More

    ಯಶಸ್ವಿ ನಡಿಗೆ ರಾಮನಗರದತ್ತ ಮುಂದಡಿ: ಮೇಕೆದಾಟು ಪಾದಯಾತ್ರೆಗೆ ಮೂರನೇ ದಿನವೂ ಭಾರಿ ಜನಬೆಂಬಲ, ಕಲಾತಂಡಗಳ ಮೆರುಗು

    ರಾಮನಗರ: ಮೇಕೆದಾಟು ಪಾದಯಾತ್ರೆ ದಿನದಿಂದ ದಿನಕ್ಕೆ ಜನ ಬೆಂಬಲದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮಂಗಳವಾರ ಚಿಕ್ಕನಹಳ್ಳಿ ತಲುಪಿದ್ದು, ಬುಧವಾರ ರಾಮನಗರ ಪ್ರವೇಶಿಸಲಿದೆ. ಎರಡನೇ ದಿನ ಅನಾರೋಗ್ಯದಿಂದ ಗೈರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಾಪಸ್ ಆಗುವುದರೊಂದಿಗೆ ಪಾದಯಾತ್ರೆ ಕಳೆ ಕಟ್ಟಿದರೆ, ದಾರಿಯುದ್ದಕ್ಕೂ ಜನರಿಂದ ಹೂವಿನ ಮಳೆ ಸುರಿಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಹಸ್ರಾರು ಕಾರ್ಯಕರ್ತರ ಬೆಂಬಲದೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೂರನೇ ದಿನದ ಪಾದಯಾತ್ರೆಯನ್ನು ರಾತ್ರಿ 10 ಗಂಟೆ ಸುಮಾರಿಗೆ ಕನಕಪುರ ಗಡಿ ಗ್ರಾಮ ಚಿಕ್ಕೇನಹಳ್ಳಿ ತಲುಪುವುದರೊಂದಿಗೆ ಅಂತ್ಯಗೊಳಿಸಿದರು. ಮಂಗಳವಾರ ಬೆಳಗ್ಗೆ 11 ಗಂಟೆಗೆ ಕನಕಪುರದಲ್ಲಿ ಪಾದಯಾತ್ರೆ ಶುರುವಾಯಿತು. ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿ, ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಒಟ್ಟಿನಲ್ಲಿ ಮೂರನೇ ದಿನದ ಪಾದಯಾತ್ರೆ ಅದ್ದೂರಿತನ, ವಿಭಿನ್ನ ಕಲಾತಂಡಗಳ ಮೆರುಗಿಗೆ ಸಾಕ್ಷಿಯಾಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷ.

    ಮತ್ತೆ 41 ಮಂದಿ ವಿರುದ್ಧ ಪ್ರಕರಣ: ಪಾದಯಾತ್ರೆಯಲ್ಲಿ ಪಾಲ್ಗೊಂಡವರ ಮೇಲೆ ಪ್ರಕರಣ ದಾಖಲಿಸುತ್ತಿರುವ ಪೊಲೀಸರು, ಎರಡನೇ ದಿನ ನಿಯಮ ಉಲ್ಲಂಘಿಸಿದ ಡಿ.ಕೆ.ಶಿವಕುಮಾರ್ ಸೇರಿ 41 ಮಂದಿ ವಿರುದ್ಧ ಸಾತನೂರು ಠಾಣೆಯಲ್ಲಿ ಎರಡನೇ ಎಫ್​ಐಆರ್ ದಾಖಲು ಮಾಡಿದ್ದಾರೆ. ಮೊದಲ ದಿನದ ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಸೇರಿ 31 ಮಂದಿ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಡಿಕೆಶಿ, ಸಂಸದ ಸುರೇಶ್ ಸೇರಿ ಒಟ್ಟು 13 ಮಂದಿ ವಿರುದ್ಧ ಎರಡನೇ ಪ್ರಕರಣ ಇದಾಗಿದ್ದರೆ, ಕೃಷ್ಣಭೈರೇಗೌಡ, ಎಚ್.ಆಂಜನೇಯ, ಮಧು ಬಂಗಾರಪ್ಪ ಸೇರಿ 28 ಹೊಸ ಬರ ಮೇಲೆ ಪ್ರಕರಣ ದಾಖಲಾಗಿದೆ.

    ಚಾಮರಾಜನಗರದಲ್ಲೂ ದೂರು ದಾಖಲು: ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮುಖಂಡರ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ ಚಾಮರಾಜನಗರ ಮತ್ತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಜಿಲ್ಲೆಯಿಂದ ದೊಡ್ಡ ಆಲಹಳ್ಳಿಗೆ ಬಸ್ ಮತ್ತು ಕಾರಿನಲ್ಲಿ ಹೋಗಿದ್ದವರು ಮಾಸ್ಕ್ ಧರಿಸಿರಲಿಲ್ಲ. ಪರಸ್ಪರ ಅಂತರ ಕಾಯ್ದುಕೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲೆಯಿಂದ ಪಾದಯಾತ್ರೆಗೆ ಸುಮಾರು 4 ಸಾವಿರ ಜನ ತೆರಳಿದ್ದರು. ಸತ್ತೇಗಾಲದ ಚೆಕ್​ಪೋಸ್ಟ್ ಬಳಿ ನಿಯಮ ಉಲ್ಲಂಘನೆ ಆರೋಪದಡಿ ಕೆಲವರ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ.

    ಡಿಕೆ ಡಿಕೆ ಎನ್ನಬೇಡಿ: ಪಾದಯಾತ್ರೆ ಆರಂಭವಾಗು ತ್ತಿದ್ದಂತೆ ಕೆಲಕಡೆ ಡಿಕೆ… ಡಿಕೆ… ಎನ್ನುವ ಘೂಷಣೆಯನ್ನು ಕಾರ್ಯ ಕರ್ತರು ಕೂಗಿದರು. ಈ ವೇಳೆ ಕೈ ಸನ್ನೆ ಮೂಲಕವೇ ಬೇಡ ಬೇಡ ಎಂದ ಡಿ.ಕೆ.ಶಿವಕುಮಾರ್, ನಂತರ ಸಿದ್ದರಾಮಯ್ಯ ಕಡೆ ಕೈ ಮಾಡಿ ತೋರಿಸಿ, ‘ಸಿದ್ದರಾಮಯ್ಯ ಇದ್ದಾರೆ ಬೇಡ’ ಎನ್ನುವ ಸಂದೇಶವನ್ನು ರವಾನೆ ಮಾಡಿದರು. ಇದಕ್ಕೆ ಕ್ಯಾರೆ ಎನ್ನದ ಕಾರ್ಯಕರ್ತರು ಘೊಷಣೆ ಕೂಗುವುದನ್ನು ಮುಂದುವರಿಸಿದರು.

    ಮುಂದಿನ ಸಿಎಂ ಸಿದ್ದರಾಮಯ್ಯ: ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಕೊಂಚ ಹಿಂದೆ ಉಳಿಯುತ್ತಿದ್ದಂತೆ ಸಿದ್ದರಾಮಯ್ಯ ಅವರನ್ನು ಸುತ್ತುವರಿದ ಕಾಂಗ್ರೆಸ್ ಕಾರ್ಯಕರ್ತರು, ಮುಂದಿನ ಮುಖ್ಯಮಂತ್ರಿ, ಶಾಶ್ವತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೈ ಎನ್ನುತ್ತ ಘೂಷಣೆಗಳನ್ನು ಕೂಗಿ ಸಂಭ್ರಮಿಸಿದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಸಿದ್ದರಾಮಯ್ಯ ತಮ್ಮ ಪಾಡಿಗೆ ತಾವು ಹೆಜ್ಜೆ ಹಾಕಿದರು.

    ಡಿಕೆಶಿ ಮೌನ- ಸಿದ್ದು ಅಬ್ಬರ: ಡಿಕೆಶಿ ಸ್ವಕ್ಷೇತ್ರ ಕನಕಪುರದಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶಿ ಸಿದರೆ, ಮೂರು ದಿನ ಮೌನಾಚರಣೆ ಮಾಡುತ್ತೇನೆ ಎಂದು ಶಪಥ ಮಾಡಿರುವ ಡಿ.ಕೆ.ಶಿವಕುಮಾರ್ ಮೌನ ಮುರಿಯ ಲಿಲ್ಲ. ಮಾಧ್ಯಮಗಳು ಎಷ್ಟೇ ಕೆಣಕಿದರೂ ತುಟಿ ಬಿಚ್ಚಲೇ ಇಲ್ಲ.

    ನಲಪಾಡ್ ನೂಕಿದ ಡಿಕೆಸು: ಮೂರನೇ ದಿನದ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದ ಕಾರಣದಿಂದಾಗಿ ಜನಜಂಗುಳಿ ಮೀರಿತ್ತು. ಈ ಹಿನ್ನೆಲೆಯಲ್ಲಿ ನಾಯಕರ ಪಾದಯಾತ್ರೆ ದಾರಿಯನ್ನು ಸುಗಮ ಮಾಡಿ ಕೊಡಲು ಸ್ವತಃ ಡಿ.ಕೆ.ಸುರೇಶ್ ಮುಂದೆ ನಿಂತಿದ್ದರು. ಈ ವೇಳೆ ನಾಯಕರ ಎದುರಿಗೆ ಬಂದ ರಾಜ್ಯ ಯುವ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷ ನಲ್ಲಪಾಡ್ ಹ್ಯಾರಿಸ್ ಕೊರಳ ಪಟ್ಟಿ ಹಿಡಿದು ಬೈಯುತ್ತಲೇ ಸುರೇಶ್ ದೂರ ತಳ್ಳಿದರು. ಇನ್ನೊಮ್ಮೆ ಕಾರ್ಯಕರ್ತನೊಬ್ಬ ಫೋಟೋ ತೆಗೆಯಲು ಮುಂದಾದಾಗ, ಆತನನ್ನು ಸಹ ಇದೇ ರೀತಿ ಸುರೇಶ್ ನೂಕಿದರು.

    ಪಾದಯಾತ್ರೆಗೆ ತಡೆ ಕೋರಿ ಪಿಐಎಲ್

    ಬೆಂಗಳೂರು: ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ತಡೆಹಿಡಿಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಬೆಂಗಳೂರಿನ ತಿಂಡ್ಲು ನಿವಾಸಿ ಎ.ವಿ. ನಾಗೇಂದ್ರ ಪ್ರಸಾದ್ ಪಿಐಎಲ್ ಸಲ್ಲಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ರಾಮನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿ ಇನ್ನಷ್ಟೇ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬರಬೇಕಿದೆ.

    ಸಿಜೆಗೆ ಪತ್ರ: ಮೇಕೆದಾಟು ಪಾದಯಾತ್ರೆ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ಅಧ್ಯಕ್ಷ ಡಾ. ಸುಧಾಕರ ಹೊಸಳ್ಳಿ, ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

    ಮುನ್ನುಡಿ ಬರೆದಿದ್ದೇ ಕಾಂಗ್ರೆಸ್

    ರಾಮನಗರ: ಮೇಕೆದಾಟು ಯೋಜನೆ ವಿಚಾರ 1968ರಿಂದ ಚರ್ಚೆಯಲ್ಲಿದ್ದು, ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ಅವರೊಂದಿಗೆ ರ್ಚಚಿಸಿ ಚಾಲನೆ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎನ್ನುವುದನ್ನು ಬಿಜೆಪಿ ನಾಯಕರು ಮೊದಲು ತಿಳಿದುಕೊಳ್ಳಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರ ಸಿದ್ದರಾಮಯ್ಯ ಹೇಳಿದರು. ಕನಕಪುರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದು ಜನರಿಗೆ ತಪು್ಪ ಸಂದೇಶ ನೀಡುವ ನೀಚ ರಾಜಕಾರಣವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿದೆ. ಆದರೆ ಯೋಜಗೆ ಜಾರಿಗೆ ತರಲು ಮುನ್ನುಡಿ ಬರೆದಿದ್ದೇ ಕಾಂಗ್ರೆಸ್. ವಿಸõತ ಯೋಜನಾ ವರದಿ ಸಿದ್ಧಪಡಿಸಿದ್ದೂ ನಾವೇ ಎಂದರು. ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಮೇಕೆದಾಟು ವಿಚಾರದಲ್ಲಿ ಏನೂ ಮಾಡಿಯೇ ಇಲ್ಲ ಎನ್ನುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಏನು ಮಾಡಿದ್ದೀರಿ ತೋರಿಸಿ ಎಂದು ತಮ್ಮದೇ ಧಾಟಿಯಲ್ಲಿ ಪ್ರಶ್ನಿಸಿದ ಸಿದ್ದರಾಮಯ್ಯ, ಹಿಂದೆ ನೀವೇ 5 ವರ್ಷ ಅಧಿಕಾರದಲ್ಲಿ ಇದ್ದೀರಲ್ಲ ಆಗ ಏನು ಮಾಡಿದ್ದೀರಿ ಕಾರಜೋಳ? ನಿಮಗೆ ರಾಜ್ಯದ ಜನ 25 ಸಂಸದರನ್ನು ಕೊಟ್ಟಿದ್ದಾರೆ, ಯಾಕೆ ಕೇಂದ್ರವನ್ನು ಪ್ರಶ್ನಿಸುತ್ತಿಲ್ಲ. ರಾಜ್ಯದ ಜನತೆ ಬಗ್ಗೆ ಕಾಳಜಿ ಇದೆಯಾ? ನಿಮಗೆ ಪ್ರಾಮಾಣಿಕತೆ ಇದೆಯೇ ಎಂದು ಕುಟುಕಿದರು.

    ತಮಿಳುನಾಡಿನಲ್ಲಿ ಬಿಜೆಪಿ ಬಲಪಡಿಸಿಕೊಳ್ಳಲು, ಅಲ್ಲಿನ ಅಧ್ಯಕ್ಷ ಅಣ್ಣಾಮಲೈ ಧರಣಿ ನಡೆಸಿದಾಗ ನಮ್ಮ ರಾಜ್ಯದ ಸಿ.ಟಿ. ರವಿ ಹೇಳಿಕೆ ನೋಡಿ, ಬಿಜೆಪಿ ಯಾರ ಪರವಾಗಿದೆ ಎಂದು ಗೊತ್ತಾಗುತ್ತದೆ. ಬಿಜೆಪಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದು, ನಿಮ್ಮ ಷಡ್ಯಂತ್ರವನ್ನು ಬಯಲು ಮಾಡುತ್ತೇವೆ. ಯೋಜನೆ ಜಾರಿಗೆ ಎರಡೂವರೆ ವರ್ಷ ಕಾಯ್ದು ಈಗ ಪಾದಯಾತ್ರೆ ಮಾಡುತ್ತಿದ್ದೇವೆ.

    | ಸಿದ್ದರಾಮಯ್ಯ ಮಾಜಿ ಸಿಎಂ

    ಎಳೆದಾಡಿ ಸಾಯಸ್ತಿದ್ದೀರಲ್ಲ…: ಗಾಣಾಳು ಗ್ರಾಮದಲ್ಲಿ ಸಿದ್ದರಾಮಯ್ಯ ಅವರೊಟ್ಟಿಗೆ ವಿಶ್ರಾಂತಿಗೆ ಬಂದ ಡಿ.ಕೆ.ಶಿವಕುಮಾರ್ ಅವರನ್ನು ಸುತ್ತುವರಿದ ಕಾರ್ಯಕರ್ತರು ಸೆಲ್ಪಿ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ಆಕ್ರೋಶಗೊಂಡ ಡಿಕೆಶಿ, ‘ಎಳೆದಾಡಿ ಸಾಯಿಸ್ತಿದ್ದೀರಲ್ಲ’ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಪಾದಯಾತ್ರೆ ಮಾಡಿ ಮೈ ಕೈ ನೋವಾಗಿದೆ ಎಂದು ದೂರ ಕಳಿಸಿದರು.

    ಮುದ್ದೆ ಊಟ ಸವಿದ ಸಿದ್ದು: ಮೂರನೇ ದಿನದ ಪಾದಯಾತ್ರೆಯಲ್ಲಿ ಗಾಣಾಳು ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ, ಮುದ್ದೆ ಊಟ ಸೇವಿಸಿ ಕೆಲಕಾಲ ವಿಶ್ರಾಂತಿ ಪಡೆದರು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಾಯಕರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬಿಸಿಬೇಳೆಬಾತ್, ಮೊಸರನ್ನ, ಮುದ್ದೆ, ಅವರೆಕಾಳು ಸಾಂಬಾರ್, ಅನ್ನ ರಸಂ, ಜಿಲೇಬಿ, ಹಪ್ಪಳ, ಪಕೋಡ ಬಡಿಸಲಾಯಿತು.

    ದಾವೆ ಹೂಡಿದರೂ ಬಿಟ್ಟಿಲ್ಲ

    ಬೆಂಗಳೂರು: ಕರೊನಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಾವೆ ಹೂಡಿದ್ದು, ಕಾಂಗ್ರೆಸ್ ಪಾದಯಾತ್ರೆಯಿಂದ ಹಿಂದೆ ಸರಿಯಲಿದೆ ಎಂದು ಭಾವಿಸಿದ್ದೆವು. ಆದರೆ ಹಾಗಾಗದಿರುವುದು ಕಳವಳ ಹೆಚ್ಚಿಸಿದ್ದು, ಮುಂದೇನು ಮಾಡಬೇಕು ಎಂದು ರ್ಚಚಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಅಧಿಕೃತ ನಿವಾಸದ ಬಳಿಕ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಸೋಂಕು ಉಲ್ಬಣ ಸ್ಥಿತಿಗೆ ತಲುಪಿದ್ದು, ಪ್ರತಿಪಕ್ಷದ ನಾಯಕರು ಅರಿತುಕೊಳ್ಳಬೇಕು. ಕಾಂಗ್ರೆಸ್​ನ ಹಿರಿಯ ನಾಯಕರು ಸಂಕಷ್ಟ ಪರಿಸ್ಥಿತಿ ಅರ್ಥ ಮಾಡಿಕೊಳ್ಳದಿರುವುದು ದುರದೃಷ್ಟಕರವೆಂದು ಬೇಸರ ವ್ಯಕ್ತಪಡಿಸಿದರು.

    ಸುಪ್ರೀಂ ವಿಚಾರಣೆ 25ಕ್ಕೆ ಮುಂದೂಡಿಕೆ

    ನವದೆಹಲಿ: ಕೇಂದ್ರ ಸರ್ಕಾರದ ಅನುಮತಿಯಿಲ್ಲದಿದ್ದರೂ ಕರ್ನಾಟಕ ಸರ್ಕಾರ ಮೇಕೆದಾಟು ಪ್ರದೇಶದಲ್ಲಿ ಯೋಜನೆಗೆ ಸಂಬಂಧಿಸಿ ಕಾಮಗಾರಿ ಆರಂಭಿಸಿದೆ ಎಂದು ತಮಿಳುನಾಡು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮತ್ತೆ ಮುಂದೂಡಿದ್ದು, ಜ.25ಕ್ಕೆ ವಿಚಾರಣೆ ನಿಗದಿಯಾಗಿದೆ. ಮೇಕೆದಾಟು ಯೋಜನೆ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಮುಖ್ಯ ಅರ್ಜಿಯೊಂದಿಗೆ ಈ ಅರ್ಜಿ ವಿಚಾರಣೆ ನಡೆಯಲಿದೆ. ಮೇಕೆದಾಟು ಪ್ರದೇಶದಲ್ಲಿ ಕಾಮಗಾರಿ ಆರಂಭಗೊಂಡ ಬಗ್ಗೆ ಪತ್ರಿಕಾ ವರದಿಗಳನ್ನು ಆಧರಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಚೆನ್ನೈ ಪೀಠ ಸ್ವಯಂಪ್ರೇರಿತ ದೂರು ದಾಖಲಿಸಿ, ಈ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮುಖ್ಯ ಪೀಠಕ್ಕೆ ತಕರಾರು ಅರ್ಜಿ ಸಲ್ಲಿಸಿತ್ತು.

    ಅಶ್ವತ್ಥ v/s ಡಿಕೆಸು ಮತ್ತೆ ಗಂಡಸ್ತನ ಸವಾಲು

    ರಾಮನಗರ: ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತ್ತೆ ಗಂಡಸ್ತನ ಮಾತುಗಳು ರಾಜಕೀಯ ನಾಯಕರ ನಡುವಿನ ಜಂಗೀ ಕುಸ್ತಿಗೆ ಕಾರಣಾಗಿದೆ. ಮೇಕೆದಾಟು ಯೋಜನೆ ಜಾರಿ ಮಾಡುವ ಗಂಡಸುತನ ಇರೋದು ಬಿಜೆಪಿಗೆ ಮಾತ್ರ, ಕಾಂಗ್ರೆಸ್ ಪಕ್ಷಕ್ಕೆ ಇದನ್ನೆಲ್ಲ ಅನುಷ್ಠಾನಗೊಳಿಸುವ ಶಕ್ತಿಯೇ ಇಲ್ಲ. ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರಿಗೆ ಈ ಪೌರುಷವಿದೆಯಾ? ಎನ್ನುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಸವಾಲು ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7 ಬಾರಿ ಶಾಸಕರಾಗಿ, ಮೊದಲ ಬಾರಿಗೆ ಶಾಸಕರಾದಾಗ ಮಂತ್ರಿಯೂ ಆಗಿದ್ದ, ನಂತರ ಹಲವು ಬಾರಿ ಮಂತ್ರಿಯಾಗಿ ಮಹತ್ವದ ಖಾತೆಗಳನ್ನು ನಿಭಾಯಿಸಿರುವ ಡಿ.ಕೆ.ಶಿವಕುಮಾರ್ ಹಾಗೂ ಎರಡು ಬಾರಿ ಸಂಸದರಾಗಿರುವ ಡಿ.ಕೆ.ಸುರೇಶ್, ಇಷ್ಟು ವರ್ಷಗಳಲ್ಲಿ ಜಿಲ್ಲೆಗೆ ನೀಡಿದ ಕೊಡುಗೆ ಏನು? ಜಿಲ್ಲೆಯಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ, ಸಂಪನ್ಮೂಲವನ್ನು ಲೂಟಿ ಹೊಡೆದಿರುವುದನ್ನು ಬಿಟ್ಟರೆ ಇವರೇನು ಮಾಡಿದ್ದಾರೆ ಎಂದು ಕಿಡಿಕಾರಿದರು.

    ಬಿಜೆಪಿಯವರು ದೆಹಲಿಯಲ್ಲಿ ತೋರಿಸಲಿ: ಬಿಜೆಪಿಯವರು ಮೇಕೆದಾಟು ಯೋಜನೆ ಅನುಷ್ಠಾನ ಮಾಡುವ ಮೂಲಕ ಅವರ ಗಂಡಸುತನ ತೋರಿಸಲಿ ಎಂದು ಸಂಸದ ಡಿ.ಕೆ.ಸುರೇಶ್ ಸಚಿವ ಡಾ.ಅಶ್ವತ್ಥ ನಾರಾಯಣ ಅವರಿಗೆ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದ ಮೇಲೆ ಗಂಡಸ್ತನ ತೋರಿಸಿ ಎಂದೇ ನಾನು ಹೇಳಿದ್ದು. ಒಂದು ವೇಳೆ ಅವರು ಯೋಜನೆ ಅನುಷ್ಠಾನ ಮಾಡಿದರೆ ಪಾದಪೂಜೆ ಮಾಡಿ ಕನಕಪುರಕ್ಕೆ ಸ್ವಾಗತ ಮಾಡುತ್ತೇನೆ ಎಂದರು. ನೀರಿಗಾಗಿ, ರಾಜ್ಯದ ರೈತರಿಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ, ರಾಜಕಾರಣಕ್ಕಾಗಿ ಅಲ್ಲ. ನಮ್ಮ ಗಂಡಸ್ತನ ಕೇಳುವವರು ದೆಹಲಿಯಲ್ಲಿ ತೋರಿಸಲಿ, ಪ್ರಧಾನಿ ಬಳಿ ಹೋಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡಲಿ, ಅನುಮೋದನೆ ಮಾಡಿಸಲಿ. ಯೋಜನೆ ಜಾರಿಗೆ ಪ್ರಧಾನಿಯೇ ಬಂದರೆ ಅವರಿಗೂ ಭವ್ಯ ಸ್ವಾಗತ ಕೋರುತ್ತೇನೆ ಎಂದು ಡಿಕೆಸು ಹೇಳಿದರು.

    ಒಂದು ವರ್ಷದ ಮಗುವಿಗೆ ವಿಷ ಉಣಿಸಿ ಅಪ್ಪ-ಅಮ್ಮ ಆತ್ಮಹತ್ಯೆ; ‘ಮೂವರನ್ನೂ ಒಟ್ಟಿಗೇ ಮಣ್ಣು ಮಾಡಿ, ಖುಷಿಯಿಂದ ಕಳಿಸಿಕೊಡಿ..’

    ಶಾಲಾ-ಕಾಲೇಜುಗಳಿಗೆ ರಜೆ ವಿಚಾರ; ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಸಿಎಂ ಮಹತ್ವದ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts