More

    ಶಾಲೆ ನಮ್ಮದೆಂಬ ಅಭಿಮಾನ ಸದಾ ಇರಲಿ

    ರಿಪ್ಪನ್‌ಪೇಟೆ: ಸರ್ಕಾರಿ ಶಾಲೆಗಳಲ್ಲಿ ಅಕ್ಷರ ಕಲಿತು ಸುಶಿಕ್ಷಿತರಾದವರಿಗೆ ಈ ಹಿಂದೆ ಓದಿದ ಶಾಲೆ ನಮ್ಮದೆಂಬ ಸ್ವಾಭಿಮಾನ ಸದಾ ಇರಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

    ಪಟ್ಟಣದ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ನಮ್ಮ ಜೀವನವನ್ನು ರೂಪಿಸಿರುವ ಶಾಲೆಯನ್ನು ಎಂದಿಗೂ ಮರೆಯಬಾರದು. ಹಳೆಯ ವಿದ್ಯಾರ್ಥಿಗಳು ಉದಾರಿಗಳಾಗಿ ತಮ್ಮ ಕೈಲಾದ ಆರ್ಥಿಕ ಸಹಾಯವನ್ನು ಶಾಲೆಗಳಿಗೆ ನೀಡಿದರೆ ಸುಸಜ್ಜಿತವಾದ ವ್ಯವಸ್ಥೆ ಕಲ್ಪಿಸಬಹುದು. ಸಮಾಜದ ಅಭ್ಯುದಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ತನ್ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದಂತಾಗುತ್ತದೆ ಎಂದರು.
    ಮಕ್ಕಳನ್ನು ಶಾಲೆಗೆ ಕಳುಹಿಸಿದ ತಕ್ಷಣ ಪಾಲಕರು ತಮ್ಮ ಜವಾಬ್ದಾರಿ ಮುಗಿಯಿತು ಎಂದು ಕೊಳ್ಳಬಾರದು. ಆಗಾಗ ಶಾಲೆಗೆ ಆಗಮಿಸಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಅವಲೋಕಿಸಬೇಕು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಲಹೆ ಸಹಕಾರ ನೀಡಬೇಕು. ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಪಾಲಕರು ಮತ್ತು ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಲೋಪ ಆಗದಂತೆ ನೋಡಿಕೊಂಡರೆ ಉತ್ತಮ ಶಿಕ್ಷಣದ ಜತೆಗೆ ಸಮಾಜವು ಪರಿವರ್ತನೆ ಆಗಲಿದೆ ಎಂದು ಹೇಳಿದರು.
    ಆನಂದಪುರ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರಸ್ತುತ ಸಮಾಜದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಅಗತ್ಯವಿದೆ. ಶಿಕ್ಷಣ ಕ್ಷೇತ್ರ ಬಂಡವಾಳ ಶಾಹಿಗಳ ಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿದ್ದು, ನೈತಿಕ ಶಿಕ್ಷಣ ಅಧಃಪತನವಾಗುತ್ತಿದೆ. ಅಂಕ ಗಳಿಕೆಯೊಂದೇ ಮಾನದಂಡವೆಂದು ಕೊಂಡಿರುವ ಪಾಲಕರ ಮನಸ್ಥಿತಿ ಬದಲಾಗಬೇಕು. ಗುರುಗಳು ವಿದ್ಯಾರ್ಥಿಗಳಲ್ಲಿ ಮೌಲ್ಯಯುತ ಜೀವನ ನಿರ್ವಹಣೆಗೂ ಅಡಿಪಾಯ ಹಾಕಬೇಕು. ಸಮಾಜದ ಅಂಕುಡೊಂಕುಗಳ ತಿದ್ದುವ ಪರಿಹಾರ ಮಾರ್ಗವಾಗಿ ಗುರುಕುಲ ಶಿಕ್ಷಣ ಪದ್ಧತಿಯೇ ಪುನಃ ಸ್ಥಾಪಿತವಾಗಲು ಸಾರ್ವಜನಿಕರು ಆಸಕ್ತಿವಹಿಸಿಬೇಕು ಎಂದರು.
    ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಸದಸ್ಯರಾದ ಆಸೀಫ್, ದೀಪಾ, ಅಶ್ವಿನಿ, ಸುಂದರೇಶ್, ಎನ್.ಚಂದ್ರೇಶ್, ಮಹಾಲಕ್ಷ್ಮೀ, ಗಣಪತಿ, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಕುಂಬಳೆ, ಪಾಲಕರ ಸಮಿತಿಯ ಈಶ್ವರ ಮಳಕೊಪ್ಪ, ಮುಖ್ಯಶಿಕ್ಷಕ ಚಂದ್ರಪ್ಪ, ಪ್ರಮುಖರಾದ ಉಬೇದುಲ್ಲಾ ಷರೀಫ್, ಗುರುಪ್ರಕಾಶ್, ಜಗದೀಶ ಕಾಗಿನಲ್ಲಿ, ಎಚ್.ಎಂ.ವರ್ತೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts