More

    ಊಟವನ್ನೇ ಔಷಧವಾಗಿ ಪರಿವರ್ತಿಸುವ ಯೋಜನೆ ರೂಪಿಸಿ

    ಶಿರಸಿ: ಆಯುಷ್ ಇಲಾಖೆಯು ಅಂಗನವಾಡಿಗಳಲ್ಲಿ ಊಟವನ್ನೇ ಔಷಧವಾಗಿ ಪರಿವರ್ತಿಸುವ ಯೋಜನೆ ರೂಪಿಸಿ ಅನುಷ್ಠಾನ ಮಾಡಿದರೆ ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ನಿವಾರಿಸಲು ಸಾಧ್ಯ ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಹೇಳಿದರು.

    ನಗರದ ಟಿಎಂಎಸ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆಯುಷ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನೆಲ್ಲೆಡೆ ಅಪೌಷ್ಟಿಕತೆ ಹೆಚ್ಚುತ್ತಿದ್ದು, ಮಕ್ಕಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಈ ವಿಚಾರದಲ್ಲಿ ಆರೋಗ್ಯ ಇಲಾಖೆ, ಆಯುಷ್ ಇಲಾಖೆ ಜವಾಬ್ದಾರಿ ಹೆಚ್ಚಿದೆ. ಅಂಗನವಾಡಿಗಳಲ್ಲಿ ಊಟವೇ ಆಹಾರವಾಗಿ ಪರಿವರ್ತನೆಯಾಗಬೇಕು. ಈ ಕುರಿತ ಪ್ರಯೋಗ ಅಂಗನವಾಡಿಗಳಲ್ಲಿ ಆರಂಭವಾಗಬೇಕು. ಆಯುಷ್ ಹಾಗೂ ಅಂಗನವಾಡಿಗಳು ಸಮನ್ವಯತೆ ಸಾಧಿಸಿ ಅನುಷ್ಠಾನ ಮಾಡಬೇಕು ಎಂದರು.

    ಮಂಗನ ಕಾಯಿಲೆಯಂಥ ಗಂಭೀರ ಕಾಯಿಲೆ ತಡೆಯಲು ಆಯುರ್ವೆದ ವ್ಯವಸ್ಥೆ ಕೂಡ ಸಾಕಷ್ಟು ಪ್ರಯೋಜನ ನೀಡಿದೆ. ಈ ಬಗ್ಗೆ ರಾಜ್ಯವ್ಯಾಪಿ ಪ್ರಚಾರ ಕಾರ್ಯ ಆಗಬೇಕು. ಪ್ರತಿ ರೋಗಕ್ಕೂ ಆಯುಷ್ ವೈದ್ಯ ಪದ್ಧತಿಯಲ್ಲಿ ಔಷಧ ಕಂಡು ಹಿಡಿಯಬೇಕು ಎಂದ ಅವರು, ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿದೆ. ಇದು ರೋಗಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಗಾಗಿ ಆಯುಷ್ ಇಲಾಖೆ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

    ಉತ್ತರ ಕನ್ನಡ ಜಿಲ್ಲಾ ಆಯುಷ್ ಅಧಿಕಾರಿ ಲಲಿತಾ ಯು.ಎಚ್., ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜ ದೊಡ್ಮನಿ, ಜಿ.ಎನ್. ಹೆಗಡೆ ಮುರೇಗಾರ, ಪ್ರಭಾವತಿ ಗೌಡ, ತಾಲೂಕು ಪಂಚಾಯಿತಿ ಸದಸ್ಯೆ ರತ್ನಾ ಶೆಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ಅರವಿಂದ ನೇತ್ರೇಕರ, ನಗರಸಭೆ ಸದಸ್ಯೆ ವೀಣಾ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ, ನಿಸರ್ಗ ಆಸ್ಪತ್ರೆ ವೈದ್ಯ ಡಾ.ಜಿತೇಶ, ಆಯುಷ್ ಇಲಾಖೆ ಬೆಳಗಾಂವ್ ವಿಭಾಗದ ನಿವೃತ್ತ ಉಪನಿರ್ದೇಶಕ ಈಶ್ವರ ಶಾಸ್ತ್ರೀ, ಸಿದ್ದಾಪುರ ಧನ್ವಂತರಿ ಆಯುರ್ವೆದ ಕಾಲೇಜು ಪ್ರಾಚಾರ್ಯು ರೂಪಾ ಭಟ್ಟ ಇದ್ದರು. ಶಿರಸಿ ಆಯುರ್ವೆದ ಆಸ್ಪತ್ರೆ ವೈದ್ಯಾಧಿಕಾರಿ ಜಗದೀಶ ಯಾಜಿ ಸ್ವಾಗತಿಸಿದರು. ವಿದ್ಯಾ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ಯೋಗೇಶ ಮಡಗಾಂವಕರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts