More

  Hanuman Movie Review: ಭಕ್ತಿಯ ನೆಲದಲ್ಲಿ ಶಕ್ತಿಯ ದರ್ಶನ

  ಚಿತ್ರ: ಹನುಮಾನ್ (ತೆಲುಗು)
  ನಿರ್ದೇಶನ: ಪ್ರಶಾಂತ್ ವರ್ಮ
  ನಿರ್ಮಾಣ: ಕೆ. ನಿರಂಜನ್ ರೆಡ್ಡಿ
  ತಾರಾಗಣ: ತೇಜ ಸಜ್ಜಾ, ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್, ವಿನಯ್ ರೈ, ವೆನ್ನೆಲಾ ಕಿಶೋರ್, ಶ್ರೀನು ಮುಂತಾದವರು

  ಸ್ಟಾರ್: 3.5

  | ಪ್ರಮೋದ ಮೋಹನ ಹೆಗಡೆ

  ಪೌರಾಣಿಕ ಕಥೆಗಳನ್ನು ಸಿನಿಮಾ ಮಾಡುವಾಗ ಹೆಚ್ಚು ಜಾಗ್ರತೆ ಇರಬೇಕು. ಎಲ್ಲಿಯಾದರೂ ಚೂರು ಹಾದಿ ತಪ್ಪಿದರೂ ಅನಾಹುತವೇ ಆಗುತ್ತದೆ. ಪೌರಾಣಿಕ ಕಥೆಗಳನ್ನು ಆಧಾರವಾಗಿಟ್ಟುಕೊಂಡು ಹೊಸ ಬಗೆಯಲ್ಲಿ ಸಿನಿಮಾ ಮಾಡುವಾಗಲೂ ಅಷ್ಟೇ ಜಾಗರೂಕತೆ ಬೇಕಾಗುತ್ತದೆ. ಅಂತಹದೊಂದು ಸಾಹಸಕ್ಕೆ ‘ಹನುಮಾನ್’ ಚಿತ್ರದ ಮೂಲಕ ನಿರ್ದೇಶಕ ಪ್ರಶಾಂತ್ ವರ್ಮ ಕೈ ಹಾಕಿದ್ದಾರೆ. ಗೆದ್ದಿದ್ದಾರೆ ಎಂದರೂ ತಪ್ಪಿಲ್ಲ. ಇದು ಪೌರಾಣಿಕ ಹಿನ್ನೆಲೆಯಲ್ಲಿ ಮೂಡಿಬಂದಿರುವ ಸೈನ್ಸ್ ಫಿಕ್ಷನ್ ಸಿನಿಮಾ. ಇಲ್ಲಿ ಹನುಮಂತನ ಶಕ್ತಿ ಇದೆ, ಸ್ಫೂರ್ತಿ ಇದೆ, ಭಕ್ತಿ ಇದೆ, ನಂಬಿಕೆ ಇದೆ. ಜತೆಗೆ ಆಧುನಿಕತೆಯೂ ಇದೆ. ಹೀಗಾಗಿ ಇದೊಂದು ಭಕ್ತಿಯ ನೆಲದಲ್ಲಿ ಕಟ್ಟಿದ ಆಧುನಿಕ ಪ್ರಪಂಚ. ಇಂತಹದೊಂದು ಸಾಹಸಕ್ಕೆ ಪ್ರಶಾಂತ್ ವರ್ಮ ಅಭಿನಂದನೆಗೆ ಅರ್ಹರು.

  ಮೈಕಲ್ (ವಿನಯ್) ಎಂಬಾತ ಸೂಪರ್ ಹೀರೋಗಳಿಂದ ಸ್ಫೂರ್ತಿ ಪಡೆದು ಅವರಂತೆ ತಾನೂ ಆಗಬೇಕೆಂದು, ಜಗತ್ತಿನಲ್ಲಿ ತನ್ನಷ್ಟು ಬಲಶಾಲಿ ಯಾರೂ ಇರಬಾರದು ಎಂದು ಕೆಟ್ಟ ದಾರಿ ಹಿಡಿದವನು. ವಿಜ್ಞಾನದ ದುರ್ಬಳಕೆ ಮಾಡಿಕೊಂಡವನು. ಇನ್ನೊಂದೆಡೆ ಅಂಜನಾದ್ರಿ ಎಂಬ ಊರಿನಲ್ಲಿ ಕಳ್ಳನಾಗಿರುವ ಹನುಮಂತುಗೆ (ತೇಜ) ಒಂದು ಅಪರೂಪದ ಮಣಿ ಸಿಕ್ಕಾಗ ಆತ ಶಕ್ತಿಶಾಲಿಯಾಗುತ್ತಾನೆ. ಆ ಮಣಿ ಅವನಿಗೆ ಏಕೆ ಸಿಗುತ್ತದೆ? ಸಿಕ್ಕಮೇಲೆ ಏನೆಲ್ಲಾ ಆಗುತ್ತದೆ? ಮೈಕಲ್ ಆ ಮಣಿಯನ್ನು ಹುಡುಕುತ್ತಾ ಊರಿಗೆ ಬಂದಾಗ ಏನಾಗುತ್ತದೆ? ಎನ್ನುವುದೇ ಕಥೆ. ಪೌರಾಣಿಕ ಕಥೆಯನ್ನು ಆಧಾರವನ್ನಾಗಿಟ್ಟುಕೊಂಡು ಸೈನ್ಸ್ ಫಿಕ್ಷನ್ ಕಥೆಯ ಜತೆ ಬ್ಲೆಂಡ್ ಮಾಡಿರುವ ರೀತಿ ಚೆನ್ನಾಗಿದೆ. ಟ್ರೇಲರ್ ನೋಡಿದಾಗ ತೇಜ ಸಜ್ಜ ಈ ಪಾತ್ರಕ್ಕೆ ಒಪ್ಪುತ್ತಾರ ಎಂಬ ಸಂಶಯ ಮೂಡುತ್ತದೆ. ಆದರೆ, ತೇಜ ಅಭಿನಯ ಖುಷಿ ಕೊಡುತ್ತದೆ. ಅಚ್ಚುಕಟ್ಟಾಗಿ ಪಾತ್ರವನ್ನು ನಿರ್ವಹಿಸಿ ಜೀವಿಸಿದ್ದಾರೆ. ಅಮೃತಾ ಅಯ್ಯರ್ ಸಹಜ ಅಭಿನಯ. ವರಲಕ್ಷ್ಮಿ ಹಾಗೂ ವಿನಯ್ ಇಷ್ಟವಾಗುತ್ತಾರೆ. ಆದರೆ, ಅವರ ಪಾತ್ರಗಳಿಗೆ ಇನ್ನಷ್ಟು ಅವಕಾಶ ಇರಬೇಕಿತ್ತು. ವಿಎ್ಎಕ್ಸ್ ಹಾಗೂ ಕೃಷ್ಣ ಮತ್ತು ಹರಿ ಹಿನ್ನೆಲೆ ಸಂಗೀತ ರೋಮಾಂಚನಗೊಳಿಸುತ್ತವೆ.

  ಕ್ಲೈಮಾಕ್ಸ್ ಮುಂದಿನ ಸಿನಿಮಾಗೆ ಮುನ್ನುಡಿಯಾಗಿದ್ದರೂ ಗೊಂದಲದಲ್ಲಿ ಅಂತ್ಯಗೊಂಡಂತೆ ಭಾಸವಾಗುತ್ತದೆ. ಶಿವೇಂದ್ರ ಛಾಯಾಗ್ರಹಣ ಹಾಗೂ ಸಾಯಿ ಬಾಬು ಸಂಕಲನವನ್ನು ಮೆಚ್ಚಲೇಬೇಕು. ಇನ್ನೊಂದು 15-20 ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕುವ ಅವಕಾಶವಿತ್ತು. ರೋಮಾಂಚನಗೊಳಿಸುವ ಮನರಂಜನೆಯ ಚಿತ್ರ ‘ಹನುಮಾನ್’.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts