ಬೆಂಗಳೂರು/ಹೈದಾರಾಬಾದ್: ಹೈದಾರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ವೈರಸ್ ಸೋಂಕು ಪೀಡಿತ ಟೆಕ್ಕಿ ಜತೆಗೆ ಪ್ರಯಾಣಿಸಿದವರ ಆರೋಗ್ಯದ ವೈದ್ಯಕೀಯ ತಂಡ ನಿಗಾ ಇರಿಸಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಪತ್ತೆಯಾದ ಮೊದಲ ಕೊರೊನಾ ವೈರಸ್ (COVID-19) ಸೋಂಕು ಪ್ರಕರಣ ಇದಾಗಿದ್ದು, ಬೆಂಗಳೂರಿನಿಂದ ಹೈದಾರಾಬಾದಿಗೆ ಪ್ರಯಾಣಿಸಿದ ಟೆಕ್ಕಿಯಲ್ಲಿ ಪತ್ತೆಯಾಗಿತ್ತು. ಆತ ಇತ್ತೀಚೆಗಷ್ಟೇ ದುಬೈನಿಂದ ಬೆಂಗಳೂರಿಗೆ ಬಂದಿದ್ದ.
ಈ ಬಗ್ಗೆ ಟ್ವೀಟ್ ಮಾಡಿರುವ ಶ್ರೀರಾಮುಲು, ಕೊರೊನಾ ವೈರಸ್ ಸೋಂಕು ಪೀಡಿತ ಟೆಕ್ಕಿ ಬೆಂಗಳೂರಿನಿಂದ ಹೈದಾರಾಬಾದ್ಗೆ ಪ್ರಯಾಣಿಸಿರುವ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಹೀಗಾಗಿ, ಅವರನ್ನು ಗುರುತಿಸಿ, ಅವರ ಆರೋಗ್ಯದ ಬಗ್ಗೆ ನಿಗಾವಹಿಸುವ ಕೆಲಸ ಆರೋಗ್ಯ ಇಲಾಖೆ ಮಾಡಿದೆ. ಆತನ ಜತೆಗೆ ಪ್ರಯಾಣಿಸಿದ ಯಾರಲ್ಲೂ ಅಂಥ ಲಕ್ಷಣಗಳು ಕಂಡುಬಂದಿಲ್ಲ. ಆದಾಗ್ಯೂ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು.
Our government has strengthened all surveillance and control measures against the spreading of #coronavirus in Karnataka. Till date, 468 travellers from #COVID2019 affected countries have been identified. 284 are under home isolation & 01 admitted in selected isolation hospital.
— B Sriramulu (@sriramulubjp) March 2, 2020
ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಬೆಳಗ್ಗೆ ನನ್ನ ಅಧಿಕೃತ ನಿವಾಸದಲ್ಲಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ಈಗಾಗಲೇ ತಿಳಿಸಿದಂತೆ ನಮ್ಮ ಸರ್ಕಾರವು ಸೋಂಕು ಹರಡದಂತೆ ಎಲ್ಲಾ ರೀತಿಯ ಸಮರ್ಪಕ ಕ್ರಮಗಳನ್ನು ಕೈಗೊಂಡಿದೆ. (2/2)
— B Sriramulu (@sriramulubjp) March 2, 2020
24 ವರ್ಷದ ಟೆಕ್ಕಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಹಾಂಕಾಂಗ್ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಂದ ದುಬೈಗೆ ಕಳೆದ ತಿಂಗಳು ಹೋಗಿದ್ದು ಅಲ್ಲಿಂದ ದೇಶಕ್ಕೆ ವಾಪಸಾಗಿದ್ದಾನೆ. ಬೆಂಗಳೂರಿಗೆ ಈತ ಫೆ.19/20ಕ್ಕೆ ಆಗಮಿಸಿದ್ದು ಬಳಿಕ ಬಸ್ನಲ್ಲಿ ಹೈದಾರಾಬಾದ್ಗೆ ಪ್ರಯಾಣಿಸಿದ್ದ. ಹೀಗಾಗಿ ಅಲ್ಲೇ ಎಲ್ಲೋ ಈ ಸೋಂಕು ಆತನಿಗೆ ತಗುಲಿರಬೇಕು. ಆತನನ್ನು ಆರಂಭದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಸಂಜೆ ಸರ್ಕಾರಿ ಸ್ವಾಮ್ಯದ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ಇ.ರಾಜೇಂದರ್ ತಿಳಿಸಿದ್ದಾರೆ.