ಮುಂಬೈ: ಕೊರೊನಾ ವೈರಸ್ ಸೋಂಕಿನ ಕುರಿತಾದ ಆತಂಕ ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಆವರಿಸಿದ್ದು, ಒಟ್ಟಾರೆ ಅರ್ಥ ವ್ಯವಸ್ಥೆ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ ಒಂದೆರಡು ವಾರದ ಅವಧಿಯಲ್ಲಿ ಷೇರುಪೇಟೆಯಲ್ಲಿ ಕರಡಿ ಕುಣಿತವೇ ಹೆಚ್ಚಾಗಿದ್ದು, ಹೂಡಿಕೆದಾರರು ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ 2,467 ಅಂಶ ಕುಸಿದಿತ್ತು. ನಂತರದ ವಹಿವಾಟಿನಲ್ಲಿ ಏರಿಳಿತ ದಾಖಲಿಸುತ್ತ ಕೊನೆಗೆ ದಿನದ ಅಂತ್ಯಕ್ಕೆ 1,941.67 ಅಂಶ (5.17%) ಕುಸಿತದೊಂದಿಗೆ 35,634.95 ಅಂಶದಲ್ಲಿ ವಹಿವಾಟು ಕೊನೆಗೊಳಿಸಿದೆ. ಇದೇ ರೀತಿ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಸೂಚ್ಯಂಕ ನಿಫ್ಟಿ ಕೂಡ 538 ಅಂಶ (4.90%) ಕುಸಿದು 10,451.45ರಲ್ಲಿ ವಹಿವಾಟು ಮುಗಿಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಒಎನ್ಜಿಸಿ ಷೇರುಗಳು ಗರಿಷ್ಠ ಶೇಕಡ 16 ಕುಸಿತ ಕಂಡರೆ, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಟಿಸಿಎಸ್, ಎಸ್ಬಿಐ, ಐಸಿಐಸಿಐ ಬ್ಯಾಂಕ್, ಬಜಾಜ್ ಆಟೋ ಷೇರುಗಳು ನಂತರದ ಸ್ಥಾನದಲ್ಲಿದ್ದು ನಷ್ಟ ಅನುಭವಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇಕಡ 12 ನಷ್ಟ ದಾಖಲಿಸಿವೆ. ಯೆಸ್ ಬ್ಯಾಂಕ್ನಲ್ಲಿ 2,450 ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕೆ ಎಸ್ಬಿಐ ಮುಂದಾದ ಕಾರಣ ಶೇಕಡ 6 ಕುಸಿತ ದಾಖಲಿಸಿದರೆ, ಯೆಸ್ ಬ್ಯಾಂಕ್ ಷೇರುಗಳು ಶೇಕಡ 31 ಲಾಭ ಗಳಿಸಿವೆ. (ಏಜೆನ್ಸೀಸ್)