More

    ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್‌ಗೆ ಮುನ್ನ ಪೂಜಾರ, ರೋಹಿತ್ ಫಿಟ್ನೆಸ್ ಗೊಂದಲ

    ಮ್ಯಾಂಚೆಸ್ಟರ್: ಓವಲ್ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿರುವ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮ ಮತ್ತು ಚೇತೇಶ್ವರ ಪೂಜಾರ ಶುಕ್ರವಾರದಿಂದ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗುವ ಬಗ್ಗೆ ಇನ್ನೂ ನಿಖರ ಮಾಹಿತಿ ಲಭಿಸಿಲ್ಲ. ಆದರೆ ವೇಗಿ ಮೊಹಮದ್ ಶಮಿ ಅಂತಿಮ ಟೆಸ್ಟ್‌ನಲ್ಲಿ ಕಣಕ್ಕಿಳಿಯಲು ಫಿಟ್ ಆಗಿದ್ದಾರೆ.

    ಟೀಮ್ ಇಂಡಿಯಾದ ವೈದ್ಯಕೀಯ ತಂಡ ಇನ್ನೂ ರೋಹಿತ್ ಅವರ ಮೊಣಕಾಲು ಮತ್ತು ಪೂಜಾರ ಹಿಮ್ಮಡಿ ಗಾಯದ ಪರಿಶೀಲನೆ ನಡೆಸುತ್ತಿದ್ದು, ಪಂದ್ಯಕ್ಕೆ ಮುನ್ನ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವರೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರೋಹಿತ್ ಫಿಟ್ ಆಗದಿದ್ದರೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅಥವಾ ಪೃಥ್ವಿ ಷಾ ಆರಂಭಿಕರಾಗಿ ಆಡಲಿದ್ದಾರೆ. ಪೂಜಾರ ಅಲಭ್ಯರಾದರೆ ಹನುಮ ವಿಹಾರಿ ಅಥವಾ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಬಹುದು.

    ಅನುಭವಿ ವೇಗಿ ಇಶಾಂತ್ ಶರ್ಮ ಜತೆಗೆ 4ನೇ ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದ ಶಮಿ, ಬುಧವಾರ ಮತ್ತೆ ಭಾರತ ತಂಡದ ನೆಟ್ಸ್‌ನಲ್ಲಿ ಅಭ್ಯಾಸಕ್ಕಿಳಿದಿದ್ದಾರೆ. ಇದರಿಂದ ಅವರು ಅಂತಿಮ ಟೆಸ್ಟ್‌ನಲ್ಲಿ ಆಡಲು ಲಭ್ಯರಾಗಿದ್ದಾರೆ. ಸರಣಿಯಲ್ಲಿ 18 ವಿಕೆಟ್ ಕಬಳಿಸಿ ಮಿಂಚಿರುವ ಜಸ್‌ಪ್ರೀತ್ ಬುಮ್ರಾ ಅಂತಿಮ ಟೆಸ್ಟ್‌ನಿಂದ ವಿಶ್ರಾಂತಿ ಪಡೆದರೆ ಅಥವಾ ಮೊಹಮದ್ ಸಿರಾಜ್ ಹೊರಗುಳಿದರೆ ಶಮಿ ಮರಳಿ ಕಣಕ್ಕಿಳಿಯಲಿದ್ದಾರೆ.

    9ನೇ ಸ್ಥಾನಕ್ಕೇರಿದ ಬುಮ್ರಾ
    ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ 1 ಸ್ಥಾನ ಬಡ್ತಿ ಪಡೆದಿದ್ದು, 10ರಿಂದ 9ನೇ ಸ್ಥಾನಕ್ಕೇರಿದ್ದಾರೆ. ಓವಲ್ ಟೆಸ್ಟ್‌ನಲ್ಲಿ ತೋರಿ ಉತ್ತಮ ಬೌಲಿಂಗ್ ನಿರ್ವಹಣೆಯಿಂದ ಅವರು ಈ ಬಡ್ತಿ ಪಡೆದಿದ್ದಾರೆ. ಆಲ್ರೌಂಡ್ ನಿರ್ವಹಣೆ ತೋರಿದ್ದ ಶಾರ್ದೂಲ್ ಠಾಕೂರ್ ಬ್ಯಾಟಿಂಗ್-ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಕ್ರಮವಾಗಿ 59 ಮತ್ತು 49ನೇ ಸ್ಥಾನಕ್ಕೇರಿದ್ದಾರೆ. ಬ್ಯಾಟಿಂಗ್ ರ‌್ಯಾಂಕಿಂಗ್‌ನ ಅಗ್ರ 10ರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts