More

    ಅವಧಿ ಮುಗಿದರೂ ಮುಂದುವರಿಕೆ

    ಪಿ.ಬಿ.ಹರೀಶ್ ರೈ, ಮಂಗಳೂರು
    ಟೆಂಡರ್ ಅವಧಿ ಮುಕ್ತಾಯಗೊಂಡು ಎರಡು ವರ್ಷಗಳೇ ಕಳೆದಿವೆ. ಆದರೂ, ನಿಯಮ ಪ್ರಕಾರ ಟೆಂಡರ್ ಕರೆಯದೆ ಹಿಂದಿನ ಗುತ್ತಿಗೆ ಸಂಸ್ಥೆಯನ್ನೇ ಮುಂದುವರಿಸಲಾಗಿದೆ. ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿಲ್ಲ. ಪೂರ್ವಭಾವಿ ಮಂಜೂರಾತಿಯೂ ಸಿಕ್ಕಿದೆ. ಇದು ಮಂಗಳೂರು ಮಹಾನಗರ ಪಾಲಿಕೆ ಕಾರ್ಯ ವೈಖರಿ!

    ಮಂಗಳೂರು ಮಹಾನಗರ ಪಾಲಿಕೆಗೆ ಹೊರಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ಒದಗಿಸುವ ಟೆಂಡರ್ ಅವಧಿ 2019ರ ಜನವರಿಗೆ ಮುಕ್ತಾಯಗೊಂಡಿದೆ. ಆ ಬಳಿಕ ಪಾಲಿಕೆ ಆಡಳಿತ ಟೆಂಡರ್ ಕರೆದಿಲ್ಲ. ಕೋವಿಡ್ ಸೋಂಕು ವ್ಯಾಪಕವಾದ ಕಾರಣ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ ಎನ್ನುವ ಕುಂಟು ನೆಪ ಪಾಲಿಕೆಯ ಕಡತದಲ್ಲಿದೆ.

    ಟೆಂಡರ್ ಅವಧಿ ಮುಕ್ತಾಯವಾಗುವ ಮೊದಲೇ ಹೊಸ ಟೆಂಡರ್ ಕರೆಯುವುದು ನಿಯಮ. ಆದರೆ ಮನಪಾ ಅಧಿಕಾರಿಗಳು ಈ ನಿಯಮ ಪಾಲಿಸದೆ ಹಿಂದಿನ ಗುತ್ತಿಗೆ ಸಂಸ್ಥೆಯೇ ಮುಂದುವರಿಯಲು ಸಹಕರಿಸುತ್ತಿದ್ದಾರೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರೂ ಮೌನ ವಹಿಸಿದ್ದಾರೆ. ಹಾಗಾಗಿ ಕೋಟ್ಯಂತರ ರೂ. ಮೊತ್ತದ ಈ ಟೆಂಡರ್‌ನಲ್ಲಿ ಗೋಲ್‌ಮಾಲ್ ನಡೆಯುತ್ತಿದೆ ಎನ್ನುವ ಶಂಕೆ ಸಾರ್ವಜನಿಕ ವಲಯದಲ್ಲಿದೆ.

    ಟೆಂಡರ್ ವಿಸ್ತರಣೆ: ಮನಪಾದ ಕೇಂದ್ರ ಕಚೇರಿ, ಉಪ ಕಚೇರಿ, ನೀರು ಶುದ್ಧೀಕರಣ ಘಟಕ, ಉದ್ಯಾನವನ, ಸ್ಮಶಾನ ಮತ್ತು ಮಾರುಕಟ್ಟೆಗಳಿಗೆ ಭದ್ರತಾ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ಒದಗಿಸುವ ಸೇವೆಯ ಒಂದು ಟೆಂಡರ್ ಅವಧಿ 2019ರ ಜನವರಿಯಲ್ಲಿ ಪೂರ್ಣಗೊಂಡಿದೆ. ಅದೇ ಗುತ್ತಿಗೆ ಸಂಸ್ಥೆಯ 41 ಭದ್ರತಾ ಸಿಬ್ಬಂದಿಗೆ 1.22 ಕೋಟಿ ರೂ.ವೇತನ ಪಾವತಿಗೆ ಈಗ ಪೂರ್ವಭಾವಿ ಮಂಜೂರಾತಿ ನೀಡಲಾಗಿದೆ. ಇನ್ನೊಂದು ಟೆಂಡರ್‌ನಲ್ಲಿ 41 ಭದ್ರತಾ ಸಿಬ್ಬಂದಿಗೆ 1.04 ಕೋಟಿ ರೂ.ವೇತನ ಪಾವತಿಗೆ ಪೂರ್ವಭಾವಿ ಮಂಜೂರಾತಿ ನೀಡಲಾಗಿದೆ. ಇದರೊಂದಿಗೆ ಟೆಂಡರ್ ಮುಂದುವರಿಸಲು 87.54 ಲಕ್ಷ ರೂ. ಹಾಗೂ 1.33 ಕೋಟಿ ರೂ. ಮೊತ್ತದ ಎರಡು ಬಿಲ್‌ಗಳಿಗೂ ಪೂರ್ವಭಾವಿ ಮಂಜೂರಾತಿ ದೊರೆತಿದೆ.

    ಸಕಾಲದಲ್ಲಿ ಟೆಂಡರ್ ಕರೆಯುವುದು ಅಧಿಕಾರಿಗಳ ಕರ್ತವ್ಯ. ಆದರೆ ಹೊರಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸುವ ಟೆಂಡರ್ ಅವಧಿ ಪೂರ್ಣಗೊಂಡಿದ್ದರೂ, ಟೆಂಡರ್ ಕರೆಯದೆ ಲೋಪ ಎಸಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪಾಲಿಕೆ ಆಯುಕ್ತರು ಅಧೀಕ್ಷಕ ಅಭಿಯಂತರರಿಗೆ ಸೂಚಿಸಿದ್ದಾರೆ.
    ಪ್ರೇಮಾನಂದ ಶೆಟ್ಟಿ ಮೇಯರ್, ಮನಪಾ

    ಎರಡು ವರ್ಷದಿಂದ ಟೆಂಡರ್ ಕರೆಯದಿರುವ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು.
    ಅಕ್ಷಿ ಶ್ರೀಧರ್ ಆಯುಕ್ತರು, ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts