More

    ಅವಧಿಗೆ ಮೊದಲೇ ಮಾರುಕಟ್ಟೆಗೆ ಬಂತು ಮಟ್ಟುಗುಳ್ಳ

    ಹೇಮನಾಥ ಪಡುಬಿದ್ರಿ ಕಾಪು

    ಸಂತ ವಾದಿರಾಜರ ಮಹಿಮೆಯ ಫಲವೆಂದೇ ಕರೆಯಲ್ಪಡುವ, ಜಿಐ ಮಾನ್ಯತೆಯೊಂದಿಗೆ ಪೇಟೆಂಟ್ ಹೊಂದಿರುವ ಪ್ರಾಪಂಚಿಕವಾಗಿ ಪ್ರಸಿದ್ಧಿ ಪಡೆದಿರುವ ಮಟ್ಟುಗುಳ್ಳ ಈ ಬಾರಿ ಅವಧಿಗಿಂತ ಮೊದಲೇ ಮಾರುಕಟ್ಟೆ ಪ್ರವೇಶಿಸಿದೆ.

    ಕಾಪು ತಾಲೂಕಿನ ಕೈಪುಂಜಾಲು, ಕಟಪಾಡಿ, ಮಟ್ಟು, ಕೋಟೆ ಪ್ರದೇಶಗಳಲ್ಲಿ ಬೆಳೆಯುವ ವಾರ್ಷಿಕ ವಿಶೇಷ ಬೆಳೆ ಮಟ್ಟುಗುಳ್ಳ ಈ ಬಾರಿ ಪ್ರಾಕೃತಿಕ ವಿಕೋಪದಿಂದ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾದರೂ, ಹಡಿಲು ಬಿಟ್ಟಿರುವ ಗದ್ದೆಗಳಲ್ಲಿ ಅವಧಿಗಿಂತ ಮೊದಲು ಬೆಳೆದ ಬೆಳೆ ನವೆಂಬರ್‌ನಲ್ಲಿಯೇ ಮಾರಾಟವಾಗುತ್ತಿದೆ.
    ಹಿಂದೆಲ್ಲ ಏಣಿಲು ಭತ್ತದ ಬೆಳೆ ಕಟಾವಿನ ಬಳಿಕ ಅಂದರೆ ಸೆಪ್ಟೆಂಬರ್‌ನಲ್ಲಿ ಮಟ್ಟುಗುಳ್ಳ ಸಸಿ ನಾಟಿ ಮಾಡಿ, ಡಿಸೆಂಬರ್ ಅಂತ್ಯದಲ್ಲಿ ಕಾಯಿ ಬರುತ್ತಿತ್ತು. ಆದರೆ ಹಲವು ಸಮಸ್ಯೆಗಳಿಂದ ಇತ್ತೀಚಿನ ವರ್ಷಗಳಲ್ಲಿ ಭತ್ತದ ಬೆಳೆಯಿಂದ ವಿಮುಖರಾದ ರೈತರು ಜಮೀನನ್ನು ಹಡಿಲು ಬಿಡುವಂತಾಗಿದೆ. ಪರ್ಯಾಯವಾಗಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿ ಆಗಸ್ಟ್ ತಿಂಗಳಿನಲ್ಲಿಯೇ ಬೆಳೆಗಾರರು ಗುಳ್ಳ ಸಸಿ ನಾಟಿ ಮಾಡುತ್ತಿರುವ ಪರಿಣಾಮ ನವೆಂಬರ್‌ನಲ್ಲಿಯೇ ಅದು ಬೆಳೆಗಾರರ ಸಂಘದ ಮೂಲಕ ಮಾರುಕಟ್ಟೆಗೆ ಹರಿದು ಬರುತ್ತಿದೆ. ಈ ಬಾರಿಯ ಪ್ರಾಕೃತಿಕ ವಿಕೋಪದಿಂದ ಸೆಪ್ಟೆಂಬರ್‌ನಲ್ಲಿ ನಾಟಿ ಮಾಡಿದ ಮಟ್ಟುಗುಳ್ಳದ ಬೆಳೆಯು ಪ್ರವಾಹಕ್ಕೆ ತತ್ತರಿಸಿ ಅಪಾರ ಪ್ರಮಾಣದಲ್ಲಿ ನಾಶವಾಗಿ ಬೆಳೆಗಾರರು ತೊಂದರೆ ಅನುಭವಿಸಿದ್ದರು. ನಾಶ ಹೊಂದಿದ ಗಿಡಗಳನ್ನು ತೆರವು ಮಾಡಿ ಮತ್ತೆ ನಾಟಿ ಮಾಡಿದ್ದಾರೆ.

    ಅವಧಿಗಿಂತ ಮೊದಲೇ ನಾಟಿ ಮಾಡಿರುವ 40 ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆ ಪ್ರಸ್ತುತ 600 ಕೆ.ಜಿ.ಯಷ್ಟು ಬೆಳೆಗಾರರ ಸಂಕ್ಕೆ ಬರುತ್ತಿದೆ. ಸಂಘದ ಮೂಲಕ ಉಡುಪಿ, ಮಂಗಳೂರು ಹಾಗೂ ಸ್ಥಳೀಯವಾಗಿ ಮಾರುಕಟ್ಟೆಗಳಿಗೆ ಪೂರೈಕೆಯಾಗುತ್ತಿರುವ ಗುಳ್ಳ ಮಾರುಕಟ್ಟೆಗಳಲ್ಲಿ ಕೆ.ಜಿ.ಗೆ 120ರಿಂದ 130 ರೂ. ರೇಟ್ ಹೊಂದಿದೆ. ಜಿಐ ಮಾನ್ಯತೆಯೊಂದಿಗೆ ಪೇಟೆಂಟ್ ಪಡೆದಿರುವ ಮಟ್ಟುಗುಳ್ಳಕ್ಕೆ ಮುಂಬೈ, ಬೆಂಗಳೂರು ಸೇರಿದಂತೆ ದೇಶ ವಿದೇಶಗಳಲ್ಲಿಯೂ ಬೇಡಿಕೆ ವೃದ್ಧಿಸುತ್ತಿದೆ.

    ಅವಧಿಗಿಂತ ಮೊದಲು 40 ಎಕರೆ ಹಾಗೂ ಏಣಿಲು ಭತ್ತ ಕಟಾವಿನ ಬಳಿಕ 70 ಎಕರೆ ಸೇರಿ 110 ಎಕರೆ ಪ್ರದೇಶದಲ್ಲಿ ಮಟ್ಟುಗುಳ್ಳ ಬೆಳೆಯಲಾಗಿದೆ. ಹೆಚ್ಚಿನ ರೈತರು ಆಧುನಿಕ ಕೃಷಿ ಪದ್ಧತಿ ಬಳಕೆ ಮಾಡಿ ಗುಳ್ಳ ಬೆಳೆಯಲಾರಂಭಿಸಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಫಸಲು ನಿರೀಕ್ಷೆಯಿದೆ. ಪ್ರಸ್ತುತ ಬೆಳೆಗಾರರಿಂದ ಕೆ.ಜಿ.ಗೆ 100 ರೂ.ನಲ್ಲಿ ಗುಳ್ಳ ಖರೀದಿ ಮಾಡಲಾಗುತ್ತಿದೆ. ಡಿಸೆಂಬರ್‌ನಲ್ಲಿ ಹೆಚ್ಚಿನ ಫಸಲು ಮಾರಾಟಕ್ಕೆ ಲಭ್ಯವಾಗಲಿದೆ. ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಬೆಳೆಗಾರರಿಗೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಸಹಿತ ತೋಟಗಾರಿಕಾ ಇಲಾಖೆಗೆ ಮನವಿ ಮಾಡಲಾಗಿದೆ. ಆದರೆ ಈವರೆಗೂ ಪರಿಹಾರ ದೊರೆತಿಲ್ಲ.
    – ದಯಾನಂದ ಬಂಗೇರ
    ಅಧ್ಯಕ್ಷ, ಮಟ್ಟುಗುಳ್ಳ ಬೆಳೆಗಾರರ ಸಂಘ

    ಪ್ರಾಕೃತಿಕ ವಿಕೋಪದಿಂದ ಮಟ್ಟುಗುಳ್ಳದ ಬೆಳೆ ಹಾನಿಗೊಂಡಿರುವ ಬಗ್ಗೆ ಬೆಳೆಗಾಗರ ಸಂಘದ ನೇತೃತ್ವದಲ್ಲಿ 55 ಬೆಳೆಗಾರರಿಂದ ಪರಿಹಾರಕ್ಕಾಗಿ ಅರ್ಜಿಗಳು ಬಂದಿವೆ. ಕಂದಾಯ ಅಧಿಕಾರಿಗಳ ವರದಿ ಪ್ರಕಾರ, 18 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಜಿಲ್ಲಾಧಿಕಾರಿ ಸಹಿತ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಟ್ಟುಗುಳ್ಳವನ್ನು ವಿಶೇಷ ವಾರ್ಷಿಕ ಬೆಳೆ ಎಂದು ಪರಿಗಣಿಸಿ ಪರಿಹಾರದ ವಿಶೇಷ ಪ್ಯಾಕೇಜ್ ನೀಡುವಂತೆ ಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪರಿಹಾರ ನಿರೀಕ್ಷಿಸಲಾಗಿದೆ.
    – ಹೇಮಂತ್ ಕುಮಾರ್
    ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts