More

    ವಿಜಯವಾಣಿ ಸಿನಿಮಾ ವಿಮರ್ಶೆ: ಕೌತುಕದ ಕೋಟೆ ಈ ಮಾಯಾಬಜಾರು

    ಬೆಂಗಳೂರು: ಸಿನಿಮಾದ ಕಥೆ ಆಯ್ಕೆ ವಿಚಾರದಲ್ಲಿ ನಟ, ನಿರ್ಮಾಪಕ ಪುನೀತ್ ರಾಜ್​ಕುಮಾರ್ ಮತ್ತೊಮ್ಮೆ ಗೆದ್ದಿದ್ದಾರೆ. ಈ ಹಿಂದಿನ ‘ಕವಲುದಾರಿ’ಯಲ್ಲಿ ಕಂಟೆಂಟ್​ಗೆ ಒತ್ತು ನೀಡಿದ್ದ ಪುನೀತ್, ‘ಮಾಯಾಬಜಾರ್’ನಲ್ಲೂ ಅದನ್ನೇ ಪ್ರಧಾನವಾಗಿಸಿಕೊಂಡಿದ್ದಾರೆ. ಸಣ್ಣ ಬಜಾರ್​ನಲ್ಲಿ ಅವರು ಕುತೂಹಲದ ಕೋಟೆಯನ್ನೇ ನಿರ್ವಿುಸಿದ್ದಾರೆ. ಅದನ್ನು ಕಟ್ಟಿಸಿದ್ದು ಪುನೀತ್ ಅವರಾದರೆ, ಆ ಕೋಟೆ ಕಟ್ಟಿದ್ದು ನಿರ್ದೇಶಕ ರಾಧಾಕೃಷ್ಣ ರೆಡ್ಡಿ. ಚೊಚ್ಚಲ ಸಿನಿಮಾದಲ್ಲಿಯೇ ನಿರ್ದೇಶಕ ರಾಧಾಕೃಷ್ಣ, ‘..ಬಜಾರ್’ ಒಳಗಿನ ಹಲವು ಸತ್ಯಾಸತ್ಯತೆಗಳಿಗೆ, ಸೂಕ್ಷ್ಮತೆಯ ಕನ್ನಡಿ ಹಿಡಿದಿದ್ದಾರೆ.

    ವಿಜಯವಾಣಿ ಸಿನಿಮಾ ವಿಮರ್ಶೆ: ಕೌತುಕದ ಕೋಟೆ ಈ ಮಾಯಾಬಜಾರುಒಂದಿಷ್ಟು ನಗು ಮತ್ತೊಂದಿಷ್ಟು ಭಾವನೆಗಳ ಜತೆ ಆಟವಾಡಿದ್ದಾರೆ. ಹಾಗಾಗಿ ಮೊದಮೊದಲಿಗೆ ‘ಮಾಯಾಬಜಾರ್’ ನೋಡುಗನಿಗೆ ಮಾಯೆಯಂತೆ ಕಾಣಿಸಿ ಕೊನೆಗೆ ಕೌತುಕದ ಲೋಕಕ್ಕೆ ಕರೆದೊಯ್ಯುತ್ತದೆ. ಎಸ್​ಐ ಜೋಸೆಫ್ (ಅಚ್ಯುತ್ ಕುಮಾರ್) ನಿಷ್ಠೆಗೆ ಇನ್ನೊಂದು ಹೆಸರು. ಕುಬೇರ (ರಾಜ್ ಬಿ. ಶೆಟ್ಟಿ) ಒಬ್ಬ ಖತರ್ನಾಕ್ ಕಳ್ಳ. ರಾಜಿ (ವಸಿಷ್ಠ ಸಿಂಹ) ಭಗ್ನ ಪ್ರೇಮಿ ಮತ್ತು ಹಣಕ್ಕಾಗಿ ಹಪಹಪಿಸುವ ಜೀವ. ಜಗತ್ತು ಒಂದೇ ಆದರೂ ಈ ನಾಲ್ವರ ಲೋಕ ಬೇರೆ ಬೇರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಮಸ್ಯೆ ಮತ್ತು ಶೋಕಿ. ಅವುಗಳ ನಿವಾರಣೆಗೆ ದುಡ್ಡೇ ಮೂಲ. ಹಾಗಾದರೆ ಎಲ್ಲಿಂದ ಸಿಗುತ್ತೆ ದುಡ್ಡು? ಅದಕ್ಕೆ ಇವರು ಆರಿಸಿಕೊಂಡ ಕೆಲಸ ಎಂಥದ್ದು ಎಂಬುದಕ್ಕೆ ಸಿನಿಮಾದಲ್ಲಿಯೇ ಉತ್ತರ ನೀಡಿದ್ದಾರೆ. ಈ ಮೇಲೆ ಹೇಳಿದಂತೆ ಸೂಕ್ಷ್ಮತೆಯ ಜಾಡಿನೊಳಕ್ಕೆ ಇಳಿದಿರುವ ನಿರ್ದೇಶಕರು, ಪ್ರತಿ ಪಾತ್ರಗಳ ಸೃಷ್ಟಿಗೆ ನೈಜತೆಯ ರೂಪ ಕೊಟ್ಟು ಅದಕ್ಕೆ ನೋಟ್ ಬ್ಯಾನ್ ಸ್ಪರ್ಶ ನೀಡಿದ್ದಾರೆ.

    ವಿಜಯವಾಣಿ ಸಿನಿಮಾ ವಿಮರ್ಶೆ: ಕೌತುಕದ ಕೋಟೆ ಈ ಮಾಯಾಬಜಾರುನೋಡುಗನಿಗೆ ತನ್ನ ಜೀವನದ ಕಥೆಯೇ ತೆರೆಮೇಲೆ ಸಾಗುತ್ತಿದೆಯೇನೋ ಎಂಬಂತೆ ಅನುಭವ ಆಗುತ್ತ ಹೋಗುತ್ತದೆ. ಲಾಜಿಕ್​ಗೆ ಜಾಗ ಕೊಡದೆ, ಸರಳ ಕಥೆಯನ್ನಿಟ್ಟುಕೊಂಡು ಮ್ಯಾಜಿಕ್ ಮಾಡಿದ್ದಾರೆ. ಹಾಗಾಗಿ ಎಲ್ಲಿಯೂ ಈ ಹಣದ ಹಿಂದೆ ಓಡುವ ಕಥಾನಕ ಬೋರ್ ಅನಿಸದು. ಕೌತುಕ, ಭಾವುಕತೆ, ಸಂಬಂಧ, ಹಾಸ್ಯ, ಪ್ರೀತಿ.. ಹೀಗೆ ಎಲ್ಲ ಮಸಾಲೆಗಳನ್ನು ಹದವಾಗಿ ಬೆರೆಸಿ ರುಚಿಯಾದ ಸಿನಿಮಾ ಮಾಡಿ ಬಡಿಸಿದ್ದಾರೆ. ಆ ಸ್ವಾದ ಚಿತ್ರಮಂದಿರದಿಂದ ಹೊರಬಂದ ಮೇಲೂ ಘಮಿಸುತ್ತದೆ. ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಕಣ್ಣಿಗೆ ತಂಪು, ಮಿಧುನ್ ಮುಕುಂದನ್ ಹಿನ್ನೆಲೆ ಸಂಗೀತ ಕಿವಿಗೆ ಇಂಪು. ನಟ ಅಚ್ಯುತ್ ಕುಮಾರ್ ಸಿನಿಮಾ ಮುಗಿಯುವವರೆಗೂ ಭಾವುಕವಾಗಿ ಕಾಡುತ್ತಾರೆ. ರಾಜ್ ಬಿ. ಶೆಟ್ಟಿಗೆ ಕಾಮಿಡಿ ಕಿರೀಟ ತೊಟ್ಟು ಚಿತ್ರದುದ್ದಕ್ಕೂ ನಗಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಮತ್ತೊಂದು ಮಗ್ಗುಲಲ್ಲಿ ವಸಿಷ್ಠ ಅವರದ್ದು ಎಂದಿನಂತೆ ಗತ್ತಿನ ಪಾತ್ರ. ನಟಿ ಚೈತ್ರಾ ರಾವ್ ವಸಿಷ್ಠಗೆ ಪ್ರೇಮಿಯಾಗಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ರೈ ಮೊದಲಿಗೆ ಖಳನ ರೀತಿ ಕಾಣಿಸಿ, ಬಳಿಕ ಮಾನವೀಯತೆ ಮೆರೆಯುತ್ತಾರೆ. ಪಟಾಕಿ ಪಾಂಡು ಆಗಿ ತೆರೆಮೇಲೆ ಕಾಣಿಸಿಕೊಳ್ಳುವ ಸಾಧುಕೋಕಿಲ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಸಿನಿಮಾ ಮುಗಿಯುತ್ತಿದ್ದಂತೆ ಸೂಟು, ಬೂಟು, ಹ್ಯಾಟು ತೊಟ್ಟ ಪುನೀತ್, ನೃತ್ಯದ ಮೂಲಕ ಪರದೆ ಆವರಿಸುತ್ತಾರೆ.

    ಚಿತ್ರ: ಮಾಯಾಬಜಾರ್ 2016 ನಿರ್ದೇಶನ: ರಾಧಾಕೃಷ್ಣ ರೆಡ್ಡಿ ನಿರ್ಮಾಣ: ಪಿಆರ್​ಕೆ ಪ್ರೊಡಕ್ಷನ್ಸ್ ಪಾತ್ರವರ್ಗ: ಅಚ್ಯುತ್ ಕುಮಾರ್, ರಾಜ್ ಬಿ. ಶೆಟ್ಟಿ, ವಸಿಷ್ಠ ಸಿಂಹ, ಚೈತ್ರಾ ರಾವ್, ಪ್ರಕಾಶ್ ರೈ, ಸಾಧುಕೋಕಿಲ, ಸುಧಾರಾಣಿ ಮುಂತಾದವರು.

    | ಮಂಜು ಕೊಟಗುಣಸಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts