More

    ನೀನೆಂದೂ ಸಾಯದಿರು… ಆಶೀರ್ವಾದವಲ್ಲ, ಶಾಪ?

    ಪ್ರೇರಣೆಮೊನ್ನೆ ವೃದ್ಧಾಶ್ರಮದಲ್ಲಿದ್ದ ಹಿರಿಯರೊಬ್ಬರನ್ನು ನೋಡಲು ಹೋಗಿದ್ದೆ. ಅವರಿಗೆ 101 ವರುಷ. ಹತ್ತು ವರುಷಗಳಿಂದ ವೃದ್ಧಾಶ್ರಮದಲ್ಲೇ ಇದ್ದಾರೆ. ಮಕ್ಕಳು ಮೊಮ್ಮಕ್ಕಳು ಸಂಬಂಧಿಕರೆಲ್ಲ ಇದ್ದರೂ, ಇವರನ್ನು ನೋಡಲು ಯಾರೂ ಬರುತ್ತಿಲ್ಲ. 90 ಕೆ.ಜಿ ತೂಕದ 6 ಅಡಿ ಎತ್ತರದ ದಷ್ಟ ಪುಷ್ಟವಾಗಿದ್ದ ಆಜಾನುಬಾಹು ಆ ಮನುಷ್ಯ ಈಗ 30 ಕೆ.ಜಿಗೆ ಇಳಿದು ಬಿಟ್ಟಿದ್ದ.

    ಬಡಕಲು ದೇಹದ ಮಾಂಸ-ಮೂಳೆಗಳ ಸಣ್ಣ ಮುದ್ದೆಯಂತೆ ಹಾಸಿಗೆಯ ಮೂಲೆಯಲ್ಲಿ ಕೈಕಾಲುಗಳನ್ನು ಮಡಚಿಕೊಂಡು ಮಲಗಿದ್ದ. ಕೆನ್ನೆಗಳು, ಕಣ್ಣುಗಳು ಗುಳಿಬಿದ್ದು ಕಣ್ಣ ಗುಡ್ಡೆಗಳು ಹೊರಗೆ ಚಾಚಿದ್ದವು. ಹಲ್ಲುಗಳೆಲ್ಲಾ ಉದುರಿಹೋಗಿ, ಯಾರಾದರೂ ತುರುಕಿದರೆ ಮಾತ್ರ ನಾಲ್ಕಾರು ಚಮಚ ದ್ರವ ಪದಾರ್ಥವಷ್ಟೇ ಅವನದಾಗಿ ಅಷ್ಟರಿಂದಲೇ ಬದುಕಿ ಉಳಿಯುವ ಪರಿಸ್ಥಿತಿ ಅವನದಾಗಿತ್ತು. ಮಾಂಸ ಖಂಡಗಳೆಲ್ಲಾ ಕ್ಷೀಣಿಸಿ, ಬರೇ ಎಲಬುಗಳು ಎದ್ದು ಕಾಣುತ್ತಿದ್ದವು. ಎದ್ದೇಳಲು ಆಗದ ಅವನು ದಿನದ 24 ಗಂಟೆಗಳನ್ನು ಹಾಸಿಗೆಯ ಮೇಲೆಯೇ ಕಳೆಯಬೇಕಾಗಿತ್ತು. ಅತ್ತಿತ್ತ ಹೊರಳಿದರೆ ಅದುವೇ ಹೆಚ್ಚು! ಮಲಗಿದಲ್ಲೇ ಮಲ ಮೂತ್ರ ವಿಸರ್ಜನೆ. ಅದನ್ನು ಕಾಲ ಕಾಲದಲ್ಲಿ ಶುಚಿ ಮಾಡುವವರು ಬಾರದಿದ್ದರೆ ಆ ಕೆಟ್ಟ ವಾಸನೆಯೇ ಅವನ ಶಾಶ್ವತ ಸಂಗಾತಿ. ಮಾತು ನಿಂತು ಹೋಗಿ ಬಹಳ ವರುಷಗಳೇ ಆಗಿತ್ತು. ಜ್ಞಾಪಕ ಶಕ್ತಿಯೂ ಇಲ್ಲವಾಗಿತ್ತು. ಯಾರ ಗುರುತೂ ಆಗುತ್ತಿರಲಿಲ್ಲ. ಆದರೆ ಕಿಟಕಿಯ ಆಚೆಗಿರುವ ಆಗಸವನ್ನು ನೋಡುತ್ತಾ ಆಗಾಗ ಏನೇನೋ ಕೈಸನ್ನೆಯನ್ನು ಮಾಡುತ್ತಿದ್ದ; ಒಳಗೊಳಗೆ ಏನನ್ನೋ ಪಿಸುಗುಟ್ಟುತ್ತಿದ್ದ. ಬಹುಶಃ ‘ಹೇ ದೇವಾ ಇಷ್ಟೊಂದು ಆಯಸ್ಸನ್ನು ಏಕೆ ಕೊಟ್ಟೆ? ಸಾವನ್ನೆಂದು ಕರುಣಿಸುವೆ’ ಎಂಬ ಮೂಕ ವೇದನೆಯೋ ಏನೋ! ಒಟ್ಟಿನಲ್ಲಿ ಇವನ ಸ್ಥಿತಿ ಶತ್ರುವಿಗೂ ಬರಬಾರದ ದಯನೀಯ ಸ್ಥಿತಿಯಾಗಿತ್ತು!

    ಹೌದು, ಸಾವೇ ಬರದಿರಲಿ ಅಥವಾ ನೀನೆಂದೂ ಸಾಯದಿರು ಎಂದು ಯಾರಾದರೂ ಹೇಳಿದರೆ ಅದು ಆಶೀರ್ವಾದವಲ್ಲ; ಶಾಪ! ಎಂದೇ ತಿಳಿಯಬೇಕಾಗುತ್ತದೆ. ಏಕೆಂದರೆ ಅಶಕ್ತನಾಗಿ, ಬೇರೆಯವರಿಗೆ ಹೊರೆಯಾಗಿ ಬಾಳುವುದಿದೆಯಲ್ಲ. ಅದು ಖಂಡಿತ ಶಾಪವೇ. ಹುಟ್ಟಿದವನು ತನ್ನ ಭಾಗ್ಯದಲ್ಲಿರುವಷ್ಟು ವರುಷಗಳ ಕಾಲಬಾಳಿ, ಒಂದು ದಿನ ಸಾಯಲೇಬೇಕು. ಆಕಸ್ಮಾತ್ ಸಾಯದೇ ಉಳಿದರೆ ಅಸಹನೀಯವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಕಾರಣ ವಯಸ್ಸಾದಂತೆ ಶಾರೀರಿಕವಾಗಿ, ಮಾನಸಿಕವಾಗಿ ಅಹಿತಕರ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಹಾಗಾದರೆ ಎಂತಹ ಸಾವು ಬರಬೇಕು? ಹಲವಾರು ಕೆಲಸ ಕಾರ್ಯಗಳನ್ನು ಮಾಡಿ, ಜೀವನವನ್ನು ಸಾರ್ಥಕಗೊಳಿಸುವ ಮುನ್ನವೇ ಬರುವ ಅಕಾಲ ಮರಣ ನಮ್ಮದಾಗಬಾರದು. ಅಂತೆಯೇ ವಾಸಿಯಾಗದ ಕಾಯಿಲೆಗೆ ಬಲಿಯಾಗಿ ಸಹಿಸಲಾರದ ನೋವಿಗೆ ತುತ್ತಾಗಿ ಸಾವಿನ ದಿನವನ್ನು ಎದುರು ನೋಡುತ್ತಾ ದಿನ ಕಳೆಯುವ ಅಂತ್ಯವೂ ನಮ್ಮದಾಗಬಾರದು. ಈ ಸತ್ಯವನ್ನೇ ‘ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ; ದೇಹಾಂತೇ ತವ ಸಾನಿಧ್ಯಂ ದೇಹಿಮೇ ಪರಮೇಶ್ವರ’ ಎಂಬ ಪ್ರಾರ್ಥನೆಯಲ್ಲಿ ಹೇಳಲಾಗಿದೆ. ಅರ್ಥಾತ್ ನರಳಿ ನರಳಿ ಸಾಯುವ ಮರಣವನ್ನು ನೀಡದೆ, ಸುಖ ಮರಣವನ್ನು ನೀಡು ತಂದೆ, ಅಂತೆಯೇ ಯಾರನ್ನೂ ಕಾಡಿ ಬೇಡಿ ಬದುಕುವ ಬಾಳನ್ನು ನೀಡದೆ ನಿನ್ನ ಬಳಿ ಕರೆಸಿಕೋ ತಂದೆ’ ಎಂದರ್ಥ. ಅಂತ ಸಾವು ಬರಬೇಕೆಂದರೆ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ವಯಸ್ಸಾಗುತ್ತ ಹೋದ ಹಾಗೆ ಶರೀರದಲ್ಲಾಗುವ ಬದಲಾವಣೆಗಳಿಗೆ ಅನುಗುಣವಾಗಿ ನಾವೂ ಹೊಂದಿಕೊಳ್ಳುತ್ತ ಸಾಗಬೇಕು. ಒಂದಷ್ಟು ಸಂಗತಿಗಳನ್ನು ತ್ಯಾಗ ಮಾಡುವ ಮನಸ್ಥಿತಿ ಇರಬೇಕು. ಆಹಾರದಲ್ಲಿ ಶರೀರಕ್ಕೆ ತಕ್ಕ ಬದಲಾವಣೆ ಮಾಡಿಕೊಳ್ಳಬೇಕು. ಮನಸ್ಸು ನಿರಾಳವಾಗಿರುವ ನಿಟ್ಟಿನಲ್ಲಿ ಧ್ಯಾನ, ಪ್ರಾಣಾಯಾಮಗಳಂಥವುಗಳ ಮೊರೆ ಹೋಗಬೇಕು. ಒಟ್ಟಾರೆ ಸಂಪೂರ್ಣ ಬದುಕನ್ನು ಬಾಳಿ, ಸಕಾಲದಲ್ಲಿ ಸಂತೋಷವಾಗಿ ಸಾಯುವ ಸಾವು ಅವಶ್ಯ ಬರಲಿ ಎಂಬುದೇ ನಮ್ಮ ಇಚ್ಛೆಯಾಗಬೇಕೇ ಹೊರತು, ಸಾವೇ ಬರಬಾರದೆಂದಲ್ಲ! ಸಾಯುವಾಗ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಒಂಟಿಯಾಗಿ ಬಂದ ನಾವು ಒಂಟಿಯಾಗಿಯೇ ಸಾಯುತ್ತೇವೆ. ಆದುದರಿಂದ ಸಾಯುವವರ ಸಾಲಿನಲ್ಲಿ ನಿಂತಿರುವ ನಾವಂತೂ ಸಂತೋಷವಾಗಿ ಒಂದಲ್ಲ ಒಂದು ದಿನ ಸಾಯೋಣ. ಈ ಹಿನ್ನೆಲೆಯಲ್ಲಿ ನಮಗೆ ಸುಖವಾಗಿ ಸತ್ತುಬಿಡು; ನರಳಿ ನರಳಿ ಬದುಕದಿರು ಎಂಬ ಆಶೀರ್ವಾದವಿರಲಿ. ನೀನೆಂದೂ ಸಾಯದಿರು ಎಂಬ ಆಶೀರ್ವಾದವೇ ಬೇಡ ನಮಗೆ!

    ಬಾಕ್ಸಿಂಗ್​​ ಡೇ ಟೆಸ್ಟ್​; ಮತ್ತೊಂದು ವಿಶ್ವದಾಖಲೆ ಸನಿಹ ಕಿಂಗ್ ಕೊಹ್ಲಿ

    ಮಾತ್ರೆಯಿಂದ ಬಟ್ಟೆ ಕಲೆ ಮಾಯ; ನಿನ್​ ಟ್ಯಾಲೆಂಟ್​ ಮೆಚ್ಚಲೇಬೇಕಮ್ಮ ಎಂದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts