More

    ಅತಿಥಿ ಉಪನ್ಯಾಸಕರ ಮೂಲ ಬೇಡಿಕೆ ಈಡೇರಿಸಿ: ಆಯನೂರು

    ಶಿವಮೊಗ್ಗ: ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಸರ್ಕಾರ ನೀಡಿರುವ ಭರವಸೆಗಳ ಬಗ್ಗೆ ಸಮಾಧಾನವಿದೆ. ಆದರೆ ಸಂಪೂರ್ಣ ತೃಪ್ತಿಯಿಲ್ಲ. ಸರ್ಕಾರ ಅತಿಥಿ ಉಪನ್ಯಾಸಕರ ಮೂಲ ಬೇಡಿಕೆಗಳನ್ನು ಈಡೇರಿಸಬೇಕು. ಸೇವಾ ಭದ್ರತೆ ಒದಗಿಸಬೇಕು. ಅಲ್ಲಿಯವರೆಗೂ ಆತಂಕ ದೂರಾಗುವುದಿಲ್ಲ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತ ರಕ್ಷಣಾ ಸಮಿತಿ ಗೌರವಾಧ್ಯಕ್ಷ ಆಯನೂರು ಮಂಜುನಾಥ ಹೇಳಿದ್ದಾರೆ.

    ಅತಿಥಿ ಉಪನ್ಯಾಸಕ ಬೇಡಿಕೆಗಳ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಗೌರವಧನ ಹೆಚ್ಚಿಸಿದ್ದಾರೆ. 10 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ 5 ಲಕ್ಷ ರೂ. ಇಡುಗಂಟು ನೀಡುವುದಾಗಿ ಹೇಳಿದ್ದಾರೆ. ಆದರೆ ಇಷ್ಟಕ್ಕೇ ಎಲ್ಲ ಬೇಡಿಕೆ ಈಡೇರುವುದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಶೈಕ್ಷಣಿಕ ವರ್ಷ ಪೂರೈಸಿದ ಬಳಿಕ ಮರು ವರ್ಷ ಅದೇ ಅತಿಥಿ ಉಪನ್ಯಾಸಕರು ಅವಕಾಶ ಪಡೆಯುತ್ತಾರೆ ಎಂದು ಹೇಳುವು ಸ್ಥಿತಿ ಈಗಿಲ್ಲ. ರಾಷ್ಟ್ರೀಯ ಆರೋಗ್ಯ ಮಿಷನ್‌ನ ಸಿಬ್ಬಂದಿಗೆ ಸೇವಾ ಭದ್ರತೆಯಿದೆ. ಆದರೆ ಅತಿಥಿ ಉಪನ್ಯಾಸಕರ ವಿಷಯದಲ್ಲಿ ಅದು ಇಲ್ಲದಂತಾಗಿದೆ ಎಂದು ವಿವರಿಸಿದರು.
    ಅತಿಥಿ ಉಪನ್ಯಾಸಕರಿಗೆ ವರ್ಷದಲ್ಲಿ ಹಾಲಿ ನೀಡುತ್ತಿರುವ 10 ತಿಂಗಳ ಗೌರವಧನದ ಬದಲಾಗಿ 12 ತಿಂಗಳ ವೇತನ ನೀಡಬೇಕು. ಉಪನ್ಯಾಸಕಿಯರಿಗೆ ವೇತನ ಸಹಿತ ಹೆರಿಗೆ ರಜೆಯನ್ನು ಕಡ್ಡಾಯವಾಗಿ ನೀಡಬೇಕು. ಖಾಸಗಿ ನೌಕರರಿಗೆ ಸಿಗುವಂತೆ ಉಪನ್ಯಾಸಕರಿಗೂ ಗ್ರಾಚ್ಯುಟಿ ನೀಡಬೇಕು. ವಯೋಸಹಜ ನಿವೃತ್ತಿವರೆಗೂ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ತೆಗೆದು ಹಾಕುವುದಿಲ್ಲ ಎಂದು ಸರ್ಕಾರ ಭರವಸೆ ನೀಡಬೇಕೆಂದರು.
    ಮುಷ್ಕರ ನಿರತ ಅತಿಥಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಕೆಲಸದಿಂದ ತೆಗೆಯುವುದಾಗಿ ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ಇಂತಹ ಕಠಿಣ ನಿಲುವು ತಳೆಯದೇ ಪ್ರತಿಭಟನಾನಿರತರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಬೇಕು. ಉಪನ್ಯಾಸಕರೂ ಹಠ ಬಿಟ್ಟು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿದರು.
    ಸಮಿತಿಯ ರಾಜ್ಯಾಧ್ಯಕ್ಷ ಅರುಣ್ ಮಾತನಾಡಿ, ಸರ್ಕಾರದ ಘೋಷಣೆಯಿಂದ ನಮಗೆ ಸಂತೃಪ್ತಿಯಾಗಿಲ್ಲ. ಪ್ರತಿ ವರ್ಷ ಎರಡು ತಿಂಗಳು ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ. ಹೀಗಿರುವಾಗ ನಿರಂತರವಾಗಿ 10 ವರ್ಷ ಕೆಲಸ ಮಾಡುವ ಅವಕಾಶವೇ ಸಿಗುವುದಿಲ್ಲ. ನಮ್ಮನ್ನು ಅತಿಥಿ ಉಪನ್ಯಾಸಕರು ಎಂದು ಕರೆಯುವ ಬದಲು ಉಪನ್ಯಾಸಕರು ಎಂದಷ್ಟೇ ಕರೆಯಬೇಕೆಂದು ಆಗ್ರಹಿಸಿದರು.
    ಅತಿಥಿ ಉಪನ್ಯಾಸಕರ ಸಂಘದ ಉಪಾಧ್ಯಕ್ಷೆ ಸುರೈಯ ಬೇಗಂ, ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಾಲಕೃಷ್ಣ ಹೆಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts