More

    ಅನ್ನದಾನಿಗಳನ್ನು ಭಿಕ್ಷಾಟನೆ ತಳ್ಳುತ್ತಿರುವುದು ದುರಂತ

    ಮಾಯಕೊಂಡ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ಬುಧವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ಕಂದಾಯ ಇಲಾಖೆ ಎದುರು ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

    ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ಕೃಷಿ ಉತ್ಪನ್ನಗಳ ದರ ಕುಸಿತದಿಂದ ಕಂಗಾಲಾದ ದೇಶಕ್ಕೆ ಅನ್ನ ಹಾಕುವ ರೈತರನ್ನು ಭಿಕ್ಷಾಟನೆ ಹಂತಕ್ಕೆ ತಳ್ಳುತ್ತಿರುವ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಕೃಷಿಕರ ಅಭಿವೃದ್ಧಿ ಆಗದ ಹೊರತು ದೇಶದ ಪ್ರಗತಿ ಅಸಾಧ್ಯವೆಂಬುದನ್ನು ಮನಗಾಣಬೇಕು ಎಂದರು.

    ದಾವಣಗೆರೆ ಜಿಲ್ಲೆಯಲ್ಲಿ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಅಧಿಕ ಮಳೆಯಿಂದ ಇಳುವರಿಯೂ ಉತ್ತಮವಾಗಿದೆ ಆದರೆ ದರ ಮಾತ್ರ ಪಾತಾಳಕ್ಕೆ ಜಾರಿದೆ. ರೈತರ ಶೋಷಣೆ ತಪ್ಪಿಸಲಿಕ್ಕಾಗಿ ಶೀಘ್ರವೇ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು. ಇಲ್ಲವಾದರೆ ಅನಿರ್ದಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರೈತ ಮುಖಂಡರಾದ ಅಣಬೇರು ಕುಮಾರಸ್ವಾಮಿ, ಪರಶುರಾಮ ರೆಡ್ಡಿ ಮಾತನಾಡಿ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದರಿಂದ ರೈತರಿಗೆ ಅನುಕೂಲ ಆಗುತ್ತದೆ. ಇದಿಲ್ಲದಿದ್ದರೆ ದಲ್ಲಾಳಿಗಳಿಗೆ ಲಾಭ ಖಚಿತ ಎಂದ ಅವರು, ಈ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

    ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪಾಮೇನಹಳ್ಳಿ ಲಿಂಗರಾಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೀರಗೊಂಡರ್ ಹನುಮಂತಪ್ಪ, ರೈತ ಮುಖಂಡರಾದ ಆವರಗೆರೆ ಬಸವರಾಜಪ್ಪ, ಮಾಯಕೊಂಡ ನಿಂಗಪ್ಪ, ಪ್ರತಾಪ್, ರಾಂಪುರ ಬಸವರಾಜ್, ಜಯಾನಾಯ್ಕ, ಭರತ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts