ಪಟ್ಟಣದ ತಾಲೂಕು ಕಚೇರಿಯಲ್ಲಿನ ಖಜಾನೆಯಲ್ಲಿ ಇರಿಸಲಾಗಿತ್ತು. ಫಲಿತಾಂಶ ಪ್ರಕಟಣೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ, ಮತಪತ್ರಗಳನ್ನು ಮೇಲುಕೋಟೆ ಡೇರಿಗೆ ಕೊಂಡೊಯ್ದು ಮತಗಳ ಎಣಿಕೆ ನಡೆಸಲಾಯಿತು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಕೆ.ಎಂ.ಆನಂದನಾಯಕ ಚುನಾಯಿತ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರು.

    ಕಾಂಗ್ರೆಸ್ ಮತ್ತು ರೈತಸಂಘ ಮೈತ್ರಿಕೂಟ ಬೆಂಬಲಿತರಾಗಿ ಕಾಡೇನಹಳ್ಳಿ ರಾಮಚಂದ್ರು, ಎಂ.ವೈ.ವೆಂಕಟೇಶ, ಎಂ.ಎಸ್.ಈರೇಗೌಡ, ಎಂ.ಎನ್.ಕುಮಾರ್, ಕೆ.ಎನ್.ರಾಮಪ್ರಿಯ, ಲಲಿತಾ, ಮಂಜುಳಾ, ಬಲರಾಮ, ನಟರಾಜು, ಅಣ್ಣಯ್ಯ ಗೆಲುವು ಸಾಧಿಸಿದರೆ, ಜೆಡಿಎಸ್ ಬೆಂಬಲಿತರಾಗಿ ಎಂ.ಎನ್.ನಂದಕುಮಾರ ಮತ್ತು ಗೀತಾ ಜಯ ಗಳಿಸಿದರು.

    ಮೈತ್ರಿಕೂಟ ಅಭ್ಯರ್ಥಿಗಳ ಗೆಲುವು ಘೋಷಣೆಯಾಗುತ್ತಿದ್ದಂತೆ ರೈತಸಂಘ, ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ವಿಜೇತರಿಗೆ ಶುಭ ಹಾರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts