More

    ಸಭೆಗೆ ಗೈರಾದವರಿಗೆ ನೋಟಿಸ್ ನೀಡಿ

    ಬೆಳಗಾವಿ: ಅನುಮತಿ ಪಡೆಯದೆ ಸಭೆಗೆ ಗೈರಾದ ಅಧಿಕಾರಿಗಳಿಗೆ ಕೂಡಲೆ ನೋಟಿಸ್ ನೀಡಿ ಎಂದು ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಅವರು ಸಮಿತಿ ಸದಸ್ಯ ಕಾರ್ಯದರ್ಶಿ ಪರಶುರಾಮ ದುಡಗುಂಟಿ ಅವರಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಪಂಚಾಯಿತಿ ಯೋಜನಾ, ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಸಭೆಯ ಮಾಹಿತಿಯಿದ್ದರೂ ಗೈರಾದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗದ ಅಧಿಕಾರಿಗಳು ಸಭೆಗೆ ಹಾಜರಾಗದೆ, ಪ್ರಗತಿ ಬಗ್ಗೆ ಮತ್ತು ಖರ್ಚಿನ ಕುರಿತು ಸರಿಯಾದ ಮಾಹಿತಿ ನೀಡುತ್ತಿಲ್ಲ. ಹೀಗಾದರೆ ಅಭಿವೃದ್ಧಿ ಆಗುವುದಿಲ್ಲ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಶಾ ಐಹೊಳೆ ಸೂಚಿಸಿದರು.

    ಪುಸ್ತಕ ಪ್ರತಿ ತಲುಪಿಸಿ: ಸದಸ್ಯ ಗುರಪ್ಪ ದಾಶ್ಯಾಳ ಮಾತನಾಡಿ, ಪ್ರಗತಿ ಪರಿಶೀಲನೆ ವರದಿ ಪುಸ್ತಕವನ್ನು ಸಭೆಯ ನೋಟಿಸ್‌ನಲ್ಲಿ ತಿಳಿಸಿರುವ ದಿನಾಂಕದೊಳಗೆ ನೇರವಾಗಿ ಸದಸ್ಯರಿಗೂ 1 ಪ್ರತಿ ತಲುಪಿಸಬೇಕು. ಈ ವ್ಯವಸ್ಥೆ ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಪ್ರಗತಿ ಕುಂಠಿತವಾದ ಇಲಾಖಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಪ್ರಗತಿ ಸಾಧಿಸಬೇಕು ಎಂದು ತಾಕೀತು ಮಾಡಿದರು. ತೋಟಗಾರಿಕೆ ರೈತ ಉತ್ಪಾದಕರ ಸಂಘಗಳ ತೆಲಸಂಗ ಗ್ರಾಮದ ತೋಟಗಾರಿಕೆ ರೈತ ಉತ್ಪಾದಕರ ಸಂಘ ಸ್ಥಗಿತಗೊಂಡಿದೆ. ಅದನ್ನು ಪುನರಾರಂಭ ಮಾಡಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಸದಸ್ಯ ರಮೇಶ ದೇಶಪಾಂಡೆ ಮಾತನಾಡಿ, ಸರ್ಕಾರದಿಂದ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ವಿನಿಯೋಗಿಸಬೇಕು. ಸರಿಯಾದ ಸಮಯಕ್ಕೆ ಯೋಜನೆ ಅನುಷ್ಠಾನ ಮಾಡಬೇಕು ಎಂದರು. ಸಭೆಯಲ್ಲಿ ಯೋಜನಾ ಹಣಕಾಸು ಹಾಗೂ ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಸದಸ್ಯರಾದ ಜಿತೇಂದ್ರ ಮಾದರ, ಕೃಷ್ಣಪ್ಪ ಲಮಾಣಿ, ಅನಿಲ ಮ್ಯಾಕಲಮರ್ಡಿ, ಶಿವಗಂಗಾ ಉಮೇಶ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts