More

    ಮಾವಿಗೆ ಕಂಟಕವಾದ ಅಕಾಲಿಕ ಮಳೆ

    ಶಶಿಧರ ಕುಲಕರ್ಣಿ ಮುಂಡಗೋಡ

    ಆರಂಭದಲ್ಲಿ ಮಾವಿನ ಹೂ ಚೆನ್ನಾಗಿ ಬಿಟ್ಟು ಒಳ್ಳೆಯ ಫಸಲು ಬರುವ ನಿರೀಕ್ಷೆ ರೈತರದ್ದಾಗಿತ್ತು. ಆದರೆ, ಹೂ ಚೆನ್ನಾಗಿ ಬಿಟ್ಟ ಸಮಯದಲ್ಲೇ ಸುರಿದ ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ತಾಲೂಕಿನಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಪಾಳಾ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಇಳುವರಿ ಕಡಿಮೆ ಆಗುವ ಆತಂಕ ಎದುರಾಗಿದೆ.

    ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಸುಮಾರು 480 ಹೆಕ್ಟೇರ್ ಪ್ರದೇಶದಲ್ಲಿ ರೈತರು ಮಾವು ಬೆಳೆದಿದ್ದು, ಇದರಲ್ಲಿ 50-60 ಹೆಕ್ಟೇರ್ ಪ್ರದೇಶದಲ್ಲಿ ಕಾಯಿ ಕಟ್ಟಿಲ್ಲ. 400 ಹೆಕ್ಟೇರ್ ಪ್ರದೇಶದಲ್ಲಿ ಇಳುವರಿ ಬರುವ ಸಾಧ್ಯತೆ ಇದೆ. ಹೂ ಬಿಡುವ ಹಂತದಲ್ಲಿದ್ದಾಗ ಅಕಾಲಿಕ ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದ ಅತಿ ಹೆಚ್ಚು ಮಾವು ಬೆಳೆಯುವ ಪಾಳಾ, ಕಲಕೊಪ್ಪ, ಕೋಡಂಬಿ ಭಾಗಗಳಲ್ಲಿ ಹೂವುಗಳು ಉದುರಿದ ಪರಿಣಾಮ ಕಾಯಿ ಕಟ್ಟದೆ ಇಳುವರಿ ಪ್ರಮಾಣದಲ್ಲಿ ಕುಸಿತವಾಗಲಿದೆ.

    ತಾಲೂಕಿನಲ್ಲಿ ಶೇ. 90ರಷ್ಟು ರೈತರು ಆಪೂಸ್ ತಳಿಯ ಮಾವು ಬೆಳೆಯುತ್ತಾರೆ. ಪಾಳಾ ಭಾಗದ ಮಣ್ಣಿನ ಗುಣ ಮತ್ತು ಹವಾಮಾನದ ಪೂರಕ ವಾತಾವರಣದಿಂದ ಇಲ್ಲಿ ಆಪೂಸ್, ರಸಪೂರಿ, ತೋತಾಪೂರಿ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇನ್ನುಳಿದಂತೆ ನೀಲಂ, ಸಿಂಧೂಲಾ, ಬಿನಶಾ, ಮಲಗೋವಾ, ಮಾಂಕುರ, ಮಲ್ಲಿಕಾ, ಕೇಸರ ತಳಿಯ ಮಾವುಗಳನ್ನು ಬೆಳೆಯುತ್ತಾರೆ.

    ಮಾವು ಇಳುವರಿಗೆ ವಾತಾವರಣ ಪೂಕವಾಗಿದೆ. ರೈತರು ಚೆನ್ನಾಗಿ ಕೃಷಿ ಮಾಡಿದ್ದಾರೆ. ಮಾವು ಹೂ ಬಿಟ್ಟಾಗ ಸುರಿದ ಅಕಾಲಿಕ ಮಳೆಯಿಂದ ಹೂ ಉದುರಿ ಕಾಯಿ ಕಟ್ಟಿಲ್ಲ. ಈಗ ಮತ್ತೆ 3-4 ದಿನಗಳಿಂದ ಮೋಡ ಕವಿದ ವಾತಾವರಣ ಇರುವುದರಿಂದ ಮಳೆ-ಗಾಳಿ ಬೀಸಿದರೆ ರೈತರಿಗೆ ಸಮಸ್ಯೆಯಾಗುತ್ತದೆ. ತಾಲೂಕಿನ ಕೆಲ ಭಾಗಗಳಲ್ಲಿ ಕಟಾವು ಆರಂಭವಾಗಿದೆ. ಪೂರ್ತಿಯಾಗಿ ಕಟಾವು ಮಾಡಲು ಇನ್ನೂ 15 ದಿನಗಳು ಬೇಕು. ಏಪ್ರಿಲ್ ತಿಂಗಳ ಕೊನೆಯಲ್ಲಿ ನಮ್ಮ ಭಾಗದಲ್ಲಿ ಹಣ್ಣುಗಳು ಮಾರಾಟಕ್ಕೆ ಬರಲು ಆರಂಭಿಸುತ್ತವೆ. ಘಟ್ಟದ ಕೆಳಗೆ(ಕರಾವಳಿ) ಬೇಗನೆ ಕಟಾವಾದ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿವೆ.

    | ಅಣ್ಣಪ್ಪ ನಾಯ್ಕ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

    ಹವಾಮಾನ ವೈಪರೀತ್ಯದಿಂದ ಈ ವರ್ಷ ನಮ್ಮ ಭಾಗದಲ್ಲಿ ಮಾವು ಇಳುವರಿ ಕಡಿಮೆಯಾಗಬಹುದು. ನಮ್ಮ ಮಂಡಿಯಲ್ಲಿ ಬೇರೆ ಕಡೆಗೆ ರಫ್ತಾಗುವ ಆಪೂಸ್ ಕೆ.ಜಿ.ಗೆ 50-200ರೂ., ಸಿಂಧೂಲಾ 30-50ರೂ., ರಸಪೂರಿ 30-40ರೂ., ಬಿನಶಾ 20-25ರೂ., ಮಲ್ಲಿಕಾ 50-80 ರೂ. ದರದಂತೆ ಖರೀದಿಸಲಾಗುತ್ತದೆ. ಮಾವು ಖರೀದಿಸಲು ಫ್ಯಾಕ್ಟರಿ ತೆರೆಯಲು ರೈತರ ಹಲವು ದಿನಗಳ ಬೇಡಿಕೆ ಇದ್ದು, ಫ್ಯಾಕ್ಟರಿ ತೆರೆದರೆ ನೇರವಾಗಿ ಫ್ಯಾಕ್ಟರಿಗೆ ಮಾವು ನೀಡಲು ರೈತರಿಗೆ ಅನುಕೂಲವಾಗುತ್ತದೆ.

    | ನಾಗನಗೌಡ ಶಿವನಗೌಡ್ರು, ಪಾಳಾ ಗ್ರಾಮದ ಮಾವು ಬೆಳೆಗಾರ ಮತ್ತು ಕ್ವಾಲಿಟಿ ಮ್ಯಾಂಗೋ ಮಂಡಿ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts