More

    ಮಟ್ಟುಗುಳ್ಳಕ್ಕೆ ಹೆಚ್ಚಿನ ಪರಿಹಾರ: ಕಾಪು ತಾಪಂ ಸಾಮಾನ್ಯ ಸಭೆಯಲ್ಲಿ ಶಾಸಕ ಲಾಲಾಜಿ ಸೂಚನೆ

    ಪಡುಬಿದ್ರಿ: ಜಿಐ ಮಾನ್ಯತೆ ಪಡೆದಿರುವ ಮಟ್ಟುಗುಳ್ಳ ಬೆಳೆಯುವ ಪ್ರದೇಶದಲ್ಲಿ ಉಪ್ಪುನೀರಿನಿಂದ ಆಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಶಾಶ್ವತ ನದಿ ತಡೆಗೋಡೆ ನಿರ್ಮಾಣಕ್ಕೆ ಕೋಟ್ಯಂತರ ರೂ. ವೆಚ್ಚವಾಗಲಿದ್ದು, ಸದ್ಯ ತಾತ್ಕಾಲಿಕ ಮಣ್ಣಿನ ತಡೆಗೋಡೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಶಾಸಕ ಲಾಲಾಜಿ ಆರ್.ಮೆಂಡನ್ ಭರವಸೆ ನೀಡಿದರು.
    ಕಾಪು ಪುರಸಭೆಯಲ್ಲಿ ಗುರುವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಮಟ್ಟು ಪ್ರದೇಶದ ಸುಮಾರು 50 ಎಕರೆ ಪ್ರದೇಶದಲ್ಲಿ ಗುಳ್ಳ ಬೆಳೆಯಲಾಗುತ್ತಿದ್ದು, ನದಿ ಉಬ್ಬರ ಇಳಿತ ಸಂದರ್ಭ ಉಪ್ಪುನೀರಿನಿಂದ ಸಮಸ್ಯೆಯಾಗುತ್ತಿದೆ. ಅದಕ್ಕೆ ತಡೆಗೋಡೆ ಕಾಮಗಾರಿ ನಡೆಸಬೇಕು ಹಾಗೂ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ನೀಡುವಂತೆ ರಾಜೇಶ್ ಅಂಬಾಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈ ಬಾರಿ ಅಕಾಲಿಕ ಮಳೆಯಿಂದ ಮಟ್ಟುಗುಳ್ಳ ಬೆಳೆ ಹಾನಿಯಾಗಿದ್ದು, ಹೆಚ್ಚಿನ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಅಂಗನವಾಡಿ ಕಟ್ಟಡ ತೆರವಿಗೆ ಅಸಮಾಧಾನ
    ಮೇಲ್ಛಾವಣಿಯಷ್ಟೇ ಶಿಥಿಲವಾಗಿದ್ದ ಬಂಟಕಲ್ಲು ಅಂಗನವಾಡಿ ಕಟ್ಟಡವನ್ನು ತಾಪಂ ಸದಸ್ಯರ ಗಮನಕ್ಕೆ ತಾರದೆ ಕೆಡವಲಾಗಿದೆ ಎಂದು ಗೀತಾ ವಾಗ್ಳೆ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯ ಗ್ರಾಪಂ ನಿರ್ಣಯದಂತೆ ಬಂಟಕಲ್ಲು ಅಂಗನವಾಡಿ ಕೇಂದ್ರ ಕೆಡವಲಾಗಿದೆ ಎಂದು ಸಿಡಿಪಿಒ ವೀಣಾ ವಿವೇಕಾನಂದ ಹೇಳಿದರು. ಕೋಟೆ ಗ್ರಾಮದ ಮಟ್ಟು ದೇವಸ್ಥಾನ ಬಳಿಯ ಅಂಗನವಾಡಿ ಕಟ್ಟಡ ಶಿಥಿಲ ಸ್ಥಿತಿಯಲ್ಲಿದ್ದು, ಸಮಸ್ಯೆ ಬಗ್ಗೆ ಹಲವು ಸಭೆಗಳಲ್ಲಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಅಂಗನವಾಡಿ ಸ್ಥಿತಿ ಪರಿಶೀಲನೆಗೆ ಜನಪ್ರತಿನಿಧಿಗಳು ಹೇಳಿದ ಬಳಿಕವಷ್ಟೇ ಅಧಿಕಾರಿಗಳು ಆಗಮಿಸುತ್ತಾರೆ ಎಂದು ರಾಜೇಶ್ ದೂರಿದರು.

    ಪಲಿಮಾರು ಗ್ರಾಮದ ಅವರಾಲು ಮಟ್ಟು ಹಾಗೂ ಹೊಯಿಗೆ ಅಂಗನವಾಡಿ ಕಟ್ಟಡ ಶೀಘ್ರ ನಿರ್ಮಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ದಿನೇಶ್ ಪಲಿಮಾರು, ಉಚ್ಚಿಲ ಭಾಸ್ಕರನಗರ ಅಂಗನವಾಡಿ ನಿರ್ಮಾಣ ಕುರಿತು ಉಪಾಧ್ಯಕ್ಷ ಯು.ಸಿ.ಶೇಖಬ್ಬ ಒತ್ತಾಯಿಸಿದರು. ಅಂಗನವಾಡಿ ನಿರ್ವಹಣೆಗೆ ಇಲಾಖೆಯಿಂದ ವಾರ್ಷಿಕ 50 ಸಾವಿರ ರೂ. ಅನುದಾನ ಬರುತ್ತಿದೆ. ಕಾಪು ತಾಲೂಕಿನಲ್ಲಿ 135 ಅಂಗನವಾಡಿಗಳಿದ್ದು, ಹೆಚ್ಚಿನವು ಬಾಡಿಗೆ ಕಟ್ಟಡದಲ್ಲಿವೆ. ನರೇಗಾದಡಿ ಹೆಜಮಾಡಿ ಹಾಗೂ ಹೊಯಿಗೆ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಿಡಿಪಿಒ ಮಾಹಿತಿ ನೀಡಿದರು. ಅಂಗನವಾಡಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸಲು ಕಂದಾಯ ಇಲಾಖೆ ಮೂಲಕ ಪ್ರಯತ್ನಿಸುವಂತೆ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ಗಾಂವ್ಕರ್ ಸೂಚಿಸಿದರು.

    ಲೋಕೋಪಯೋಗಿ ಇಲಾಖೆ ಕಾಮಗಾರಿಯಿಂದ ಕುತ್ಯಾರು ಗ್ರಾಪಂನಲ್ಲಿ ನೀರಿನ ಪೈಪ್‌ಗೆ ಹಾನಿಯಾಗಿ ನಷ್ಟವಾಗಿದೆ ಎಂದು ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ ದೂರಿದರು. ಶಿರ್ವ-ಮುದರಂಗಡಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾಮಗಾರಿಯಿಂದ ಸಮಸ್ಯೆಗಳಾಗುತ್ತಿರುವ ಬಗ್ಗೆ ಇಲಾಖೆ ಇಂಜಿನಿಯರ್ ಅವರನ್ನು ಮೈಕಲ್ ರಮೇಶ್ ಡಿಸೋಜ ತರಾಟೆಗೆ ತೆಗೆದುಕೊಂಡರು. ಬೆಳ್ಳೆಯಲ್ಲಿ ಬೀದಿನಾಯಿಗಳ ಉಪಟಳ ಬಗ್ಗೆ ಸುಜಾತಾ ಸುವರ್ಣ ಗಮನ ಸೆಳೆದರು. ಇನ್ನಂಜೆ ಗ್ರಾಪಂನಲ್ಲಿ ಎಸ್‌ಎಲ್‌ಆರ್‌ಎಂ ಘಟಕ ನಿರ್ವಹಿಸುವವರೇ ನಿಯಮ ಮೀರಿ ಚುನಾವಣೆಗೆ ಸ್ಪರ್ಧಿಸಿ ಅಕ್ರಮ ನಡೆಸಿದ್ದಾರೆ ಎಂದು ರಾಜೇಶ್ ಶೆಟ್ಟಿ ದೂರಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಕಾರ್ಯನಿರ್ವಹಣಾಧಿಕಾರಿ ಭರವಸೆ ನೀಡಿದರು.

    ತಾಪಂ ವ್ಯವಸ್ಥೆ ರದ್ದು ಬೇಡ
    ಸದಸ್ಯರೆಲ್ಲರ ಒಮ್ಮತಾಭಿಪ್ರಾಯದಂತೆ ತಾಪಂ ವ್ಯವಸ್ಥೆ ರದ್ದು ಮಾಡದಂತೆ ನಿರ್ಣಯ ಕೈಗೊಳ್ಳಲಾಯಿತು. ಪಡುಬಿದ್ರಿ ಬೂ ್ಲಫ್ಲಾೃಗ್ ಬೀಚ್ ಉದ್ಘಾಟನಾ ಸಮಾರಂಭಕ್ಕೆ ತಾಪಂ ಸದಸ್ಯರನ್ನು ಆಮಂತ್ರಿಸದ ಬಗ್ಗೆ ನೀತಾ ಗುರುರಾಜ್ ಅಳಲು ತೋಡಿಕೊಂಡರು. ಈ ಕುರಿತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ನೋಟಿಸ್ ನೀಡಲು ತೀರ್ಮಾನಿಸಲಾಯಿತು.

    ತ್ರಿಸ್ತರ ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ತಾಪಂ ಸ್ಥಾನ ರದ್ದು ಮಾಡುವ ಬಗ್ಗೆ ಕೇಂದ್ರ ಸರ್ಕಾರವೇ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ರಾಜ್ಯ ಸರ್ಕಾರದಿಂದ ಈ ಬಗ್ಗೆ ನಿರ್ಧಾರವಾಗಿಲ್ಲ. ಕಾಪು ಕ್ಷೇತ್ರದ ತಾಪಂ ಸದಸ್ಯರಿಗೆ ಶಾಸಕರ ವಿಶೇಷ ಪ್ಯಾಕೇಜ್‌ನಡಿ ತಲಾ 5 ಲಕ್ಷ ರೂ. ಅನುದಾನ ನೀಡಲಾಗುವುದು. ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಕುರ್ಕಾಲು ಅಣೆಕಟ್ಟಿನಿಂದ ಕಾಪು ಪುರಸಭೆಗೆ ನೀರು ಸರಬರಾಜು ಮಾಡುವ ಯೋಜನೆ ಟೆಂಡರ್ ಹಂತದಲ್ಲಿದೆ. ಈ ಯೋಜನೆಯಡಿ ಕುರ್ಕಾಲು, ಇನ್ನಂಜೆ, ಕೋಟೆ ಹಾಗೂ ಕಟಪಾಡಿ ಗ್ರಾಪಂಗಳಿಗೂ ನೀರು ಪೂರೈಕೆ ಮಾಡಬಹುದು. ವಾರಾಹಿ ಯೋಜನೆಯಿಂದಲೂ ಮುಂದಿನ ಹಂತದಲ್ಲಿ ಕಾಪು ಕ್ಷೇತ್ರಕ್ಕೆ ನೀರು ಪೂರೈಕೆಗೆ ಪ್ರಯತ್ನಿಸಲಾಗುವುದು.
    ಲಾಲಾಜಿ ಆರ್.ಮೆಂಡನ್, ಕಾಪು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts